ADVERTISEMENT

ಟೋಕಿಯೊ ಒಲಿಂಪಿಕ್ಸ್: ದೀಪಾ ಮನದಲ್ಲಿ ಭರವಸೆಯ ಬೆಳಕು

ಪಿಟಿಐ
Published 30 ಮಾರ್ಚ್ 2020, 19:30 IST
Last Updated 30 ಮಾರ್ಚ್ 2020, 19:30 IST
ದೀಪಾ ಕರ್ಮಾಕರ್ –ಪಿಟಿಐ ಚಿತ್ರ
ದೀಪಾ ಕರ್ಮಾಕರ್ –ಪಿಟಿಐ ಚಿತ್ರ   

ನವದೆಹಲಿ: ಕೊರೊನಾ ಹಾವಳಿಯಿಂದ ಟೋಕಿಯೊ ಒಲಿಂಪಿಕ್ಸ್ ಮುಂದೂಡಿರುವುದು ಅನೇಕರ ಬೇಸರಕ್ಕೆ ಕಾರಣವಾಗಿದ್ದರೆ ಭಾರತದ ಅಗ್ರ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಮಾತ್ರ ಭರವಸೆಯಲ್ಲಿದ್ದಾರೆ. ಗಾಯದಿಂದ ಬಳಲುತ್ತಿರುವ ದೀಪಾ ಮುಂದೂಡಿರುವ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಲ್ಳುವ ನಿರೀಕ್ಷೆಯಲ್ಲಿದ್ದಾರೆ.

ಮೊಣಕಾಲು ನೋವಿನಿಂದಾಗಿ ದೀಪಾಗೆ ಒಲಿಂಪಿಕ್ಸ್ ಅರ್ಹತಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಈಗ, ಗುಣಮುಖರಾಗಿ ’ಅರ್ಹತೆ’ ಗಳಿಸಲು ಅವರಿಗೆ ಸಮಯಾವಕಾಶ ಲಭಿಸಿದಂತಾಗಿದೆ.

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ದೀಪಾ ಕಂಚಿನ ಪದಕದಿಂದ ಸ್ವಲ್ಪದರಲ್ಲೇ ವಂಚಿತರಾಗಿದ್ದರು. 2017ರಲ್ಲಿ ಲಿಗಮೆಂಟ್‌ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಕೆಲವು ತಿಂಗಳು ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಂಡಿರಲಿಲ್ಲ. ಮರುವರ್ಷ ಬಾಕುವಿನಲ್ಲಿ ನಡೆದ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್‌ ವಿಶ್ವಕಪ್‌ನಲ್ಲಿ ಮತ್ತೆ ಸಮಸ್ಯೆ ಕಾಡಿತ್ತು. ದೋಹಾದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲೂ, 2019ರ ಅಕ್ಟೋಬರ್‌ನಲ್ಲಿ ನಡೆದ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲೂ ಪಾಲ್ಗೊಳ್ಳಲು ಆಗಲಿಲ್ಲ.

ADVERTISEMENT

‘ಒಟ್ಟು ವಿಶ್ವಕಪ್‌ಗಳ ಪೈಕಿ ಎರಡು ಮಾತ್ರ ಉಳಿದುಕೊಂಡಿವೆ. ಅವು ಮಾರ್ಚ್‌ನಲ್ಲಿ ನಡೆಯಬೇಕಾಗಿತ್ತು. ಆದರೆ ಕೊರೊನಾ ಭೀತಿಯಿಂದಾಗಿ ಮುಂದೂಡಲಾಗಿದ್ದು ಜೂನ್‌ನಲ್ಲಿ ನಡೆಯಲಿವೆ. ಒಲಿಂಪಿಕ್ಸ್ ಮುಂದಿನ ವರ್ಷ ನಡೆಯಲಿರುವುದರಿಂದ ಚೇತರಿಸಿಕೊಳ್ಳಲು ಮತ್ತು ಎರಡು ವಿಶ್ವಕಪ್‌ಗಳಲ್ಲಿ ಪಾಲ್ಗೊಂಡು ಅರ್ಹತೆ ಗಿಟ್ಟಿಸಿಕೊಳ್ಳಲು ನನಗೆ ಸಾಕಷ್ಟು ಅವಕಾಶ ಸಿಗಲಿದೆ’ ಎಂದು ಸುದ್ದಿಸಂಸ್ಥೆಗೆ ದೀಪಾ ತಿಳಿಸಿದರು.

‘ಒಲಿಂ‍ಪಿಕ್ಸ್‌ ಮುಂದೂಡಿರುವುದರಿಂದ ದೀಪಾ ಅವರಲ್ಲಿ ಭರವಸೆಯ ಹೊಸಬೆಳಕು ಮೂಡಿದೆ’ ಎಂದು ಕೋಚ್ ವಿಶ್ವೇಶ್ವರ ನಂದಿ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.