ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಭರವಸೆಯಾಗಿದ್ದ ವಿಶ್ವ ಅಗ್ರ ಶ್ರೇಯಾಂಕಿತೆ ಆರ್ಚರಿ ಪಟು ದೀಪಿಕಾ ಕುಮಾರಿ, ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ.
ಇದರೊಂದಿಗೆ ಸತತ ಮೂರನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ದೀಪಿಕಾ, ಪದಕ ಗೆಲ್ಲುವಲ್ಲಿ ವಿಫಲರಾಗಿದ್ದಾರೆ.
ಶುಕ್ರವಾರ ನಡೆದ ಮಹಿಳೆಯರ ವೈಯಕ್ತಿಕ ವಿಭಾಗದ ಅಂತಿಮ ಎಂಟರ ಘಟ್ಟದಲ್ಲಿ ದೀಪಿಕಾ, ದಕ್ಷಿಣ ಕೊರಿಯಾದ ಎನ್ ಸ್ಯಾನ್ ವಿರುದ್ಧ 0-6ರ ಅಂತರದಲ್ಲಿ ಪರಾಭವಗೊಂಡರು.
2012ರ ಲಂಡನ್ ಒಲಿಂಪಿಕ್ಸ್‌ನಲ್ಲೂ ಅಗ್ರ ಶ್ರೇಯಾಂಕಿತೆ ಆರ್ಚರಿ ಪಟುವಾಗಿ ಕಣಕ್ಕಿಳಿದಿದ್ದ ದೀಪಿಕಾ ಮೊದಲ ಸುತ್ತಿನಲ್ಲೇ ಸೋಲಿನ ಆಘಾತ ಅನುಭವಿಸಿದ್ದರು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿದ್ದರು. ಈ ಬಾರಿ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಅನುಭವಿಸುವುದರೊಂದಿಗೆ ಪದಕದ ಕನಸು ಭಗ್ನಗೊಂಡಿದೆ.
ಈಗ ಆರ್ಚರಿ ವಿಭಾಗದಲ್ಲಿ ಭಾರತದ ಏಕ ಮಾತ್ರ ನಿರೀಕ್ಷೆಯಾಗಿರುವ ದೀಪಿಕಾ ಕುಮಾರಿ ಅವರ ಪತಿ ಅತನು ದಾಸ್, ಶನಿವಾರದಂದು ಅಂತಿಮ 16ರ ಹಂತದಲ್ಲಿ ಕಣಕ್ಕಿಳಿಯಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.