ನವದೆಹಲಿ: ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ಗೆ ತಂಡದ ಆಯ್ಕೆಗೆ ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಆಯೋಜಿಸಿರುವ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ಐವರು ಕುಸ್ತಿಪಟುಗಳಿಗೆ ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ.
ಅನುಜ್ ಕುಮಾರ್, ಚಂದರ್ ಮೋಹನ್, ವಿಜಯ್, ಅಂಕಿತ್ ಮತ್ತು ಸಚಿನ್ ಮೋರ್ ಅವರಿಗೆ ಶುಕ್ರವಾರ ಹಾಗೂ ಶನಿವಾರ ನಡೆಯುವ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು ಎಂದು ನ್ಯಾಯಮೂರ್ತಿ ಪ್ರತಿಭಾ ಎಂ.ಸಿಂಗ್ ಅವರು ಗುರುವಾರ ನೀಡಿದ ತೀರ್ಪಿನಲ್ಲಿ ಕುಸ್ತಿ ಫೆಡರೇಷನ್‌ಗೆ ಸೂಚಿಸಿದರು.
ಕಜಕಸ್ತಾನದ ಅಸ್ತಾನದಲ್ಲಿ ಏ.9 ರಿಂದ 14ರ ವರೆಗೆ ನಡೆಯಲಿರುವ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ಗೆ ಭಾರತ ತಂಡದ ಆಯ್ಕೆಗೆ ಮಾರ್ಚ್ 10 ಮತ್ತು 11 ರಂದು ಟ್ರಯಲ್ಸ್ ನಡೆಯಲಿದೆ. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಕೂಟಗಳಲ್ಲಿ ಪದಕ ಗೆದ್ದಿದ್ದರೂ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿಲ್ಲ ಎಂದು ಈ ಐವರು ಸ್ಪರ್ಧಿಗಳು ಹೈಕೋರ್ಟ್ ಮೊರೆ ಹೋಗಿದ್ದರು.
'ಅರ್ಜಿದಾರರು ಪ್ರತಿಭಾನ್ವಿತ ಕುಸ್ತಿಪಟುಗಳಾಗಿರುವುದರಿಂದ ಅವರನ್ನು ಟ್ರಯಲ್ಸ್‌ನಿಂದ ಹೊರಗಿಡಬಾರದು. ಅವರಿಗೆ ಪಾಲ್ಗೊಳ್ಳಲು ಅವಕಾಶ ನೀಡಬೇಕೆಂದು ನ್ಯಾಯಾಲಯ ಬಯಸುತ್ತದೆ’ ಎಂದು ಹೈಕೋರ್ಟ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.