ಕೋಲ್ಕತ್ತ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡಿರುವ ಕುಸ್ತಿಪಟು ವಿನೇಶಾ ಫೋಗಟ್ ಅವರಿಗೆ 'ಭಾರತ ರತ್ನ' ಅಥವಾ ರಾಷ್ಟ್ರಪತಿ ನಾಮನಿರ್ದೇಶಿತ ರಾಜ್ಯಸಭಾ ಸ್ಥಾನ ನೀಡಿ ಗೌರವಿಸುವಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಒತ್ತಾಯಿಸಿದೆ.
ಮಹಿಳೆಯರ 50 ಕೆ.ಜಿ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್‌ಗೆ ಪ್ರವೇಶಿಸಿದ್ದ ವಿನೇಶಾ ಇತಿಹಾಸ ರಚಿಸಿದ್ದರು. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟುವೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ದುರದೃಷ್ಟವಶಾತ್ 100 ಗ್ರಾಂ ತೂಕ ಹೆಚ್ಚಿದ್ದರಿಂದ ಫೈನಲ್‌ನಲ್ಲಿ ಆಡುವ ಅವಕಾಶದಿಂದ ವಂಚಿತರಾಗಿದ್ದರು. ಇದರೊಂದಿಗೆ ಪದಕ ಗೆಲ್ಲುವ ಕನಸು ಭಗ್ನಗೊಂಡಿದ್ದು, ಬರಿಗೈಯಲ್ಲಿ ತವರಿಗೆ ಮರಳುವಂತಾಗಿದೆ.
'ವಿನೇಶಾ ಫೋಗಟ್ ಅವರ ಅಸಾಮಾನ್ಯ ಪ್ರದರ್ಶನವನ್ನು ಗುರುತಿಸಿ ಭಾರತ ರತ್ನ ಅಥವಾ ರಾಷ್ಟ್ರಪತಿ ನಾಮನಿರ್ದೇಶಿತ ರಾಜ್ಯಸಭಾ ಸ್ಥಾನ ನೀಡಿ ಗೌರವಿಸಲು ಸರ್ಕಾರ ಹಾಗೂ ವಿಪಕ್ಷಗಳು ಒಮ್ಮತವನ್ನು ಕಂಡುಕೊಳ್ಳಬೇಕು. ವಿನೇಶಾ ಎದುರಿಸಿದ ಕಷ್ಟಗಳಿಗೆ ನಾವು ಕನಿಷ್ಠ ಪಕ್ಷ ಇಷ್ಟಾದರೂ ಮಾಡಬೇಕು. ಯಾವ ಪದಕವು ವಿನೇಶಾಳ ನಿಜವಾದ ಸಾಧನೆಯನ್ನು ಸರಿದೂಗಿಸಲು ಸಾಧ್ಯವಿಲ್ಲ' ಎಂದು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.
ಕಳೆದ ವರ್ಷ ಭಾರತ ಕುಸ್ತಿ ಫೇಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಅವರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ಕುಸ್ತಿಪಟುಗಳು ನಡೆಸಿದ್ದ ಪ್ರತಿಭಟನೆಯಲ್ಲಿ ವಿನೇಶಾ ಮುಂಚೂಣಿಯಲ್ಲಿದ್ದರು. ಈ ಸಂಬಂಧ ವಿಡಿಯೊವನ್ನು ಟಿಎಂಸಿ ಹಂಚಿದೆ.
'ಇಚ್ಛಾಶಕ್ತಿ ಹಾಗೂ ಪರಿಶ್ರಮದ ಮೂಲಕ ನೀವು ಸಾಧಿಸಿದ ಸಾಧನೆಯನ್ನು ಅಳೆಯಲು ಸಾಧ್ಯವಿಲ್ಲ. ನೀವು 140 ಕೋಟಿ ಭಾರತೀಯರ ಮುಖದಲ್ಲಿ ಮಂದಹಾಸ ಬೀರಿದ್ದೀರಿ. ನೀವು ಎಂದಿಂದಿಗೂ ನೈಜ ಹೋರಾಟಗಾರ್ತಿ! ಇಡೀ ದೇಶವೇ ನಿಮ್ಮೊಂದಿಗೆ ನಿಂತಿದೆ' ಎಂದು ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.