ರಾಜಗೀರ್, ಬಿಹಾರ: ಹಾಲಿ ಚಾಂಪಿಯನ್ ಭಾರತ ತಂಡವು ಮಹಿಳೆಯರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಇಂದು (ಶನಿವಾರ) ಚೀನಾ ಎದುರು ಸೆಣಸಲಿದೆ.
ಈ ಟೂರ್ನಿಯಲ್ಲಿ ಉಭಯ ತಂಡಗಳು ಇದುವರೆಗೂ ಅಜೇಯವಾಗುಳಿದಿವೆ. ತಲಾ 9 ಅಂಕ ಗಳಿಸಿವೆ. ಆದ್ದರಿಂದ ಈ ಪಂದ್ಯವು ತೀವ್ರ ಜಿದ್ದಾಜಿದ್ದಿನಿಂದ ನಡೆಯುವ ನಿರೀಕ್ಷೆ ಗರಿಗೆದರಿದೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ 6ನೇ ಸ್ಥಾನದಲ್ಲಿರುವ ಚೀನಾ ತಂಡವು ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಚೀನಾ ತಂಡವು 21 ಗೋಲು ಗಳಿಸಿದ್ದು, ಭಾರತದ ಖಾತೆಯಲ್ಲಿ 18 ಗೋಲುಗಳಿವೆ. ಆದ್ದರಿಂದ ಚೀನಾ ತಂಡವು ಅಗ್ರಸ್ಥಾನ ಪಡೆದಿದೆ. ರೌಂಡ್ ರಾಬಿನ್ ಲೀಗ್‌ನಲ್ಲಿ ಮೊದಲ ನಾಲ್ಕು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಕಣದಲ್ಲಿ ಒಟ್ಟು ಆರು ತಂಡಗಳು ಇವೆ.
ಕಳೆದ ಫೆಬ್ರುವರಿಯಲ್ಲಿ ನಡೆದಿದ್ದ ಎಫ್‌ಐಎಚ್ ಪ್ರೊ ಲೀಗ್ ಟೂರ್ನಿಯಲ್ಲಿ ಉಭಯ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದವು. ಎರಡೂ ಸಲ ಚೀನಾ ಮೇಲುಗೈ ಸಾಧಿಸಿತ್ತು. ಈ ಟೂರ್ನಿಯಲ್ಲಿ ಎರಡೂ ತಂಡಗಳು ಇದುವರೆಗೂ ಆಡಿರುವ ಪಂದ್ಯಗಳಲ್ಲಿ ಗೋಲುಗಳ ಮಳೆ ಸುರಿಸಿವೆ.
ಕಳೆದ ಪಂದ್ಯದಲ್ಲಿ ಭಾರತ ತಂಡವು ಥಾಯ್ಲೆಂಡ್ ಎದುರು 13–0 ಗೋಲುಗಳಿಂದ ಗೆದ್ದಿತ್ತು. ಸಲೀಮಾ ಟೆಟೆ ನಾಯಕತ್ವದ ಭಾರತ ತಂಡವು ಥಾಯ್ಲೆಂಡ್ ವಿರುದ್ಧ ಎಂಟು ಫೀಲ್ಡ್ ಗೋಲುಗಳನ್ನು ಗಳಿಸಿತ್ತು. ಐದು ಪೆನಾಲ್ಟಿ ಕಾರ್ನರ್ ಮೂಲಕ ಬಂದಿದ್ದವು. ಒಟ್ಟು 12 ಪೆನಾಲ್ಟಿ ಕಾರ್ನರ್‌ಗಳು ಲಭಿಸಿದ್ದವು. ಈ ಪಂದ್ಯದಲ್ಲಿ ಭಾರತದ ದೀಪಿಕಾ ಮುಂದಾಳತ್ವದ ಫಾರ್ವರ್ಡ್ ಪಡೆಯು ಅಮೋಘ ಆಟವಾಡಿತು. ದೀಪಿಕಾ ಅವರೇ ಐದು ಗೋಲುಗಳನ್ನು ಹೊಡೆದರು. ಪ್ರೀತಿ ದುಬೆ, ನವನೀತ್ ಕೌರ್, ಲಾಲ್‌ರೆಮ್ರಿಯಾಮಿ, ಬ್ಯೂಟಿ ಡುಂಗ್ ಹಾಗೂ ಸಂಗೀತಾ ಕುಮಾರಿ ಅವರೂ ತಮ್ಮ ಸಾಮರ್ಥ್ಯ ಮೆರೆದರು.
ಥಾಯ್ಲೆಂಡ್‌ನಿಂದ ಹೆಚ್ಚು ಕಠಿಣ ಸವಾಲು ಇರದ ಕಾರಣ ಬ್ಯಾಕ್‌ಲೈನ್ ಆಟಗಾರರಿಗೆ ಹೆಚ್ಚು ಕೆಲಸವಿರಲಿಲ್ಲ. ಮಿಡ್‌ಫೀಲ್ಡ್‌ನಲ್ಲಿ ನಾಯಕಿ ಸಲೀಮಾ, ನೇಹಾ ಗೋಯಲ್, ಸುಶೀಲಾ ಚಾನು ಹಾಗೂ ಉದಿತಾ ಅವರ ಮುಂದೆ ಈಗ ಚೀನಾದ ದಾಳಿಯನ್ನು ಮೆಟ್ಟಿ ನಿಲ್ಲುವ ಸವಾಲು ಇದೆ. ಗೋಲ್‌ಕೀಪರ್ ಸವಿತಾ ಪೂನಿಯಾ ಮತ್ತು ಬಿಚು ದೇವಿ ಅವರಿಗೆ ನಿಜವಾದ ಪರೀಕ್ಷೆ ಈ ಪಂದ್ಯದಲ್ಲಿ ಎದುರಾಗಬಹುದು.
‘ತಂಡದ ಸ್ವರೂಪವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಿರುವ ಆಟಗಾರ್ತಿಯರ ಬಗ್ಗೆ ಸಂತಸವಾಗಿದೆ. ಗೋಲು ಗಳಿಕೆಯ ಮೇಲೆ ಹೆಚ್ಚು ಗಮನ ಇಟ್ಟಿದ್ದಾರೆ. ಡಿಫೆಂಡರ್ಸ್ ಮತ್ತು ಮಿಡ್‌ಫೀಲ್ಡರ್‌ಗಳ ನಡುವಣ ಹೊಂದಾಣಿಕೆಯು ಉತ್ತಮವಾಗಿದ್ದು ಮುಂದಿನ ಪಂದ್ಯಗಳಲ್ಲಿಯೂ ಇದು ಮುಂದುವರಿಯಲಿದೆ’ ಎಂದು ತಂಡದ ಮುಖ್ಯ ಕೋಚ್ ಹರೇಂದ್ರ ಸಿಂಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.