ಪುಣೆ: ಕರ್ನಾಟಕದ ಸುವನಾ ಸಿ.ಭಾಸ್ಕರ್ ಮತ್ತು ಖುಷಿ ದಿನೇಶ್ ಅವರು ರಾಷ್ಟ್ರೀಯ ಸಬ್ ಜೂನಿಯರ್ ಮತ್ತು ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾರೆ.
ಭಾನುವಾರ 50 ಮೀಟರ್ಸ್ ಬಟರ್‌ಫ್ಲೈ ವಿಭಾಗದಲ್ಲಿ ದಾಖಲೆಯೊಂದಿಗೆ ಚಿನ್ನ ಜಯಿಸಿದ್ದ ಸುವನಾ, ಸೋಮವಾರವೂ ಪಾರಮ್ಯ ಮುಂದುವರಿಸಿದರು.
ಮಹಿಳೆಯರ 200 ಮೀಟರ್ಸ್ ಮೆಡ್ಲೆ ವಿಭಾಗದಲ್ಲಿ 2 ನಿಮಿಷ 31.50 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿ ಮೊದಲ ಸ್ಥಾನ ತಮ್ಮದಾಗಿಸಿಕೊಂಡರು.
ಎಸ್‌ಎಫ್‌ಐನ ಕೆನಿಶಾ ಗುಪ್ತಾ (2ನಿ,31.96ಸೆ.) ಮತ್ತು ಗೋವಾದ ಶೃಂಗಿ ರಾಜೇಶ್ ಬಾಂದೇಕರ್ (2ನಿ,32.67ಸೆ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು.
ಮಹಿಳೆಯರ 200 ಮೀಟರ್ಸ್ ಫ್ರೀಸ್ಟೈಲ್ ವಿಭಾಗದಲ್ಲಿ ಖುಷಿ ದಿನೇಶ್ ಚಿನ್ನಕ್ಕೆ ಮುತ್ತಿಕ್ಕಿದರು.
ಖುಷಿ ಅವರು 2 ನಿಮಿಷ 10.94 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿದರು. ಎಸ್‌ಎಫ್‌ಐನ ರಯನಾ ಸಲದನ್ಹಾ (2ನಿ,11.06ಸೆ.) ಬೆಳ್ಳಿ ಗೆದ್ದರೆ, ದೆಹಲಿಯ ಪ್ರಾಚಿ ಟೋಕಸ್ (2ನಿ,12.13ಸೆ.) ಕಂಚಿಗೆ ತೃಪ್ತಿಪಟ್ಟರು.
ಕರ್ನಾಟಕಕ್ಕೆ ಅಗ್ರಸ್ಥಾನ: ಕರ್ನಾಟಕ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ರಾಜ್ಯದ ಖಾತೆಯಲ್ಲಿ 17 ಚಿನ್ನ, 10 ಬೆಳ್ಳಿ ಮತ್ತು 11 ಕಂಚಿನ ಪದಕಗಳಿವೆ.
ಪದಕ ಗೆದ್ದ ಕರ್ನಾಟಕದ ಸ್ಪರ್ಧಿಗಳು: ಬಾಲಕರು: 4X50 ಮೀಟರ್ಸ್ ಮೆಡ್ಲೆ: ಕರ್ನಾಟಕ (2ನಿ,22.22ಸೆ.)–1. 4X200 ಮೀ.ಫ್ರೀಸ್ಟೈಲ್: ಕರ್ನಾಟಕ (8ನಿ,00.20ಸೆ.)–1, 800 ಮೀ.ಫ್ರೀಸ್ಟೈಲ್: ಕಪಿಲ್ ಡಿ ಶೆಟ್ಟಿ (8ನಿ,52.15ಸೆ.)–3. 800 ಮೀ.ಫ್ರೀಸ್ಟೈಲ್: ಸಿ.ಜೆ.ಸಂಜಯ್ (8ನಿ,40.30ಸೆ.)–3.
ಬಾಲಕಿಯರು: 4X50 ಮೀಟರ್ಸ್ ಮೆಡ್ಲೆ: ಕರ್ನಾಟಕ (2ನಿ,33.55ಸೆ.)–3. ಮಹಿಳೆಯರು: 200 ಮೀ. ಮೆಡ್ಲೆ: ಸುವನಾ ಭಾಸ್ಕರ್ (2ನಿ,31.50ಸೆ.)–1.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.