ADVERTISEMENT

ವಿಶ್ವ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಲು ಆರು ಪೈಲ್ವಾನರಿಗೆ ‘ಒಂದು’ ಅವಕಾಶ

ಪಿಟಿಐ
Published 22 ಜೂನ್ 2023, 23:08 IST
Last Updated 22 ಜೂನ್ 2023, 23:08 IST
   

ನವದೆಹಲಿ (ಪಿಟಿಐ): ಜಂತರ್‌ ಮಂಥರ್‌ನ ಧರಣಿಯಲ್ಲಿ ಒಳಗೊಂಡಿದ್ದ ಆರು ಮಂದಿ ಕುಸ್ತಿಪಟುಗಳು, ಮುಂಬರುವ ಏಷ್ಯನ್‌ ಗೇಮ್ಸ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗೆ ಭಾರತ ತಂಡಕ್ಕೆ ಆಯ್ಕೆಯಾಗಲು ‘ಒಂದು ಸೆಣಸಾಟದ ಸ್ಪರ್ಧೆ’ಯನ್ನು ಗೆಲ್ಲಬೇಕಾಗಿದೆ. ಭಾರತ ಒಲಿಂಪಿಕ್‌ ಸಂಸ್ಥೆಯ ಅಡ್‌ಹಾಕ್‌ ಸಮಿತಿ ಕೈಗೊಂಡ ಕ್ರಮದಂತೆ, ಈ ಕುಸ್ತಿಪಟು ಗಳು ಟ್ರಯಲ್ಸ್‌ ವಿಜೇತರ ವಿರುದ್ಧ ಗೆದ್ದರೆ ಮೇಲಿನ ಎರಡು ಪ್ರತಿಷ್ಠಿತ ಕೂಟಗಳಿಗೆ ಆಯ್ಕೆಯಾಗಬಹುದು.

ವಿನೇಶಾ ಫೋಗಟ್‌, ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್‌, ಸಂಗೀತಾ ಫೋಗಟ್‌, ಸತ್ಯವ್ರತ ಕಾದಿಯಾನ್ ಮತ್ತು ಜಿತೇಂದರ್‌ ಕಿನ್ಹಾ – ಈ ಆರು ಕುಸ್ತಿಪಟುಗಳು. ಅವರಿಗೆ ಪೂರ್ವಭಾವಿ ಟ್ರಯಲ್ಸ್‌ ಪ್ರಕ್ರಿಯೆಯಿಂದ ವಿನಾಯಿತಿ ನೀಡಲಾಗಿದೆ. ಅವರು ಆಗಸ್ಟ್‌ 5 ರಿಂದ 15ರ ನಡುವೆ ನಡೆಯುವ ಟ್ರಯಲ್ಸ್‌ನಲ್ಲಿ ಆಯಾ ತೂಕ ವಿಭಾಗದ ವಿಜೇತರ ಎದುರು ಹೋರಾಟ ನಡೆಸಿದರಷ್ಟೇ ಸಾಕು ಎಂದು ಈ ಕುಸ್ತಿಪಟುಗಳಿಗೆ ಭರವಸೆ ನೀಡಲಾಗಿದೆ.

ದೀರ್ಘಕಾಲದ ಧರಣಿಯಿಂದಾಗಿ ಸಿದ್ಧತೆ ನಡೆಸಲು ಸಾಧ್ಯವಾಗದ ಕಾರಣ ಆಗಸ್ಟ್‌ನಲ್ಲಿ ಏಷ್ಯನ್‌ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಈ ಕುಸ್ತಿಪಟುಗಳು ಕ್ರೀಡಾ ಸಚಿವಾಲಯವನ್ನು ಕೋರಿದ್ದರು. ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿ ರುವ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಧರಣಿ ನಡೆಸಿದ್ದರು.

ADVERTISEMENT

ಗಾಯಾಳಾಗುವ ಸಂಭವದ ಕಾರಣ, ಈ ಹಿಂದೆ ಕೆಲಬಾರಿ ಬಜರಂಗ್ ಮತ್ತು ವಿನೇಶಾ ಅವರಿಗೆ ಪೂರ್ಣ ಪ್ರಮಾಣದ ಟ್ರಯಲ್ಸ್‌ನಿಂದ ವಿನಾಯಿತಿ ನೀಡಲಾಗಿತ್ತು. ಆದರೆ ಸಂಗೀತಾ, ಸತ್ಯವ್ರತ ಮತ್ತು ಜಿತೇಂದರ್‌ ಅವರಿಗೆ ಈ ರೀತಿಯ ವಿನಾಯಿತಿಗೆ ಪರಿಗಣಿಸಿರಲಿಲ್ಲ.

ಏಷ್ಯನ್‌ ಗೇಮ್ಸ್‌ಗೆ ಸಂಘಟಕರು ನೀಡಿರುವ ಜುಲೈ 15ರ ಗಡುವಿನೊಳಗೆ ಅಡ್‌ಹಾಕ್‌ ಸಮಿತಿ ಟ್ರಯಲ್ಸ್‌ ನಡೆಸಿ ತಂಡದ ಪಟ್ಟಿ ಕಳುಹಿಸಬೇಕಿತ್ತು. ಈಗ ಪೂರ್ವಭಾವಿಯಾಗಿ ಟ್ರಯಲ್ಸ್‌ ನಡೆಸಿ ಐಒಎ ಕುಸ್ತಿಪಟುಗಳ ಪಟ್ಟಿ ಕಳಿಸಬಹುದಾಗಿದೆ. ಆದರೆ ಈ ಆರು ಕುಸ್ತಿಪಟುಗಲು ಪೂರ್ವಭಾವಿ ಟ್ರಯಲ್ಸ್‌ನ ವಿಜೇತರನ್ನು ಸೋಲಿಸಿದಲ್ಲಿ, ಪಟ್ಟಿಯಲ್ಲಿ ಕಳಿಸಿದ ಹೆಸರನ್ನು ನಂತರ ಬದಲಾಯಿಸಲು ಅವಕಾಶವಿದೆ. ಅಡ್‌ಹಾಕ್‌ ಸಮಿತಿಯ ನಿರ್ಧಾರವನ್ನು ಬಾಜ್ವಾ ಅವರು ಕುಸ್ತಿಪಟುಗಳಿಗೆ ಜೂನ್‌ 16ರಂದು ಪತ್ರ ಮುಖೇನ ತಿಳಿಸಿದ್ದು, ಅದರ ಪ್ರತಿ ಸುದ್ದಿಸಂಸ್ಥೆಗೆ ಲಭ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.