ನವದೆಹಲಿ: ಸಾಕ್ಷಿ ಮಲೀಕ್ ಅವರು ನೀಡಿರುವ ಹೇಳಿಕೆಯನ್ನು ತಾವು ಒಪ್ಪುವುದಿಲ್ಲ. ಅದು ಸಾಕ್ಷಿಯವರ ವೈಯಕ್ತಿಕ ಅಭಿಪ್ರಾಯ ಎಂದು ಒಲಿಂಪಿಯನ್ ಕುಸ್ತಿಪಟು ಮತ್ತು ಕಾಂಗ್ರೆಸ್ ಶಾಸಕಿ ವಿನೇಶ್ ಫೋಗಟ್ ಹೇಳಿದ್ದಾರೆ.
ಹೋದ ವರ್ಷ ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಿಂದ ರಿಯಾಯಿತಿ ತೆಗೆದುಕೊಳ್ಳಲು ವಿನೇಶ್ ಮತ್ತು ಬಜರಂಗ್ ಪೂನಿಯಾ ಅವರು ಒಪ್ಪಿದ್ದರಿಂದ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧದ ಹೋರಾಟ ಕಳೆಗುಂದಿತು ಎಂದು ಸಾಕ್ಷಿ ತಮ್ಮ ಕೃತಿ ‘ವಿಟ್ನೆಸ್’ನಲ್ಲಿ ಬರೆದಿದ್ದಾರೆ. ಈ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ವಿನೇಶ್, ‘ಇದು ಅವರ ವೈಯಕ್ತಿಕ ಅಭಿಪ್ರಾಯ. ಆದರೆ ಅದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಎಲ್ಲಿಯವರೆಗೂ ಸಾಕ್ಷಿ, ವಿನೇಶ್ ಮತ್ತು ಬಜರಂತ್ ಅವರು ಇರುತ್ತಾರೋ ಅಲ್ಲಿಯವರೆಗೆ ಹೋರಾಟವು ದುರ್ಬಲವಾಗುವುದಿಲ್ಲ’ ಎಂದಿದ್ದಾರೆ.
‘ಯಾರಿಗೆ ಗೆಲುವಿನ ಛಲವಿರುತ್ತದೆಯೋ ಅವರು ದುರ್ಬಲವಾಗಿರುವುದಿಲ್ಲ. ಅವರು ಯಾವಾಗಲೂ ಕಣದಲ್ಲಿ ಹೋರಾಟ ಮಾಡುವುದನ್ನೇ ಆಯ್ಕೆ ಮಾಡುತ್ತಾರೆ. ಅದಕ್ಕೆ ನಾವು ಬಹಳ ಗಟ್ಟಿಯಾಗಿರಬೇಕು. ಅಡೆತಡೆಗಳನ್ನು ಎದುರಿಸಿ ನಿಲ್ಲಬೇಕು. ನಾವು ಹೋರಾಟಕ್ಕೆ ಸಿದ್ಧವಾಗಿದ್ದೇವೆ’ ಎಂದು ಪಿಟಿಐ ವಿಡಿಯೊದಲ್ಲಿ ವಿನೇಶ್ ಹೇಳಿದ್ದಾರೆ.
‘ನಾವು ರಸ್ತೆಗಳಲ್ಲಿ ಮತ್ತು ಒಲಿಂಪಿಕ್ಸ್‌ನವರೆಗೂ ಮಾಡಿದ ಹೋರಾಟವು ಎಲ್ಲ ಪುತ್ರಿಯರು ಮತ್ತು ಸಹೋದರಿಯರಿಗಾಗಿ ಆಗಿತ್ತು. ರೈತರು, ಯುವಜನತೆ ಮತ್ತು ಕ್ರೀಡಾಪಟುಗಳು ಈ ದೇಶದ ಅಡಿಪಾಯವಾಗಿದ್ದಾರೆ. ನಾವು ಬದುಕಿರುವವರೆಗೂ ಹೋರಾಡುತ್ತೇವೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.