ನವದೆಹಲಿ (ಪಿಟಿಐ): ಅದು, 17 ವರ್ಷ ದೊಳಗಿನ ಅಥ್ಲೀಟ್‌ಗಳ ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆ ನಡೆಯುತ್ತಿದ್ದ ಸಂದರ್ಭ. ಅಲ್ಲಿಗೆ ಬಂದಿದ್ದ ಆ ಬಾಲಕನ ಜಿಮ್ನಾಸ್ಟ್‌ನಂಥ ದೇಹ ಮತ್ತು ಬಲಿಷ್ಠ ಕೈಗಳನ್ನು ಕಂಡ ಕೋಚ್ ರಾಧಾಕೃಷ್ಣನ್ ನಾಯರ್ ಆತ ಶಿಬಿರಕ್ಕೆ ಆಯ್ಕೆಯಾಗಲು ಅರ್ಹ ಎಂದು ಶಿಫಾರಸು ಮಾಡಿದ್ದರು. ಆ ಬಾಲಕನೇ ಭಾರತಕ್ಕೆ ಒಲಿಂಪಿಕ್ಸ್ ಅಥ್ಲೆಟಿಕ್ಸ್‌ನಲ್ಲಿ ಮೊದಲ ಚಿನ್ನದ ಪದಕ ಗೆದ್ದುಕೊಟ್ಟಿರುವ ನೀರಜ್ ಚೋಪ್ರಾ.
ನೀರಜ್ ಅವರು ಶಿಬಿರಕ್ಕೆ ಆಯ್ಕೆ ಯಾಗಲು ಕಾರಣವಾದ ಅಂಶಗಳನ್ನು ರಾಧಾಕೃಷ್ಣನ್ ಭಾನುವಾರ ತಿಳಿಸಿದ್ದಾರೆ. ಬಯೊ ಮೆಕಾನಿಕ್ಸ್ ತಜ್ಞ ಡಾ.ಕ್ಲೌಸ್ ಬರ್ಟೊನೀಜ್ ಅವರ ಪ್ರಭಾವವೂ ನೀರಜ್ ಮೇಲೆ ಇದೆ ಎಂದರು.
‘2015ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಐದನೇ ಸ್ಥಾನ ಗಳಿಸಿ ಗಮನ ಸೆಳೆದಿದ್ದರು. ಐದನೇ ಸ್ಥಾನ ಗಳಿಸಿದವರನ್ನು ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆ ಮಾಡುವ ಪರಿಪಾಠ ಇಲ್ಲ. ಆದರೆ ನೀರಜ್ ಅವರಲ್ಲಿದ್ದ ಭವಿಷ್ಯದ ಅತ್ಯುತ್ತಮ ಅಥ್ಲೀಟ್‌ನನ್ನು ಕಂಡಿದ್ದೆ’ ಎಂದು ವರ್ಲ್ಡ್ ಅಥ್ಲೆಟಿಕ್ಸ್‌ನ (ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್‌ನ ಈಗಿನ ಹೆಸರು) ಲೆವೆಲ್–5 ಕೋಚ್ ಆಗಿರುವ ರಾಧಾಕೃಷ್ಣನ್ ತಿಳಿಸಿದರು.
ಭಾರತ ಅಥ್ಲೆಟಿಕ್ ಫೆಡರೇಷನ್‌ನ ಯೋಜನಾ ಆಯೋಗದ ಮುಖ್ಯಸ್ಥ ಲಲಿತ್ ಭಾನೋಟ್ ಅವರೊಂದಿಗೆ ಮಾತನಾಡಿ ನೀರಜ್‌ಗೆ ಶಿಬಿರದಲ್ಲಿ ಅವಕಾಶ ಕೊಡಿಸಲಾಗಿತ್ತು ಎಂದು ರಾಧಾಕೃಷ್ಣನ್ ವಿವರಿಸಿದರು.
ಶಿಬಿರಕ್ಕೆ ಬರುವ ಮುನ್ನ 73.45 ಮೀಟರ್ಸ್ ದೂರ ಎಸೆದಿದ್ದ ನೀರಜ್ ಎರಡು ವರ್ಷಗಳಲ್ಲಿ 80 ಮೀಟರ್‌ಗಳ ಗಡಿ ದಾಟಿದ್ದರು. 2016ರ ವೇಳೆ ಅವರು ಎಸೆದ ದೂರ86.48 ಮೀ ಆಗಿತ್ತು.
ಕೇರಳದಲ್ಲಿ ರಾಷ್ಟ್ರೀಯ ಅಥ್ಲೆಟಿಕ್ಸ್ ಕೂಟಕ್ಕೆ ಬರುವುದಕ್ಕೂ ಮೊದಲು ನೀರಜ್ ಅವರು ಪಂಚಕುಲದ ತವು ದೇವಿ ಲಾಲ್ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುತ್ತಿದ್ದರು.
ನಂತರ, 2012ರಲ್ಲಿ ಪಾನಿಪತ್‌ನ ಶಿವಾಜಿ ಕ್ರೀಡಾಂಗಣದಲ್ಲಿ ಅವರ ಅಭ್ಯಾಸ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.