ಮಂಗಳೂರು: ಮೈಸೂರಿನ ಬೋಪಣ್ಣ ಮತ್ತು ತಮ್ಮದೇ ಜಿಲ್ಲೆಯ ರಮೇಶ್ ಅವರ ಪೈಪೋಟಿ ಮೀರಿನಿಂತ ಯಾದಗಿರಿಯ ಲೋಕೇಶ್ ಕೃಷ್ಣಪ್ಪ ಅವರು ರಾಜ್ಯ ಜೂನಿಯರ್ ಮತ್ತು ಯೂತ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ 20 ವರ್ಷದೊಳಗಿನ ಪುರುಷರ 800 ಮೀಟರ್ಸ್ ಓಟದಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದುಕೊಂಡರು. ಬೆಳಗಾವಿಯ ತುಷಾರ್ ವಸಂತ ಬೇಕನ್ 23 ವರ್ಷದೊಳಗಿನವರ ವಿಭಾಗದ ಚಿನ್ನ ತಮ್ಮದಾಗಿಸಿಕೊಂಡರು.
ಲೋಕನಾಥ ಬೋಳಾರ್ ಸ್ಮರಣಾರ್ಥ ಆಯೋಜಿಸಿರುವ ಕೂಟದಲ್ಲಿ ಲೋಕೇಶ್ 1 ನಿಮಿಷ 52.45 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಆಕಾಶ್ ಗೊಲ್ಲರ (1:52.90) ಹೆಸರಿನಲ್ಲಿದ್ದ ದಾಖಲೆ ಮುರಿದರು. ಯಾದಗಿರಿಯ ಡಿವೈಇಎಸ್ ಕ್ರೀಡಾನಿಲಯದ ಬಾಲಕೃಷ್ಣ ಅವಲಕ್ಕಿ ಅವರ ಶಿಷ್ಯ ಲೋಕೇಶ್ 1500 ಮೀಟರ್ಸ್ ಓಟದಲ್ಲಿ ದಕ್ಷಿಣ ವಲಯ ಮತ್ತು ರಾಜ್ಯ ಕೂಟದಲ್ಲಿ ಕಳೆದ ವರ್ಷ ಚಿನ್ನ ಗೆದ್ದಿದ್ದರು. 2021ರ ರಾಜ್ಯ ಚಾಂಪಿಯನ್‌ಷಿಪ್‌ನ 800 ಮೀಟರ್ಸ್‌ನಲ್ಲಿ ಬೆಳ್ಳಿ ಪದಕ ಗಳಿಸಿದ್ದರು. 800 ಮೀಟರ್ಸ್ ವಿಭಾಗದಲ್ಲಿ ಇದು ಅವರಿಗೆ ಮೊದಲ ಚಿನ್ನ.
20 ವರ್ಷದೊಳಗಿನವರ ಮಹಿಳೆಯರ ವಿಭಾಗದಲ್ಲಿ ಚಿನ್ನ ಗಳಿಸಿದ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ದ್ವಿತೀಯ ಬಿಎ ವಿದ್ಯಾರ್ಥಿನಿ ರೇಖಾ ಅವರಿಗೂ 800 ಮೀಟರ್ಸ್‌ನಲ್ಲಿ ಇದು ಮೊದಲ ಪದಕ. ಬೆಳಗಾವಿ ಜಿಲ್ಲೆ ಮೂಡಲಗಿಯ ರೈತ ದಂಪತಿ ಬಸಪ್ಪ–ಮಹಾದೇವಿ ಅವರ ಪುತ್ರಿ ರೇಖಾ ಅವರು ಪ್ರದೀಪ್ ಬಳಿ ತರಬೇತಿ ಪಡೆಯುತ್ತಿದ್ದು ಈ ಹಿಂದೆ 1500 ಮೀಟರ್ಸ್ ಮತ್ತು 3000 ಮೀಟರ್ಸ್ ಓಟದಲ್ಲಿ ಪದಕಗಳನ್ನು ಗೆದ್ದಿದ್ದರು.
ಚಾಂಪಿಯನ್‌ಷಿಪ್‌ನ ಮೊದಲ ಸ್ಪರ್ಧೆ, 23 ವರ್ಷದೊಳಗಿನವರ ಪುರುಷರ 800 ಮೀಟರ್ಸ್ ಓಟದ ಮೊದಲ ಲ್ಯಾಪ್ ಮುಕ್ತಾಯದ ವೇಳೆಯಲ್ಲೇ ಒಂದು ಮೀಟರ್‌ನಷ್ಟು ಮುಂದಿದ್ದ ತುಷಾರ್ ಅದೇ ಲಯವನ್ನು ಕಾಯ್ದುಕೊಂಡು ಸ್ಪರ್ಧೆ ಗೆದ್ದರು. ಬೆಳಗಾವಿಯ ರಾಣಿ ಚನ್ನಮ್ಮ ವಿವಿಯ ಬಿಕಾಂ ವಿದ್ಯಾರ್ಥಿಯಾಗಿರುವ ಅವರು ಬೆಂಗಳೂರಿನ ಖೇಲೊ ಇಂಡಿಯಾ ಶ್ರೇಷ್ಠತಾ ಕೇಂದ್ರದಲ್ಲಿ ವಸಂತ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.
ಮಹಿಳೆಯ ವಿಭಾಗದಲ್ಲಿ ಏಕೈಕ ಸ್ಪರ್ಧಿ
23 ವರ್ಷದೊಳಗಿನ ಮಹಿಳೆಯರ ವಿಭಾಗದ 800 ಮೀಟರ್ಸ್ ಓಟದ ಸ್ಪರ್ಧೆಯ ಸ್ಟಾರ್ಟ್ ಲಿಸ್ಟ್‌ನಲ್ಲಿ ಇಬ್ಬರ ಹೆಸರು ಇತ್ತು. ಆದರೆ ಟ್ರ್ಯಾಕ್‌ಗೆ ಇಳಿದದ್ದು ದಕ್ಷಿಣ ಕನ್ನಡದ ದೀಪಶ್ರೀ ಮಾತ್ರ. ಅವರನ್ನು 20 ವರ್ಷದೊಳಗಿನ ಮಹಿಳಾ ವಿಭಾಗದ ಸ್ಪರ್ಧೆಯೊಂದಿಗೆ ಸೇರಿಸಿ ‘ಆಯ್ಕೆ ಪ್ರಕ್ರಿಯೆ’ ಪೂರ್ಣಗೊಳಿಸಲಾಯಿತು. 2 ನಿಮಿಷ 16.82 ಸೆಕೆಂಡುಗಳಲ್ಲಿ ಅವರು ಗುರಿ ತಲುಪಿದರು.
ರಾಜ್ಯ ಮತ್ತು ಜಿಲ್ಲಾ ಅಥ್ಲೆಟಿಕ್ ಸಂಸ್ಥೆಗಳು ಮಂಗಳೂರಿನ ಮೊಗವೀರ ವ್ಯವಸ್ಥಾಪನಾ ಮಂಡಳಿ ಮತ್ತು ಯಾಂತ್ರಿಕ ಬೋಟ್ ಮಾಲೀಕರ ಸಂಘದ ಸಹಯೋಗದಲ್ಲಿ ಈ ಕೂಟ ಆಯೋಜಿಸಿವೆ.
ಮೊದಲ ದಿನದ ಫಲಿತಾಂಶಗಳು
23 ವರ್ಷದೊಳಗಿನ ಪುರುಷರ 800 ಮೀ: ತುಷಾರ್ (ಬೆಳಗಾವಿ)–1. ಕಾಲ: 1ನಿ 55.06 ಸೆ, ಆಶ್ರಿತ್ ಎಂ.ಎಸ್ (ಶಿವಮೊಗ್ಗ)–2, ಸೂರ್ಯ ಕೆ (ಯಾದಗಿರಿ)–3; 20 ವರ್ಷದೊಳಗಿನವರ 800 ಮೀ: ಲೋಕೇಶ್ ಕೆ (ಯಾದಗಿರಿ)–1. ಕಾಲ: 1ನಿ 52.45ಸೆ (ಕೂಟ ದಾಖಲೆ: ಹಿಂದಿನ ದಾಖಲೆ: ಆಕಾಶ್ ಗೊಲ್ಲರ 1ನಿ 52.90ಸೆ), ಬೋಪಣ್ಣ ಕೆ.ಎ (ಮೈಸೂರು)–2, ರಮೇಶ್ (ಯಾದಗಿರಿ)–3; 18 ವರ್ಷದೊಳಗಿನ ಬಾಲಕರ 800 ಮೀ: ಕೆ.ಬಿ.ಯಶವಂತ್ (ದಕ್ಷಿಣ ಕನ್ನಡ)–1. ಕಾಲ: 1ನಿ 56.40ಸೆ, ರಾಮು ಯಂಕ (ದ.ಕ)–2, ಸೈಯದ್ ಇರ್ಫಾನ್ (ಧಾರವಾಡ)–3; 16 ವರ್ಷದೊಳಗಿನ ಬಾಲಕರ 800 ಮೀ: ಸೈಯದ್ ಸಬಿ (ಧಾರವಾಡ)–1.ಕಾಲ: 1ನಿ 57.73ಸೆ, ತನಿಷ್ ವಿ.ಎಚ್ (ಉಡುಪಿ)–2, ಸಾಕ್ಷಿತ್ ಸಿ. (ಚಿಕ್ಕಮಗಳೂರು)–3.
20 ವರ್ಷದೊಳಗಿನ ಮಹಿಳೆಯರ 800 ಮೀ: ರೇಖಾ ಬಸಪ್ಪ (ದ.ಕ)–1. ಕಾಲ: 2ನಿ 16.59ಸೆ, ಪ್ರತೀಕ್ಷಾ (ಉಡುಪಿ)–2, ಪ್ರಣಮ್ಯ (ಯಾದಗಿರಿ)–3; 18 ವರ್ಷದೊಳಗಿನ ಬಾಲಕಿಯರ 800 ಮೀ: ಪ್ರಿಯಾಂಕಾ (ಧಾರವಾಡ)–1. ಕಾಲ: 2ನಿ 14.50ಸೆ, ಶರಣ್ಯಾ (ಬೆಂಗಳೂರು)–2, ಶಿಲ್ಪಾ ರಾಕೇಶ್ (ಧಾರವಾಡ)–3; 16 ವರ್ಷದೊಳಗಿನ ಬಾಲಕಿಯರ 800 ಮೀ: ಅಕ್ಷರಾ (ಬೆಳಗಾವಿ)–1. ಕಾಲ: 2ನಿ 29.56ಸೆ, ಇಂಪನಾ ಕೆ.ಆರ್ (ಬೆಂಗಳೂರು)–2, ಸ್ನೇಹಾ ಎಂ.ಎಂ (ಕೊಡಗು)–3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.