ಮಂಗಳೂರು: ವಯಸ್ಸಿಗೆ ಸವಾಲು ಹಾಕಿ ಸಾಧನೆ ಮಾಡಬೇಕೆಂಬ ಛಲದಲ್ಲಿ ಇದ್ದೇನೆ. ಹೀಗಾಗಿ ಸದ್ಯ ನಿವೃತ್ತಿಯ ಯೋಚನೆ ಇಲ್ಲ ಎಂದು ಒಲಿಂಪಿಯನ್ ಹಾಗೂ ಏಷ್ಯನ್ ಗೇಮ್ಸ್ ಪದಕ ವಿಜೇತೆ ಸ್ಪ್ರಿಂಟರ್ ಎಂ.ಆರ್.ಪೂವಮ್ಮ ತಿಳಿಸಿದರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ಆರಂಭಗೊಂಡ ಮಂಗಳೂರು ನಗರ ಪೊಲೀಸರ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿದ ನಂತರ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದರು.
‘ವಯಸ್ಸು ಆಗುತ್ತಾ ಇದೆ. ಹೀಗಾಗಿ ನಿವೃತ್ತಿ ಬಗ್ಗೆ ಅನೇಕರಿಗೆ ಸಂದೇಹಗಳು ಇವೆ. ನಾನಂತೂ ಇನ್ನಷ್ಟು ಸಾಧನೆ ಮಾಡಿಯೇ ನಿವೃತ್ತಿ ಘೋಷಿಸುವ ಗುರಿ ಹೊಂದಿದ್ದೇನೆ. ಸಾಧನೆಗೆ ವಯಸ್ಸು ಅಡ್ಡಿಯಲ್ಲ ಎಂದು ತೋರಿಸಿ ಯುವ ಅಥ್ಲೀಟ್‌ಗಳಿಗೆ ಹೊಸ ಹಾದಿ ತೋರಿಸಬೇಕೆಂದಿದೆ. 2021ರಲ್ಲಿ ನಡೆದ ಒಲಿಂಪಿಕ್ಸ್ ಮತ್ತು ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಮುಂದಿನ ಒಲಿಂಪಿಕ್ಸ್ ಮತ್ತು ವಿಶ್ವ ರಿಲೆಯಲ್ಲಿ ಭಾಗವಹಿಸುವುದು ಸದ್ಯದ ಕನಸು’ ಎಂದು 33 ವರ್ಷದ ಪೂವಮ್ಮ ಹೇಳಿದರು.
‘ಮೆಡ್ಲೆ ರಿಲೆಯಂಥ ಸ್ಪರ್ಧೆಗಳಿಗೆ ಆದ್ಯತೆ ಸಿಗುತ್ತಿರುವುದು ಖುಷಿಯ ಸಂಗತಿ. ಈ ವಿಭಾಗದಲ್ಲಿ ಭಿನ್ನ ಅಂತರವನ್ನು ಬೇರೆ ಬೇರೆ ಓಟಗಾರರು ಓಡುವುದರಿಂದ 100 ಮತ್ತು 200 ಮೀಟರ್ಸ್ ಓಟದಲ್ಲಿ ವೈಯಕ್ತಿಕ ಮಟ್ಟದಲ್ಲಿ ಸಾಧನೆ ಮಾಡಲು ಆಗದವರಿಗೂ ದೊಡ್ಡ ಮಟ್ಟದ ಕೂಟಗಳಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗುತ್ತದೆ’ ಎಂದು ಪೂವಮ್ಮ ಅಭಿಪ್ರಾಯಪಟ್ಟರು.
ಉದ್ದೀಪನ ಮದ್ದು ಸೇವನೆ ಆರೋಪದಲ್ಲಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ದಿಂದ ನಿಷೇಧಕ್ಕೆ ಒಳಗಾದ ವಿಷಯದ ಕುರಿತು ಪ್ರತಿಕ್ರಿಯಿಸಿದ ಅವರು ‘ನಾಡಾದವರು ಒಮ್ಮೆ ಸ್ಪರ್ಧಿಸಬಹುದು ಎಂದು ತಿಳಿಸಿ ಕೆಲವೇ ದಿನಗಳಲ್ಲಿ ಮತ್ತೆ ನಿಷೇಧವನ್ನು ಹೇರಿದ್ದು ಗೊಂದಲಕ್ಕೆ ಕಾರಣವಾಗಿತ್ತು. ಈ ಸಂಬಂಧ ಹೈಕೋರ್ಟ್ ಮೊರೆ ಹೋಗಿದ್ದ ನನಗೆ ಜಯ ಸಂದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.