ಪ್ಯಾರಿಸ್: ಈ ಬಾರಿ ಒಲಿಂಪಿಕ್ಸ್‌ನಲ್ಲಿ ತನಿಶಾ ಕ್ರಾಸ್ಟೊ ಅವರೊಂದಿಗೆ ಡಬಲ್ಸ್‌ನಲ್ಲಿ ಮೂರು ಸತತ ಸೋಲು ಅನುಭವಿಸುವ ಮೂಲಕ ಆಘಾತಗೊಂಡಿರುವ ಹಿರಿಯ ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅವರು, ‘ಇದು ನನ್ನ ಕೊನೆಯ ಒಲಿಂಪಿಕ್ಸ್’ ಎಂದು ಹೇಳುವ ಮೂಲಕ ಅಭಿಮಾನಿಗಳಲ್ಲಿ ಆಘಾತ ಮೂಡಿಸಿದ್ದಾರೆ.
ಮಂಗಳವಾರ ನಡೆದ ಸಿ ಗುಂಪಿನ ಪಂದ್ಯದಲ್ಲಿ ಅಶ್ವಿನಿ ಹಾಗೂ ತನಿಶಾ ಜೋಡಿಯು ಆಸ್ಟ್ರೇಲಿಯಾದ ಸೆತ್ಯಾನಾ ಮಾಪಸಾ ಹಾಗೂ ಏಂಜೆಲಾ ಯು ಜೋಡಿ ವಿರುದ್ಧ 15–21, 10–21 ನೇರ ಸೇಟ್‌ನಲ್ಲಿ ಪರಾಭವಗೊಂಡಿತು. ಈ ಸೋಲಿನ ಮೂಲಕ 2024ರ ಒಲಿಂಪಿಕ್ಸ್‌ನಿಂದ ಈ ಜೋಡಿ ಹೊರಬಿದ್ದಿತು.
2028ರಲ್ಲಿ ಲಾಸ್‌ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಆಡುವಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ 34 ವರ್ಷದ ಅಶ್ವಿನಿ, ‘ಇದು ನನ್ನ ಕೊನೆಯ ಒಲಿಂಪಿಕ್ಸ್. ಆದರೆ ತನಿಷಾ ಅವರ ಕ್ರೀಡೆಯ ಹಾದಿ ಇನ್ನೂ ಸುದೀರ್ಘವಿದೆ’ ಎಂದರು.
‘ಇಂದು ನಾವು ಗೆಲ್ಲಲೇಬೇಕು ಎಂದು ಆಡಿದೆವು. ಆದರೆ ಸಾಧ್ಯವಾಗಲಿಲ್ಲ. ಈ ಪ್ರಯಾಣದಲ್ಲಿ ನಾನು ಹಾಗೂ ತನಿಶಾ ಒಲಿಂಪಿಕ್ಸ್‌ನಲ್ಲಿ ಆಡಿದೆವು ಎಂಬ ಸಮಾಧಾನದೊಂದಿಗೆ ನಿರ್ಗಮಿಸುತ್ತಿದ್ದೇವೆ. ಇಲ್ಲಿ ಆಡುವುದು ಅಷ್ಟು ಸುಲಭದ ಮಾತಲ್ಲ’ ಎಂದು ಅಶ್ವಿನಿ ಹೇಳಿದ್ದಾರೆ.
‘ಈ ಸೋಲು ನನ್ನ ಮನಸ್ಸು ಹಾಗೂ ಭಾವನೆಗಳ ಮೇಲೆ ಭಾರೀ ಆಘಾತ ಉಂಟು ಮಾಡಿದೆ. ಇಂಥ ಪರಿಸ್ಥಿತಿಯನ್ನು ಮತ್ತೆ ಎದುರಿಸಲಾರೆ. ಅದು ಸುಲಭವೂ ಅಲ್ಲ. ಕಿರಿಯ ವಯಸ್ಸಿನವರಾದರೆ ಇವೆಲ್ಲವನ್ನೂ ಸಹಿಸಿಕೊಳ್ಳಬಹುದು. ಸಾಕಷ್ಟು ವರ್ಷಗಳ ಕಾಲ ಆಡಿದ್ದೇನೆ. ಇನ್ನು ಸಾಗುವುದು ಕಷ್ಟ’ ಎಂದ ಅಶ್ವಿನಿ ಉಕ್ಕಿ ಬರುತ್ತಿದ್ದ ಕಣ್ಣೀರನ್ನು ತಡೆಯಲು ಯತ್ನಿಸಿದರು. ತನಿಶಾ ಕೂಡಾ ಭಾವುಕರಾದರು.
‘ಅಶ್ವಿನಿ ನನಗೆ ಬಹುದೊಡ್ಡ ಬೆಂಬಲವಾಗಿ ನನ್ನೊಂದಿಗಿದ್ದರು. ಪ್ರತಿ ಬಾರಿ ನನ್ನನ್ನು ಹುರಿದುಂಬಿಸುತ್ತಿದ್ದರು. ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೆವು’ ಎಂದು ತನಿಶಾ ಹೇಳಿದ್ದಾರೆ.
ಅಶ್ವಿನಿ ಅವರು 2001ರಲ್ಲಿ ಮೊದಲ ರಾಷ್ಟ್ರೀಯ ಪದಕ ಪಡೆದಿದ್ದರು. 2017ರವರೆಗೂ ಜ್ವಾಲಾ ಗುಟ್ಟ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಹಲವು ಇತಿಹಾಸಗಳನ್ನು ನಿರ್ಮಿಸಿ, ಯಶಸ್ವಿ ಜೋಡಿ ಎನಿಸಿಕೊಂಡಿತ್ತು. ಈ ಜೋಡಿ ಹಲವು ಅಂತರರಾಷ್ಟ್ರೀಯ ಪದಕಗಳನ್ನು ಜಯಿಸಿತು. ಇದರಲ್ಲಿ 2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚು, 2014 ಹಾಗೂ 2016ರಲ್ಲಿ ಉಬರ್ ಕಪ್ ಹಾಗೂ 2014ರಲ್ಲಿ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲೂ ಪದಕ ಪಡೆದಿದ್ದರು. ವಿಶ್ವ ಬ್ಯಾಡ್ಮಿಂಟನ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಈ ಜೋಡಿ ಮೊದಲ 20ರಲ್ಲಿ ಸ್ಥಾನ ಪಡೆದಿತ್ತು. 2012 ಹಾಗೂ 2016ರಲ್ಲೂ ಈ ಜೋಡಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.