ಪ್ಯಾರಿಸ್: ಫ್ರಾನ್ಸ್ ರಾಜಧಾನಿಯಲ್ಲಿ ನಡೆದ ಈ ಸಲದ ಪ್ಯಾರಾಲಿಂಪಿಕ್ಸ್ ಭಾರತದ ಪಾಲಿಗೆ ಅವಿಸ್ಮರಣೀಯವಾಗಿದೆ. 29 ಪದಕಗಳನ್ನು ಗೆದ್ದು ಇತಿಹಾಸ ರಚಿಸಿದೆ. ಅದರಲ್ಲಿ 7 ಚಿನ್ನದ ಪದಕಗಳೂ ಇವೆ. ಕೆಲವು ಪ್ರಥಮ ಸಾಧನೆಗಳೂ ದಾಖಲಾಗಿದ್ದು ಈ ಬಾರಿಯ ವಿಶೇಷವಾಗಿದೆ. ಅದರಲ್ಲಿ ಇಷ್ಟೊಂದು ಚಿನ್ನದ ಪದಕ ಜಯಿಸಿರುವುದೂ ಒಂದು.
2016ರಿಂದ ಭಾರತವು ಪ್ಯಾರಾಲಿಂಪಿಕ್ಸ್‌ನಲ್ಲಿ ತನ್ನ ಅಸ್ತಿತ್ವವನ್ನು ತೋರಿಸಿಕೊಡುತ್ತಿದೆ. ಆಗ ರಿಯೊ ಡಿ ಜನೈರೊದಲ್ಲಿ ನಾಲ್ಕು ಪದಕಗಳನ್ನು ಗೆದ್ದಿತ್ತು. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 19 ಪದಕ ಗೆದ್ದು ಸಾರ್ವಕಾಲಿಕ ದಾಖಲೆ ಮಾಡಿತ್ತು. ಈ ಬಾರಿ ಹೋದ ಸಲಕ್ಕಿಂತ 10 ಪದಕಗಳು ಹೆಚ್ಚು ಬಂದಿವೆ. ಈ ಪೈಕಿ 17 ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿ ಲಭಿಸಿದ್ದು ವಿಶೇಷ. ಅಲ್ಲದೇ ಪಾಯಿಂಟ್ ಪಟ್ಟಿಯಲ್ಲಿ ಅಗ್ರ 20ರಲ್ಲಿ ಸ್ಥಾನ ಪಡೆದಿದೆ. ಚೀನಾ 200ಕ್ಕೂ ಹೆಚ್ಚು ಪದಕ ಗೆದ್ದು ಅಗ್ರಸ್ಥಾನದಲ್ಲಿದೆ. ಭಾರತದ ಪದಕ ಸಾಧನೆಯ ಕುರಿತು ಒಂದು ಅವಲೋಕನ ಇಲ್ಲಿದೆ;
ಜುಡೊ, ಟ್ರ್ಯಾಕ್‌ನಲ್ಲಿ ಅನಿರೀಕ್ಷಿತ ಯಶಸ್ಸು
84 ಕ್ರೀಡಾಪಟುಗಳಿದ್ದ ತಂಡದಲ್ಲಿದ್ದ ಪ್ರೀತಿ ಪಾಲ್ ಅವರು ಮಹಿಳೆಯರ ಟಿ35 ವಿಭಾಗದ 100 ಮೀ ಓಟ ಮತ್ತು 200 ಮೀ ಓಟದಲ್ಲಿ ಕಂಚಿನ ಪದಕಗಳನ್ನು ಜಯಿಸಿದರು. ಹೈಪರ್ಟೊನಿಯಾ, ಅಟಾಕ್ಸಿಯಾ ಮತ್ತು ಅಥೆಟೊಸಿಸ್ ಕಾಯಿಲೆಗಳಿಂದಾಗಿ ಪ್ರೀತಿ ಅವರ ಕಾಲುಗಳಲ್ಲಿ ನರಗಳು ದುರ್ಬಲವಾಗಿವೆ. ಹುಟ್ಟಿನಿಂದಲೇ ಅವರಿಗೆ ಈ ಕಾಯಿಲೆ ಇದೆ. ಆದರೂ ಅವರು ಓಟದಲ್ಲಿ ಪದಕ ಸಾಧನೆ ಮಾಡಿರುವುದು ವಿಶೇಷ. ಒಂದೇ ಕೂಟದ ಟ್ರ್ಯಾಕ್ ವಿಭಾಗದಲ್ಲಿ ಭಾರತದ ಮಹಿಳಾ ಅಥ್ಲೀಟ್ ಎರಡು ಪದಕ ಜಯಿಸಿದ್ದು ಇದೇ ಮೊದಲು.
ಜೂಡೊ ಕ್ರೀಡೆಯಲ್ಲಿ ಇದೇ ಮೊದಲ ಬಾರಿಗೆ ಭಾರತಕ್ಕೆ ಪ್ಯಾರಾಲಿಂಪಿಕ್ಸ್ ಪದಕ ಒಲಿಯಿತು. ಪುರುಷರ 60 ಕೆಜಿ ವಿಭಾಗದ ಜೆ1 ಕ್ಲಾಸ್‌ನಲ್ಲಿ 24 ವರ್ಷದ ಕಪಿಲ್ ಪರಮಾರ್ ಕಂಚು ಜಯಿಸಿದರು. ಕಪಿಲ್ ಅವರು ಬಾಲ್ಯದಲ್ಲಿ ಹೊಲದಲ್ಲಿ ಆಟವಾಡುವ ಸಂದರ್ಭದಲ್ಲಿ ವಿದ್ಯುತ್ ಆಘಾತಕ್ಕೆ ಒಳಗಾಗಿ ಅಂಗವಿಕಲರಾಗಿದ್ದರು. ಉಪಜೀವನಕ್ಕಾಗಿ ಚಹಾ ಮಾರಾಟ ಕೂಡ ಮಾಡಿದ್ದರು. ಕಷ್ಟಪಟ್ಟು ಜೂಡೊ ಕಲಿತ ಅವರು ಈ ಸಾಧನೆ ಮಾಡಿದ್ದಾರೆ.
ಆರ್ಚರಿಯಲ್ಲಿ ಶೀತಲ್, ಹರವಿಂದರ್ ಸಾಧನೆ
ಈ ಬಾರಿ ಭಾರತದ ಪದಕ ಸಂಖ್ಯೆಯು ಹೆಚ್ಚಲು ಆರ್ಚರಿ ಮತ್ತು ಕ್ಲಬ್ ಥ್ರೋ ಕ್ರೀಡಾಪಟುಗಳ ಕಾಣಿಕೆಯೂ ಇದೆ.
ಈಬಾರಿ ಆರ್ಚರಿಪಟು 17 ವರ್ಷದ ಹುಡುಗಿ ಶೀತಲ್ ದೇವಿ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಎರಡೂ ಕೈಗಳು ಇಲ್ಲದಿದ್ದರೂ ತಮ್ಮ ಕಾಲುಗಳ ಮೂಲಕವೇ ಬಿಲ್ಲುಗಾರಿಕೆ ಮಾಡುವ ಈ ಅಸಾಧಾರಣ ಪ್ರತಿಭೆ ಮಿಶ್ರ ತಂಡ ವಿಭಾಗದಲ್ಲಿ ಕಂಚು ಗೆದ್ದರು. ಪ್ಯಾರಿಸ್‌ನಲ್ಲಿ ಶೀತಲ್ ಅವರ ಬಿಲ್ಲುಗಾರಿಕೆಯನ್ನು ನೋಡಲು ಜನರು ಕಿಕ್ಕಿರಿದು ಸೇರಿದ್ದರು. ಆದರೆ ಶೀತಲ್ ಅವರು ಸಿಂಗಲ್ಸ್ ವಿಭಾಗದಲ್ಲಿ ನಿರಾಶೆ ಅನುಭವಿಸಿದರು.
ಆರ್ಚರಿಯ ಪುರುಷರ ವಿಭಾಗದಲ್ಲಿ ಹರವಿಂದರ್ ಚಿನ್ನಕ್ಕೆ ಗುರಿ ಇಟ್ಟರು. ಟೋಕಿಯೊದಲ್ಲಿ ಕಂಚು ಜಯಿಸಿದ್ದ ಅವರು ಇಲ್ಲಿ ಬಂಗಾರದ ಮನುಷ್ಯನಾದರು. ಆರ್ಚರಿಯಲ್ಲಿ ಭಾರತಕ್ಕೆ ಚಿನ್ನ ಒಲಿದಿದ್ದು ಇದೇ ಮೊದಲು.
ಸುಮಿತ್, ಅವನಿ ಸಾಧನೆ ‘ನಿರಂತರ’
ಜಾವೆಲಿನ್ ಥ್ರೋ ಅಥ್ಲೀಟ್ ಸುಮಿತ್ ಅಂಟಿಲ್ ಮತ್ತು ಶೂಟರ್ ಅವನಿ ಲೇಖರಾ ಅವರು ಸತತ ಎರಡನೇ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದರು. ಅದರೊಂದಿಗೆ ತಮ್ಮ ಮೇಲಿದ್ದ ಅಪಾರ ನಿರೀಕ್ಷೆಯನ್ನು ಉಳಿಸಿಕೊಂಡರು.
ಅಪಘಾತವೊಂದರಲ್ಲಿ ತಮ್ಮ ಎಡಗಾಲು ಕಳೆದುಕೊಂಡಿದ್ದ ಸುಮಿತ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದರು. ಪ್ಯಾರಿಸ್‌ನಲ್ಲಿಯೂ ಸ್ವರ್ಣ ಸಂಭ್ರಮ ಆಚರಿಸಿದರು.
ಮಹಿಳೆಯರ ಶೂಟಿಂಗ್‌ನಲ್ಲಿ ಅವನಿ ಲೇಖರಾ ಅವರದ್ದು ಕೂಡ ಅಮೋಘ ಸಾಧನೆ. ಗಾಲಿಕುರ್ಚಿಯಲ್ಲಿರುವ ಅವರು ಟೋಕಿಯೊ ಮತ್ತು ಇಲ್ಲಿ ಚಿನ್ನದ ಪದಕಕ್ಕೆ ಗುರಿ ಇಡುವಲ್ಲಿ ಯಶಸ್ವಿಯಾದರು.
ನಿತೇಶ್ ಸಾಧನೆ
ಬ್ಯಾಡ್ಮಿಂಟನ್‌ನಲ್ಲಿ ನಿತೇಶ್ ಕುಮಾರ್ ಅವರು ಸಿಂಗಲ್ಸ್ ವಿಭಾಗದ ರೋಚಕ ಫೈನಲ್‌ನಲ್ಲಿ ಬ್ರಿಟನ್‌ನ ಡೇನೀಲ್ ಬೆತೆಲಾ ವಿರುದ್ಧ ಜಯಿಸಿದರು. ಐಐಟಿ ಪದವೀಧರರಾಗಿರುವ ನಿತೇಶ್ ರೈಲು ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.