ADVERTISEMENT

ಡಬ್ಲ್ಯುಟಿಟಿ ಚಾಂಪಿಯನ್‌ಶಿಪ್: ಕ್ವಾರ್ಟರ್‌ಗೆ ಮಣಿಕಾ

ಪಿಟಿಐ
Published 26 ಅಕ್ಟೋಬರ್ 2024, 15:14 IST
Last Updated 26 ಅಕ್ಟೋಬರ್ 2024, 15:14 IST
<div class="paragraphs"><p>ಮಣಿಕಾ ಬಾತ್ರಾ</p></div>

ಮಣಿಕಾ ಬಾತ್ರಾ

   

–ಪಿಟಿಐ ಚಿತ್ರ

ನವದೆಹಲಿ: ಭಾರತದ ಟೇಬಲ್‌ ಟೆನಿಸ್‌ ತಾರೆ ಮಣಿಕಾ ಬಾತ್ರಾ ಅವರು ಫ್ರಾನ್ಸ್‌ನ ಮಾಂಟ್‌ಪೆಲೀರ್‌ನಲ್ಲಿ ನಡೆಯುತ್ತಿರುವ ಡಬ್ಲ್ಯುಟಿಟಿ ಚಾಂಪಿಯನ್ಸ್‌ ಮಹಿಳೆಯರ ಸಿಂಗಲ್ಸ್‌ನಲ್ಲಿ ವಿಶ್ವದ 14ನೇ ಕ್ರಮಾಂಕದ ರೊಮೇನಿಯಾದ ಬರ್ನಾಡೆಟ್ ಸ್ಜೋಕ್ಸ್‌ಗೆ ಆಘಾತ ನೀಡಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ADVERTISEMENT

ಶುಕ್ರವಾರ ರಾತ್ರಿ ನಡೆದ 16ರ ಘಟ್ಟದ ಹಣಾಹಣಿಯಲ್ಲಿ ವಿಶ್ವದ 30ನೇ ರ‍್ಯಾಂಕ್‌ನ ಭಾರತದ ಆಟಗಾರ್ತಿ ಮಣಿಕಾ 3-1 (11-9, 6-11, 13-11, 11-9)ರಿಂದ ಎಂಟನೇ ಶ್ರೇಯಾಂಕದ ಸ್ಜೋಕ್ಸ್‌ ಅವರನ್ನು ಹಿಮ್ಮೆಟ್ಟಿಸಿದರು. ಅವರು ಕಾರ್ಟರ್‌ ಫೈನಲ್‌ನಲ್ಲಿ ಚೀನಾದ ಕಿಯಾನ್ ತಿಯಾನಿ ಅವರನ್ನು ಎದುರಿಸಲಿದ್ದಾರೆ.

29 ನಿಮಿಷ ನಡೆದ ಪಂದ್ಯದ ಮೊದಲ ಗೇಮ್‌ನಲ್ಲಿ ಮಣಿಕಾ ಮೇಲುಗೈ ಸಾಧಿಸಿದರೆ, ಎರಡನೇ ಗೇಮ್‌ನಲ್ಲಿ ಸ್ಜೋಕ್ಸ್‌ ತಿರುಗೇಟು ನೀಡಿದರು. ಸಮಬಲದ ಪೈಪೋಟಿ ಕಂಡ ಮೂರನೇ ಗೇಮ್‌ನಲ್ಲಿ ಮತ್ತೆ ಭಾರತದ ಆಟಗಾರ್ತಿ ಹಿಡಿತ ಸಾಧಿಸಿದರು. ಚುರುಕಿನ ಆಟ ಮುಂದುವರಿಸಿದ ಮಣಿಕಾ ನಾಲ್ಕನೇ ಗೇಮ್‌ ಅನ್ನು ವಶ ಪಡೆದು, ಮುಂದಿನ ಸುತ್ತು ಪ್ರವೇಶಿಸಿದರು.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲೂ ಮಣಿಕಾ ಮತ್ತು ಸ್ಜೋಕ್ಸ್‌ ಮುಖಾಮುಖಿಯಾಗಿದ್ದರು. ತಂಡ ವಿಭಾಗದ ಸ್ಪರ್ಧೆಯಲ್ಲಿ ಅಲ್ಲೂ ಮಣಿಕಾ ಅವರು ರೊಮೇನಿಯಾದ ಆಟಗಾರ್ತಿಯನ್ನು ಮಣಿಸಿದ್ದರು. ಆ ಪಂದ್ಯವನ್ನು ಭಾರತ 3–2ರಿಂದ ಜಯ ಸಾಧಿಸಿತ್ತು.

ಮಣಿಕಾ ಆರಂಭಿಕ ಸುತ್ತಿನ ಪಂದ್ಯದಲ್ಲಿ 3-0 (11-4, 11-8, 12-10) ರಿಂದ ಅಮೆರಿಕದ ಲಿಲಿ ಝಾಂಗ್ ಅವರನ್ನು ಸೋಲಿಸಿದ್ದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಮತ್ತೊಬ್ಬ ಆಟಗಾರ್ತಿ ಶ್ರೀಜಾ ಅಕುಲಾ 2-3 (11-6, 7-11, 1-11, 11-8, 8-11) ರಿಂದ ವಿಶ್ವದ 13ನೇ ಕ್ರಮಾಂಕದ ಆ್ಯಡ್ರಿಯಾನಾ ಡಯಾಜ್ (ಪೋರ್ಟೊ ರಿಕೊ) ವಿರುದ್ಧ ಆರಂಭಿಕ ಸುತ್ತಿನಲ್ಲಿ ಸೋತು ಹೊರಬಿದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.