ADVERTISEMENT

Tokyo Olympics | ಪದಕಕ್ಕೆ ಪಂಚ್; ಮೇರಿ ಕೋಮ್, ವಿಜೇಂದರ್ ಸಾಲಿಗೆ ಲವ್ಲಿನಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜುಲೈ 2021, 6:01 IST
Last Updated 30 ಜುಲೈ 2021, 6:01 IST
ಲವ್ಲಿನಾ ಬೊರ್ಗೊಹೈನ್
ಲವ್ಲಿನಾ ಬೊರ್ಗೊಹೈನ್   

ಟೋಕಿಯೊ: ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಅವರಿಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಸಾಧ್ಯವಾಗದೇ ಇರಬಹುದು. ಆದರೆ ಅವರದ್ದೇ ಹಾದಿ ತುಳಿದಿರುವ 23ರ ಹರೆಯದ ಯುವ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್, ಕನಿಷ್ಠ ಕಂಚಿನ ಪದಕ ಖಾತ್ರಿಪಡಿಸುವ ಮೂಲಕ ವಿಶ್ವದೆಲ್ಲೆಡೆ ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ.

ಮಹಿಳೆಯರ ವೆಲ್ಟರ್‌ವೇಟ್ (69 ಕೆ.ಜಿ) ವಿಭಾಗದ ಕ್ವಾರ್ಟರ್‌ಫೈನಲ್ ಮುಖಾಮುಖಿಯಲ್ಲಿ ಅಸ್ಸಾಂ ಮೂಲದ ಲವ್ಲಿನಾ, ಮಾಜಿ ವಿಶ್ವ ಚಾಂಪಿಯನ್ ಚೀನಾ ತೈಪೆಯ ಚಿನ್ ಚೆನ್ ವಿರುದ್ಧ 4-1ರ ಅಂತರದ ಗೆಲುವು ದಾಖಲಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.ಇದರೊಂದಿಗೆ ಕನಿಷ್ಠ ಕಂಚಿನ ಪದಕ ಖಚಿತಪಡಿಸಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ತಮ್ಮ ಮೆಚ್ಚಿನಮೇರಿ ಕೋಮ್ ಹಾಗೂ ವಿಜೇಂದರ್ ಸಿಂಗ್ ಸಾಧನೆಯನ್ನು ಲವ್ಲಿನಾ ಸರಿಗಟ್ಟಿದ್ದಾರೆ. ಅಲ್ಲದೆ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಭಾರತದ ಮೂರನೇ ಬಾಕ್ಸರ್ ಎಂಬ ಹಿರಿಮೆಗೆ ಭಾಜನರಾಗಲಿದ್ದಾರೆ.

2008ರಲ್ಲಿ ವಿಜೇಂದರ್ ಹಾಗೂ 2012ರಲ್ಲಿ ಮೇರಿ ಕಂಚಿನ ಪದಕ ಗೆದ್ದಿದ್ದರು. ಈಗ ಲವ್ಲಿನಾಗೆ ಅದಕ್ಕಿಂತಲೂ ಉತ್ತಮ ಸಾಧನೆ ಮಾಡುವ ಅವಕಾಶವೊದಗಿ ಬಂದಿದೆ.

ರಿಯೋ ಸಾಧನೆ ಸರಿಗಟ್ಟಿದ ಭಾರತ...
2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಕೇವಲ ಎರಡು ಪದಕಗಳನ್ನಷ್ಟೇ ಗೆದ್ದಿತ್ತು. ಆ ಸಾಧನೆಯನ್ನೀಗ ಭಾರತ ಸರಿಗಟ್ಟಿದೆ.

ನಾರಿಶಕ್ತಿಯ ಪ್ರತೀಕ...
ಲವ್ಲಿನಾ ಬೊರ್ಗೊಹೈನ್ ಭಾರತದ ನಾರಿಶಕ್ತಿಯ ಪ್ರತೀಕವಾಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಮಹಿಳೆಯರ ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದರು. ಈಗ ಈಶಾನ್ಯ ಭಾರತದ ಮತ್ತೊಬ್ಬ ಮಹಿಳಾ ಸ್ಪರ್ಧಿ ದೇಶದ ಪಾಲಿಗೆ ಹೆಮ್ಮೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.