ಬಾಸೆಲ್, ಸ್ವಿಟ್ಜರ್‌ಲೆಂಡ್: ಅಗ್ರಶ್ರೇಯಾಂಕದ ಆಟಗಾರ್ತಿಯ ಎದುರು ದಿಟ್ಟ ಆಟ ಆಡಲು ವಿಫಲವಾದ ಭಾರತದ ರಿಯಾ ಮುಖರ್ಜಿ, ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಚೆನ್ ಯೂಫಿ 21–10, 21–8ರಲ್ಲಿ ಭಾರತದ ಆಟಗಾರ್ತಿಯನ್ನು ಮಣಿಸಿದರು. ಈ ಹೋರಾಟ ಕೇವಲ 25 ನಿಮಿಷಗಳಲ್ಲಿ ಮುಗಿಯಿತು.
ಶ್ರೇಯಾಂಕ ರಹಿತ ಆಟಗಾರ್ತಿ ರಿಯಾ, ಮೊದಲ ಗೇಮ್‌ನ ಶುರುವಿನಲ್ಲಿ ಎದುರಾಳಿಗೆ ಪ್ರಬಲ ಪೈಪೋಟಿ ಒಡ್ಡಿದರು. ದ್ವಿತೀಯಾರ್ಧದಲ್ಲಿ ಯೂಫಿ ಆಕರ್ಷಕ ಆಟ ಆಡಿ ನಿರಾಯಾಸವಾಗಿ ಭಾರತದ ಆಟಗಾರ್ತಿಯನ್ನು ಮಣಿಸಿದರು.
ಎರಡನೇ ಗೇಮ್‌ನಲ್ಲೂ ರಿಯಾ ಮಂಕಾದರು. ಚೀನಾದ ಆಟಗಾರ್ತಿ ಸಿಡಿಸುತ್ತಿದ್ದ ಬಲಿಷ್ಠ ಕ್ರಾಸ್‌ಕೋರ್ಟ್ ಹೊಡೆತಗಳನ್ನು ರಿಟರ್ನ್ ಮಾಡಲು ಅವರು ಪರದಾಡಿದರು.
ಮಿಶ್ರ ಡಬಲ್ಸ್ ವಿಭಾಗದಲ್ಲಿ ಕಣದಲ್ಲಿದ್ದ ಎಂ.ಆರ್.ಅರ್ಜುನ್ ಮತ್ತು ಕೆ.ಮನೀಷಾ ಅವರ ಸವಾಲು ಕೂಡಾ ಅಂತ್ಯವಾಯಿತು.
ಕ್ವಾರ್ಟರ್ ಫೈನಲ್‌ನಲ್ಲಿ ಅರ್ಜುನ್ ಮತ್ತು ಮನೀಷಾ 19–21, 16–21ರಲ್ಲಿ ಡೆನ್ಮಾರ್ಕ್‌ನ ಮಥಿಯಾಸ್ ಬೇ ಸ್ಮಿಡ್ತ್ ಮತ್ತು ರಿಕೆ ಸೋಬ್ ಎದುರು ಸೋತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.