ನವದೆಹಲಿ: ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಜಂಟಿ ಕಾರ್ಯದರ್ಶಿ ಕಲ್ಯಾಣ್ ಚೌಬೆ ಮತ್ತು ಕಾರ್ಯಕಾರಿ ಮಂಡಳಿಯ ಇತರ ಸದಸ್ಯರ ಯಾವುದೇ ಸೂಚನೆಗಳನ್ನು ಪಾಲಿಸದಿರುವಂತೆ ಸಂಸ್ಥೆಯ ಅಧ್ಯಕ್ಷೆ ಪಿ.ಟಿ.ಉಷಾ ಅವರು ಐಒಎ ಸಿಬ್ಬಂದಿಗೆ ಕಟ್ಟಪ್ಪಣೆ ವಿಧಿಸಿದ್ದಾರೆ.
ಇದೇ 25ರಂದು ನಡೆಯಲಿರುವ ವಿಶೇಷ ಸಾಮಾನ್ಯ ಸಭೆಗೆ ಚೌಬೆ ಅವರು ಸಿದ್ಧಪಡಿಸಿರುವ ಕಾರ್ಯಸೂಚಿ ‘ಕಾನೂನುಬಾಹಿರ ಮತ್ತು ಅನಧಿಕೃತ’ ಎಂದೂ ಉಷಾ ಘೋಷಿಸಿದ್ದಾರೆ.
ಅಕ್ಟೋಬರ್ 25ರಂದು ನಡೆಯಲಿರುವ ಸಭೆಗೆ ಚೌಬೆ ಅವರು 26 ಅಂಶಗಳ ಕಾರ್ಯಸೂಚಿಯನ್ನು ಸಿದ್ಧಪಡಿಸಿ ಬುಧವಾರ ಸುತ್ತೋಲೆ ಹೊರಡಿಸಿದ್ದರು. ಸಂಸ್ಥೆ ನಿಯಮಾವಳಿಗಳ ಉಲ್ಲಂಘನೆ ಮತ್ತು ದೇಶದ ಕ್ರೀಡೆಗೆ ಮಾರಕವಾಗಬಲ್ಲ ನಿರ್ಧಾರಗಳನ್ನು ಕೈಗೊಂಡಿರುವುದಕ್ಕಾಗಿ ಉಷಾ ವಿರುದ್ಧ ಅವಿಶ್ವಾಸ ನಿರ್ಣಯವೂ ಕಾರ್ಯಸೂಚಿಯಲ್ಲಿ ಒಳಗೊಂಡಿತ್ತು.
ಸುತ್ತೋಲೆಯಲ್ಲಿ ಚೌಬೆ ಅವರು ತಮ್ಮನ್ನು ಜಂಟಿ ಕಾರ್ಯದರ್ಶಿ ಮತ್ತು ಹಂಗಾಮಿ ಸಿಇಒ ಎಂದು ಉಲ್ಲೇಖಿಸಿದ್ದರು. ಆದರೆ ಚೌಬೆ ಈಗ ಹಂಗಾಮಿ ಸಿಇಒ ಹುದ್ದೆಯಲ್ಲಿಲ್ಲ ಎಂದು ಉಷಾ ಹೇಳಿದ್ದಾರೆ.
ಚೌಬೆ ಈ ಹಿಂದೆ ಅವರು ಹಂಗಾಮಿ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು. ಆದರೆ ರಘುರಾಮ್ ಅಯ್ಯರ್ ಜನವರಿಯಲ್ಲಿ ಸಿಇಒ ಆಗಿ ನೇಮಕಗೊಂಡಿದ್ದರು.
‘ಅಯ್ಯರ್ ನೇಮಕವನ್ನು ಎಕ್ಸಿಕ್ಯೂಟಿವ್ ಕೌನ್ಸಿಲ್ ಜನವರಿ 5ರಂದು ಅನುಮೋದಿಸಿತ್ತು. ವೇತನದ ವಿಷಯದಲ್ಲಿ ಒಮ್ಮತ ಮೂಡಿರಲಿಲ್ಲ’ ಎಂದು ಉಷಾ ಹೇಳಿದ್ದಾರೆ. ಆದರೆ ಈ ಹಿಂದೆ 15 ಸದಸ್ಯರ ಪೈಕಿ 12 ಮಂದಿ ಅಯ್ಯರ್ ನೇಮಕ ಸ್ಥಿರೀಕರಣಕ್ಕೆ ನಿರಾಕರಿಸಿದ್ದರು. ಅಂದಿನ ಈ ಭಿನ್ನಾಭಿಪ್ರಾಯ ನಂತರದ ದಿನಗಳಲ್ಲಿ ದೊಡ್ಡ ಕಂದರವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.