ಹೈದರಾಬಾದ್: ‘ಡುಬ್ಕಿ ಕಿಂಗ್’ ಪ್ರದೀಪ್ ನರ್ವಾಲ್ ಸಾರಥ್ಯದಲ್ಲಿ ಹೊಸ ಹುರುಪಿನಲ್ಲಿರುವ ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿದೆ. ಇಲ್ಲಿಯ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರದಿಂದ ನಡೆಯುವ 11ನೇ ಆವೃತ್ತಿಯ ಲೀಗ್, ಕಬಡ್ಡಿ ಪ್ರಿಯರಿಗೆ ರಸದೌತಣ ಉಣಬಡಿಸಲಿದೆ.
ಒಟ್ಟು ಮೂರು ನಗರಗಳಲ್ಲಿ ಲೀಗ್ ಹಂತದ 132 ಪಂದ್ಯಗಳು ಆಯೋಜನೆಯಾಗಿವೆ. ಮೊದಲ ಲೆಗ್ ಪಂದ್ಯಗಳು ಇಲ್ಲಿ ಅಕ್ಟೋಬರ್ 18ರಿಂದ ನವೆಂಬರ್ 9ರವರೆಗೆ ನಡೆಯಲಿವೆ. ಎರಡನೇ ಲೆಗ್ ನೊಯ್ಡಾದಲ್ಲಿ ನವೆಂಬರ್ 10ರಿಂದ ಡಿಸೆಂಬರ್ 1ರವರೆಗೆ ನಡೆಯಲಿವೆ. ಮೂರನೇ ಲೆಗ್, ಡಿಸೆಂಬರ್ 3ರಿಂದ 24ರವರೆಗೆ ಪುಣೆಯ ಬಾಲೆವಾಡಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಿಗದಿಯಾಗಿದೆ. ಪ್ಲೇ ಆಫ್ ಪಂದ್ಯಗಳ ವೇಳಾಪಟ್ಟಿ ಇನ್ನೂ ಪ್ರಕಟವಾಗಿಲ್ಲ.
ಮಶಾಲ್ ಸ್ಪೋರ್ಟ್ಸ್ ಆಯೋಜಕತ್ವದಲ್ಲಿ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯುವ ಟೂರ್ನಿಯಲ್ಲಿ 12 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಲೀಗ್ ಹಂತ ‘ಡಬಲ್ ಹೆಡರ್’ (ದಿನಕ್ಕೆ ಎರಡು ಪಂದ್ಯ) ಆಗಿರಲಿದೆ.
ಟೈಟನ್ಸ್ ಸವಾಲು: ಮೊದಲ ಹಣಾಹಣಿಯಲ್ಲಿ ಬುಲ್ಸ್ ತಂಡಕ್ಕೆ ತೆಲುಗು ಟೈಟನ್ಸ್ ಎದುರಾಳಿಯಾಗಿದೆ.
ಟೂರ್ನಿಯ ಎರಡನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಮೂಲಕವೇ ಪ್ರೊ ಕಬಡ್ಡಿಗೆ ಪದಾರ್ಪಣೆ ಮಾಡಿದ್ದ ರೈಡರ್ ಪ್ರದೀಪ್ ನರ್ವಾಲ್ ಈ ಬಾರಿ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಡುವ ಭರವಸೆಯಲ್ಲಿದ್ದಾರೆ. ರೈಡಿಂಗ್‌ನಲ್ಲಿ ಅವರಿಗೆ ಅಜಿಂಕ್ಯ ಪವಾರ್, ಸುಶೀಲ್, ಜತಿನ್ ಹಾಗೂ ಜೈಭಗವಾನ್ ಸಾಥ್ ನೀಡಲಿದ್ದಾರೆ.
ರಕ್ಷಣಾ ವಿಭಾಗದಲ್ಲಿ ಸೌರಭ್ ನಂದಾಲ್ ಬುಲ್ಸ್ ತಂಡದ ದೊಡ್ಡ ಬಲ. ಆದಿತ್ಯ ಪವಾರ್ ಕೂಡ ಎದುರಾಳಿ ರೈಡರ್‌ಗಳನ್ನು ಕಟ್ಟಿಹಾಕುವ ಸಾಮರ್ಥ್ಯ ಉಳ್ಳವರು. ಟೂರ್ನಿಯ ಆರನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಬೆಂಗಳೂರು ಮತ್ತೊಮ್ಮೆ ಟ್ರೋಫಿಗೆ ಮುತ್ತಿಕ್ಕುವ ಕಾತುರದಲ್ಲಿದೆ. ಅನುಭವಿ ಕೋಚ್ ರಣಧೀರ್ ಸಿಂಗ್ ತರಬೇತಿಯೂ ತಂಡದ ನೆರವಿಗಿದೆ.
ತೆಲುಗು ಟೈಟನ್ಸ್ ಕೂಡ ಎದುರಾಳಿಗೆ ಕಠಿಣ ಸವಾಲು ಒಡ್ಡುವ ಸಾಧ್ಯತೆಯಿದೆ. ಈ ಹಿಂದೆ ಬುಲ್ಸ್ ತಂಡದಲ್ಲಿ ಆಡಿದ್ದ ಸ್ಟಾರ್ ರೈಡರ್ ಪವನ್ ಸೆಹ್ರಾವತ್ ಈ ಬಾರಿ ಟೈಟನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮಂಜೀತ್, ಚೇತನ್ ಸಾಹು, ಓಂಕಾರ್ ಪಾಟೀಲ್, ಆಶಿಶ್ ನರ್ವಾಲ್ ಪ್ರಮುಖ ರೈಡರ್‌ಗಳು. ರಕ್ಷಣಾ ವಿಭಾಗದಲ್ಲಿ ಇರಾನ್‌ನ ಮೊಹಮ್ಮದ್ ಮಲಕ್, ಅಂಕಿತ್, ಕೃಷ್ಣನ್ ಬಲ ತಂಡಕ್ಕಿದೆ. ಆ ತಂಡವು ಚೊಚ್ಚಲ ಟ್ರೋಫಿಯ ನಿರೀಕ್ಷೆಯಲ್ಲಿದೆ.
ದಿನದ ಇನ್ನೊಂದು ಪಂದ್ಯದಲ್ಲಿ ದಬಾಂಗ್ ಡೆಲ್ಲಿ– ಯು ಮುಂಬಾ ಮುಖಾಮುಖಿಯಾಗಲಿವೆ.
ಭಾಗವಹಿಸುವ 12 ತಂಡಗಳು
ಬೆಂಗಾಲ್ ವಾರಿಯರ್ಸ್, ಬೆಂಗಳೂರು ಬುಲ್ಸ್, ದಬಾಂಗ್ ಡೆಲ್ಲಿ, ಗುಜರಾತ್ ಜೈಂಟ್ಸ್, ಹರಿಯಾಣ ಸ್ಟೀಲರ್ಸ್, ಜೈಪುರ ಪಿಂಕ್ ಪ್ಯಾಂಥರ್ಸ್, ಪಟ್ನಾ ಪೈರೆಟ್ಸ್, ಪುಣೇರಿ ಪಲ್ಟನ್, ತಮಿಳು ತಲೈವಾಸ್, ತೆಲುಗು ಟೈಟನ್ಸ್, ಯು ಮುಂಬಾ, ಯುಪಿ ಯೋಧಾಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.