ಬರ್ಮಿಂಗ್‌ಹ್ಯಾಮ್: ಭಾರತದ ಹಿಮಾ ದಾಸ್ ಅವರು ಮಹಿಳೆಯರ 200 ಮೀ. ಓಟದಲ್ಲಿ ಸೆಮಿಫೈನಲ್ ಪ್ರವೇಶಿಸಿದರು. ಗುರುವಾರ ನಡೆದ ಹೀಟ್ಸ್‌ನಲ್ಲಿ 23.42 ಸೆ.ಗಳಲ್ಲಿ ಗುರಿ ತಲುಪಿದರು.
ಐವರು ಸ್ಪರ್ಧಿಗಳು ಪಾಲ್ಗೊಂಡಿದ್ದ ಎರಡನೇ ಹೀಟ್‌ನಲ್ಲಿ (ಅರ್ಹತಾ ಹಂತ) ಓಡಿದ ಹಿಮಾ ಮೊದಲನೆಯವರಾಗಿ ಗುರಿ ತಲುಪಿದರು. ಒಟ್ಟು ಆರು ಹೀಟ್ಸ್ ನಡೆದವು. ಅಗ್ರ 16 ಅಥ್ಲೀಟ್‌ಗಳು ಸೆಮಿ ಪ್ರವೇಶಿಸಿದರು. ಮೊದಲ ಹೀಟ್‌ನಲ್ಲಿದ್ದ ನೈಜೀರಿಯದ ಫೇವರ್ ಒಫಿಲಿ (22.71 ಸೆ.) ಮತ್ತು ಜಮೈಕದ ಎಲೈನ್ ಥಾಂಪ್ಸನ್ ಹೆರಾ (22.80 ಸೆ.) ಅವರು ಒಳಗೊಂಡಂತೆ ಆರು ಅಥ್ಲೀಟ್‌ಗಳು ಹಿಮಾ ಅವರಿಗಿಂತ ಉತ್ತಮ ಸಮಯ ಕಂಡುಕೊಂಡರು.
ಹೈಜಂಪ್‌ನಲ್ಲಿ ಭಾರತಕ್ಕೆ ಕಂಚು: ತೇಜಸ್ವಿನ್ ಶಂಕರ್ ಐತಿಹಾಸಿಕ ಜಿಗಿತ
ಭಾರತ ಅಥ್ಲೆಟಿಕ್ಸ್ ತಂಡದಲ್ಲಿ ಕೊನೆಯ ಕ್ಷಣದಲ್ಲಿ ಸ್ಥಾನ ಪಡೆದಿದ್ದ ಹೈಜಂಪ್ ಸ್ಪರ್ಧಿ ತೇಜಸ್ವಿನ್ ಶಂಕರ್ ಅವರು ಕಂಚು ಗೆದ್ದು ಐತಿಹಾಸಿಕ ಸಾಧನೆ ಮಾಡಿದರು.
ಬುಧವಾರ ರಾತ್ರಿ ನಡೆದ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಅವರು 2.22 ಮೀ. ಎತ್ತರ ಜಿಗಿಯುವಲ್ಲಿ ಯಶಸ್ವಿಯಾದರು. ಕಾಮನ್‌ವೆಲ್ತ್ ಕೂಟದ ಹೈಜಂಪ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಗೌರವ ಅವರಿಗೆ ಒಲಿಯಿತು.
1970ರ ಎಡಿನ್‌ಬರೋ ಕೂಟದಲ್ಲಿ ಭೀಮ್ ಸಿಂಗ್ ಅವರು 2.06 ಮೀ. ಎತ್ತರ ಜಿಗಿದದ್ದು, ಭಾರತದ ಅಥ್ಲೀಟ್‌ವೊಬ್ಬರ ಇದುವರೆಗಿನ ಅತ್ಯುತ್ತಮ ಸಾಧನೆ ಎನಿಸಿಕೊಂಡಿತ್ತು.
ನ್ಯೂಜಿಲೆಂಡ್‌ನ ಹಾಮಿಷ್ ಕೆರ್ ಮತ್ತು ಆಸ್ಟ್ರೇಲಿಯಾದ ಬ್ರೆಂಡನ್ ಸ್ಟಾರ್ಕ್ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಗೆದ್ದರು. ಇಬ್ಬರೂ 2.25 ಮೀ. ಜಿಗಿದರು. ಆದರೆ ‘ಕೌಂಟ್‌ಬ್ಯಾಕ್’ನಲ್ಲಿ ಚಿನ್ನ ಹಾಮಿಷ್ ಪಾಲಾಯಿತು.
23 ವರ್ಷದ ಶಂಕರ್ ಮೊದಲ ಎರಡು ಅವಕಾಶಗಳಲ್ಲಿ 2.25 ಮೀ. ಜಿಗಿಯಲು ವಿಫಲರಾದರು. ಬೆಳ್ಳಿ ಗೆಲ್ಲುವ ಗುರಿಯೊಂದಿಗೆ ಕೊನೆಯ ಪ್ರಯತ್ನದಲ್ಲಿ ಅವರು 2.28 ಮೀ. ಎತ್ತರ ಜಿಗಿಯಲು ಪ್ರಯತ್ನಿಸಿದರೂ ಯಶಸ್ಸು ಸಿಗಲಿಲ್ಲ.
ಬಹಾಮಸ್‌ನ ಡೊನಾಲ್ಡ್ ಥಾಮಸ್ ಮತ್ತು ಇಂಗ್ಲೆಂಡ್‌ನ ಜೊಯೆಲ್ ಕ್ಲಾರ್ಕ್ ಅವರೂ 2.22 ಮೀ. ಸಾಧನೆ ಮಾಡಿದ್ದರು. ಆದರೆ ಇವರಿಬ್ಬರು ತಮ್ಮ ಎರಡನೇ ಪ್ರಯತ್ನದಲ್ಲಿ ಯಶ ಕಂಡರೆ, ಶಂಕರ್ ಮೊದಲ ಪ್ರಯತ್ನದಲ್ಲೇ ಈ ಎತ್ತರ ಜಿಗಿದರು. ‘ಕೌಂಟ್ ಬ್ಯಾಕ್’ನಲ್ಲಿ ಕಂಚು ಭಾರತದ ಅಥ್ಲೀಟ್ ಪಾಲಾಯಿತು.
2018ರಲ್ಲಿ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕೂಟದಲ್ಲಿ ಅವರು 2.24 ಮೀ. ಎತ್ತರ ಜಿಗಿದು ಆರನೇ ಸ್ಥಾನ ಗಳಿಸಿದ್ದರು. ಈ ಋತುವಿನಲ್ಲಿ ಅವರ ಶ್ರೇಷ್ಠ ಸಾಧನೆ 2.27 ಮೀ. ಹಾಗೂ ವೈಯಕ್ತಿಕ ಶ್ರೇಷ್ಠ ಸಾಧನೆ 2.29 ಮೀ. ಆಗಿದೆ.
ಕೊನೆಯ ಕ್ಷಣದಲ್ಲಿ ಸ್ಥಾನ: ಕೂಟ ಆರಂಭಗೊಳ್ಳಲು ಐದು ದಿನಗಳು ಇರುವಾಗಲಷ್ಟೆ ಶಂಕರ್, ಕಾಮನ್‌ವೆಲ್ತ್‌ನಲ್ಲಿ ಪಾಲ್ಗೊಳ್ಳುವುದು ಖಚಿತವಾಗಿತ್ತು.
ಅಮೆರಿಕದಲ್ಲಿ ಶಿಕ್ಷಣ ಪಡೆಯುತ್ತಿರುವ ಅವರು ಅಲ್ಲಿ ನಡೆದ ಎನ್‌ಸಿಎಎ ಚಾಂಪಿಯನ್‌ಷಿಪ್‌ನಲ್ಲಿ 2.27 ಮೀ. ಸಾಧನೆ ಮಾಡಿದ್ದರು. ಆ ಮೂಲಕ ಕಾಮನ್‌ವೆಲ್ತ್ ಕೂಟದ ಅರ್ಹತೆಗೆ ಭಾರತ ಅಥ್ಲೆಟಿಕ್ ಫೆಡರೇಷನ್ ನಿಗದಿಪಡಿಸಿದ್ದ ಎತ್ತರ ಕಂಡುಕೊಂಡಿದ್ದರು.
ಆದರೂ ಅವರ ಹೆಸರನ್ನು ಭಾರತ ಅಥ್ಕೆಟಿಕ್ಸ್ ತಂಡದಲ್ಲಿ ಸೇರ್ಪಡೆ ಮಾಡಿರಲಿಲ್ಲ. ಅದನ್ನು ಪ್ರಶ್ನಿಸಿದ್ದ ಶಂಕರ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದರ ನಂತರ ಶಂಕರ್ ಅವರನ್ನು ಆರೋಕ್ಯ ರಾಜೀವ ಅವರ ಸ್ಥಾನದಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಎಎಫ್‌ಐ ಕೋರ್ಟ್‌ಗೆ ತಿಳಿಸಿತ್ತು.
ತೇಜಸ್ವಿನ್ ಅವರ ಹೆಸರನ್ನು ತಡವಾಗಿ ನೋಂದಾಯಿಸಲಾಗಿದೆ ಎಂದು ಕಾಮನ್‌ವೆಲ್ತ್ ಗೇಮ್ಸ್ ಫೆಡರೇಷನ್ (ಸಿಜಿಎಫ್) ತಿರಸ್ಕರಿಸಿತ್ತು. ಸುಮಾರು ಒಂದು ತಿಂಗಳ ಪ್ರಹಸನದ ಬಳಿಕ, ಭಾರತ ಒಲಿಂಪಿಕ್ ಸಂಸ್ಥೆಯು ತೇಜಸ್ವಿನ್ ಅವರನ್ನು ತಂಡಕ್ಕೆ ಸೇರಿಸಲು ಯಶಸ್ವಿಯಾಗಿತ್ತು.
ಮನ್‌ಪ್ರೀತ್‌ಗೆ ನಿರಾಸೆ: ಮಹಿಳೆಯರ ಷಾಟ್‌ಪಟ್ ಸ್ಪರ್ಧೆಯಲ್ಲಿ ಭಾರತದ ಮನ್‌ಪ್ರೀತ್ ಕೌರ್ ಅವರು 15.69 ಮೀ. ಸಾಧನೆಯೊಂದಿಗೆ 12ನೇ ಹಾಗೂ ಕೊನೆಯ ಸ್ಥಾನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.