ನವದೆಹಲಿ: ಉಜ್ಬೆಕಿಸ್ತಾನದ ತಾಷ್ಕೆಂಟ್‌ನಲ್ಲಿ 2025ರ ಏಷ್ಯನ್ ಯೂತ್ ಕ್ರೀಡಾಕೂಟ ನಡೆಯಲಿದೆ ಎಂದು ಏಷ್ಯನ್ ಪ್ಯಾರಾಲಿಂಪಿಕ್ ಸಮಿತಿ (ಎಪಿಸಿ) ಗುರುವಾರ ತಿಳಿಸಿದೆ. ಎಪಿಸಿಯ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ನಡೆದ ಬಿಡ್ಡಿಂಗ್‌ನ ನಂತರ ಈ ನಿರ್ಧಾರ ಪ್ರಕಟಿಸಲಾಯಿತು.
ಕ್ರೀಡಾಕೂಟ ಆಯೋಜಿಸಲು ಅವಕಾಶ ಕೋರಿ ಸೆಪ್ಟೆಂಬರ್ ಕೊನೆ ಮತ್ತು ಅಕ್ಟೋಬರ್ ಆರಂಭದಲ್ಲಿ ಕ್ರೀಡಾ ಮತ್ತು ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಉಜ್ಬೆಕಿಸ್ತಾನ ಸರ್ಕಾರ ಬಿಡ್ ಸಲ್ಲಿಸಿತ್ತು. ಆ ದೇಶಕ್ಕೆ ಆತಿಥ್ಯದ ಅವಕಾಶ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
’ಅನೇಕ ಪ್ರಬಲ ಬಿಡ್‌ಗಳು ಸಲ್ಲಿಕೆಯಾಗಿದ್ದವು. ಕ್ರೀಡಾಕೂಟ ಆಯೋಜನೆಗೆ ಮುಂದೆ ಬಂದ ಎಲ್ಲರಿಗೂ ಕೃತಜ್ಞತೆಗಳು ಸಲ್ಲಬೇಕು. ಬಿಡ್ಡಿಂಗ್‌ನಲ್ಲಿ ಉಜ್ಬೆಕಿಸ್ತಾನ ಯಶಸ್ವಿಯಾಗಿದೆ‘ ಎಂದು ಎಪಿಸಿ ಅಧ್ಯಕ್ಷ ಮಜೀದ್ ರಶೀದ್ ತಿಳಿಸಿದರು.
’ನಮ್ಮದು ಮಹತ್ವಾಕಾಂಕ್ಷೆ ಇರುವ ರಾಷ್ಟ್ರ. ಏಷ್ಯನ್ ಗೇಮ್ಸ್ ಮತ್ತು ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ದೇಶದಿಂದ ಪಾಲ್ಗೊಳ್ಳುವವರ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ಗೆಲ್ಲುವ ಪದಕಗಳ ಸಂಖ್ಯೆಯೂ ಹೆಚ್ಚುತ್ತಿದೆ. 2025ರ ಕ್ರೀಡಾಕೂಟದ ಯಶಸ್ವಿಗಾಗಿ ಈಗಲೇ ಕಾರ್ಯಯೋಜನೆಗಳನ್ನು ರೂಪಿಸಲಾಗುವುದು. ಏಷ್ಯಾದ ಸಮರ್ಥ ಪ್ಯಾರಾ ಅಥ್ಲೀಟ್‌ಗಳನ್ನು ಸ್ವಾಗತಿಸಲು ಖುಷಿ ಎನಿಸುತ್ತದೆ‘ ಎಂದು ಉಜ್ಬೆಕಿಸ್ತಾನ ಪ್ಯಾರಾಲಿಂಪಿಕ್ ಸಮಿತಿಯ ಅಧ್ಯಕ್ಷ ಮುಖ್ತೊರ್ಖಮ್ ತಷ್ಕೊಜೆವ್ ಹೇಳಿದರು.
ಈ ಸಾಲಿನ ಏಷ್ಯನ್ ಯೂತ್ ಪ್ಯಾರಾ ಗೇಮ್ಸ್ ಡಿಸೆಂಬರ್ ಎರಡರಿಂದ ಆರರ ವರೆಗೆ ಬಹರೇನ್‌ನಲ್ಲಿ ನಡೆಯಲಿದೆ. 800ರಷ್ಟು ಯುವ ಅಥ್ಲೀಟ್‌ಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.