ಟೋಕಿಯೊ: ಉದ್ದೀಪನ ಮದ್ದು ಪರೀಕ್ಷಾ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 18 ಅಥ್ಲೀಟ್‌ಗಳನ್ನು ಅನರ್ಹಗೊಳಿಸಲಾಗಿದೆ ಎಂದು ಅಥ್ಲೀಟಿಕ್ಸ್ ಇಂಟೆಗ್ರಿಟಿ ಯೂನಿಟ್ (ಎಐಯು) ತಿಳಿಸಿದೆ.
ಇದರಿಂದಾಗಿ ನೈಜೀರಿಯಾದ 10 ಅಥ್ಲೀಟ್‌ಗಳು ಸೇರಿದಂತೆ ಒಟ್ಟು 18 ಅಥ್ಲೀಟ್‌ಗಳ ಒಲಿಂಪಿಕ್ಸ್ ಕನಸು ಭಗ್ನಗೊಂಡಿದೆ.
ವಿಶ್ವ ಅಥ್ಲೀಟ್ ಸ್ವತಂತ್ರ ಉದ್ದೀಪನ ಮದ್ದು ನಿಷೇಧ ಘಟಕವಾದ ಅಥ್ಲೀಟಿಕ್ಸ್ ಇಂಟೆಗ್ರಿಟಿ ಯೂನಿಟ್ ಕಠಿಣ ಕ್ರಮ ಕೈಗೊಂಡಿದ್ದು, ಡೋಪಿಂಗ್ ಮಾಡಲು ಸಾಧ್ಯತೆಯಿರುವ ದೇಶಗಳಿಂದ ಭಾಗವಹಿಸುವ ಅಥ್ಲೀಟ್‌ಗಳು, 2019ರಲ್ಲಿ ಜಾರಿಗೆ ತಂದ ನಿಯಮಗಳನ್ನು ಪಾಲಿಸುವಲ್ಲಿ ವಿಫಲರಾಗಿದ್ದಾರೆ ಎಂದಿದೆ.
'ಹೈ-ರಿಸ್ಕ್' (ಅತ್ಯಂತ ಅಪಾಯಕಾರಿ) 'ಎ' ಕೆಟಗರಿಗೆ ಒಳಪಟ್ಟ ದೇಶಗಳ ಅಥ್ಲೀಟ್‌ಗಳು, ಪ್ರಮುಖ ಕ್ರೀಡಾಕೂಟಕ್ಕೂ ಮೊದಲು 10 ತಿಂಗಳ ಅವಧಿಯಲ್ಲಿ ಮೂರು ಬಾರಿ ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಬೇಕಿದೆ.
ನೈಜೀರಿಯಾದ ಹೊರತಾಗಿ ಬೆಲುರಸ್ ಹಾಗೂ ಉಕ್ರೇನ್‌ನ ತಲಾ ಮೂವರು, ಕೀನ್ಯಾದ ಇಬ್ಬರು ಮತ್ತು ಎಥಿಯೋಪಿಯಾ ಹಾಗೂ ಮೊರಕ್ಕೊದ ತಲಾ ಒಬ್ಬರು ಅಥ್ಲೀಟ್‌ಗಳನ್ನು ಅನರ್ಹಗೊಳಿಸಲಾಗಿದೆ. ಈ ಪೈಕಿ ಕೀನ್ಯಾದ ಇಬ್ಬರು ಅಥ್ಲೀಟ್‌ಗಳನ್ನು ಎಂಟ್ರಿ ಸಲ್ಲಿಸುವ ಮುನ್ನವೇ ಬದಲಾಯಿಸಲಾಗಿದೆ.
ಒಟ್ಟಿನಲ್ಲಿ ನೈಜೀರಿಯಾ ಅತಿ ಹೆಚ್ಚು ಆಘಾತಕ್ಕೊಳಗಾಗಿದ್ದು, ರಾಷ್ಟ್ರದ 23 ಅಥ್ಲೀಟ್‌ಗಳ ಪೈಕಿ 10 ಮಂದಿ ಅನರ್ಹಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.