ಲಖನೌ: ತವರಿನ ಅಭಿಮಾನಿಗಳ ಎದುರು ಆಡಿದ ಸಮೀರ್ ವರ್ಮಾ ಭಾನುವಾರ ಸೈಯದ್ ಮೋದಿ ಇಂಟರ್‌ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡರು. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಭರವಸೆಯಾಗಿದ್ದ ಸೈನಾ ನೆಹ್ವಾಲ್ ಫೈನಲ್‌ನಲ್ಲಿ ನಿರಾಸೆ ಕಂಡರು.
ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಸಮೀರ್ 16–21, 21–19, 21–14ರಲ್ಲಿ ಚೀನಾದ ಲು ಗುವಾಂಗ್‌ಜು ಅವರನ್ನು ಸೋಲಿಸಿದರು. ಇದರೊಂದಿಗೆ ಸತತ ಎರಡನೇ ಬಾರಿ ಟ್ರೋಫಿ ಗೆದ್ದ ಸಾಧನೆ ಮಾಡಿದರು.
ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 16ನೇ ಸ್ಥಾನದಲ್ಲಿರುವ ಸಮೀರ್, ಮೊದಲ ಗೇಮ್‌ನಲ್ಲಿ ನಿರಾಸೆ ಕಂಡರು. ಇದರಿಂದ ಎದೆಗುಂದದ ಅವರು ನಂತರ ಪರಿಣಾಮಕಾರಿ ಆಟ ಆಡಿ ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು.
ಎರಡನೇ ಗೇಮ್‌ನಲ್ಲಿ ಉಭಯ ಆಟಗಾರರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ದೀರ್ಘ ರ‍್ಯಾಲಿಗಳನ್ನು ಆಡಿದ ಭಾರತದ ಆಟಗಾರ 10–7ರಿಂದ ಮುಂದಿದ್ದರು. ದ್ವಿತೀಯಾರ್ಧದಲ್ಲಿ ಲು ಚುರುಕಿನ ಆಟ ಆಡಿ 18–18ರಿಂದ ಸಮಬಲ ಸಾಧಿಸಿದರು. ಈ ಹಂತದಲ್ಲಿ ಸಮೀರ್ ಗುಣಮಟ್ಟದ ಸಾಮರ್ಥ್ಯ ತೋರಿ ಗೆಲುವಿನ ತೋರಣ ಕಟ್ಟಿದರು.
ಮೂರನೇ ಗೇಮ್‌ನ ಮೊದಲಾರ್ಧದಲ್ಲಿ ಇಬ್ಬರೂ ತುರುಸಿನ ಪೈಪೋಟಿ ನಡೆಸಿದರು. ವಿರಾಮದ ನಂತರ ಸಮೀರ್ ಅಬ್ಬರಿಸಿದರು. ಅಮೋಘ ಕ್ರಾಸ್‌ಕೋರ್ಟ್ ಸ್ಮ್ಯಾಷ್ ಮತ್ತು ಚುರುಕಿನ ಡ್ರಾಪ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿ ಸಂಭ್ರಮಿಸಿದರು.
ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಸೈನಾ 12–21, 8–21ರಲ್ಲಿ ಚೀನಾದ ಹಾನ್ ಯೂ ಎದುರು ಸೋತರು.
ಪುರುಷರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ 11–21, 20–22ರಲ್ಲಿ ಇಂಡೊನೇಷ್ಯಾದ ಫಜರ್ ಅಲ್ಫಿಯಾನ್ ಮತ್ತು ಮಹಮ್ಮದ್ ರಿಯಾನ್ ಅರ್ಡಿಯಾಂಟೊ ವಿರುದ್ಧ ಪರಾಭವಗೊಂಡರು.
ಮಹಿಳೆಯರ ಡಬಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಎನ್.ಸಿಕ್ಕಿ ರೆಡ್ಡಿ 15–21, 13–21ರಲ್ಲಿ ಮಲೇಷ್ಯಾದ ಚೌ ಮೀ ಕುವಾನ್ ಮತ್ತು ಲೀ ಮೆಂಗ್ ಯೀನ್ ಎದುರು ಮಣಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.