ನವದೆಹಲಿ: ಭಾರತಕ್ಕೆ ಏಕೈಕ ವೈಯಕ್ತಿಕ ಒಲಿಂಪಿಕ್ ಚಿನ್ನದ ಪದಕ ತಂದುಕೊಟ್ಟಿರುವ ಖ್ಯಾತಿ ಹೊಂದಿರುವ ಶೂಟರ್ ಅಭಿನವ್ ಬಿಂದ್ರಾ ಅವರು ವೇಟ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು ಅವರನ್ನು ಪ್ರಶಂಸಿಸಿ ಪತ್ರ ಬರೆಯುವ ಮೂಲಕ ಹಾಡಿ ಹೊಗಳಿದ್ದಾರೆ.
ಭಾರತೀಯ ವೇಟ್‌ಲಿಫ್ಟರ್‌ನ ಈ ಅದ್ಭುತ ಸಾಧನೆಯು ದೇಶವು ಉಲ್ಬಣಗೊಳ್ಳುತ್ತಿರುವ ಕೋವಿಡ್–19 ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿರುವ ಸಮಯದಲ್ಲಿ ‘ಒಂದು ಸವಿ ನೆನಪಾಗಿ’ ಉಳಿಯಲಿದೆ ಎಂದು ಬಣ್ಣಿಸಿದ್ದಾರೆ.
ಮೀರಾ ಅವರ ಈ ಸಾಧನೆಯು ತಲೆಮಾರಿನವರೆಗೆ ಭಾರತೀಯರಿಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದ್ದಾರೆ.
49 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕದ ಸಾಧನೆಯೊಂದಿಗೆ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದ ಮೊದಲ ದಿನವೇ ಭಾರತದ ಪದಕ ಬೇಟೆಗೆ 21 ವರ್ಷದ ಮೀರಾಬಾಯಿ ಚಾನು ಮುನ್ನುಡಿ ಬರೆದರು.
‘ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ನಿಮ್ಮ ಅತ್ಯುತ್ತಮ ಸಾಧನೆಯು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುವೊಬ್ಬರು ಮಾಡಿದ ಅತ್ಯುತ್ತಮ ಸಾಧನೆಯಾಗಿ ನೆನಪಿನಲ್ಲಿ ಉಳಿಯಲಿದೆ. ಮುಂದಿನ ಪೀಳಿಗೆಗೆ ಇದು ಸ್ಫೂರ್ತಿಯಾಗಿ ಪರಿಣಮಿಸುತ್ತದೆ.’ ಎಂದು ಬಿಂದ್ರಾ ಪತ್ರದಲ್ಲಿ ಬರೆದಿದ್ದಾರೆ.
‘ಸಾಂಕ್ರಾಮಿಕ ರೋಗದ ಈ ದುರಿತ ಕಾಲದಲ್ಲಿ, ನಿಮ್ಮಂತಹ ವಿಜಯಗಳು ಭರವಸೆ ಮತ್ತು ಪರಿಶ್ರಮದಿಂದ ತರಬಹುದಾದ ಸಂತೋಷದ ಒಂದು ಸಣ್ಣ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತವೆ.’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.