ADVERTISEMENT

Tokyo Olympics: ಜಿಮ್ನಾಸ್ಟಿಕ್ಸ್- ಪದಕದ ದೀಪ ಬೆಳಗಿಸುವರೇ ಪ್ರಣತಿ?

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 11:18 IST
Last Updated 24 ಜುಲೈ 2021, 11:18 IST
ಪ್ರಣತಿ ನಾಯಕ್‌– ಎಎಫ್‌ಪಿ ಚಿತ್ರ
ಪ್ರಣತಿ ನಾಯಕ್‌– ಎಎಫ್‌ಪಿ ಚಿತ್ರ   

ಟೋಕಿಯೊ: ಜಿಮ್ನಾಸ್ಟಿಕ್ಸ್ ಕ್ರೀಡೆಯಲ್ಲಿ ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸಿದ ಭಾರತದ ಎರಡನೇ ಮಹಿಳಾ ಸ್ಪರ್ಧಿ ಪ್ರಣತಿ ನಾಯಕ್‌.2016ರ ರಿಯೊ ಒಲಿಂಪಿಕ್ಸ್‌ನಲ್ಲಿ ದೀಪಾ ಕರ್ಮಾಕರ್ ಬಿತ್ತಿದ ಕನಸಿಗೆ ಬಣ್ಣ ತುಂಬುವ ತವಕದಲ್ಲಿದ್ದಾರೆ ಪಶ್ಚಿಮ ಬಂಗಾಳದ ಪ್ರಣತಿ.

ತ್ರಿಪುರಾದ ದೀಪಾ, ರಿಯೊ ಕೂಟದಲ್ಲಿ ಮಹಿಳೆಯರ ವಾಲ್ಟ್‌ ವಿಭಾಗದಲ್ಲಿ ಅಲ್ಪ ಅಂತರದಲ್ಲಿ ಕಂಚಿನ ಪದಕ ತಪ್ಪಿಸಿಕೊಂಡಿದ್ದರು. ನಾಲ್ಕನೇ ಸ್ಥಾನ ಗಳಿಸಿದ್ದರು. ಆದರೆ ಗಾಯದಿಂದಾಗಿ ಅವರು ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿಲ್ಲ.

ಪಶ್ಚಿಮ ಬಂಗಾಳದ ಪಿಂಗ್ಲಾದ ಹುಡುಗಿ ಪ್ರಣತಿ ಮೇಲೆ ಈಗ ಪದಕದ ನಿರೀಕ್ಷೆಯಿದೆ. ಏಷ್ಯನ್ ಕೋಟಾದಡಿ ಒಲಿಂಪಿಕ್ಸ್ ಟಿಕೆಟ್‌ ಗಿಟ್ಟಿಸಿರುವ ಅವರು, ಭಾನುವಾರ ಅರಿಯೇಕ್ ಜಿಮ್ನಾಸ್ಟಿಕ್ಸ್ ಕೇಂದ್ರದಲ್ಲಿ ನಡೆಯುವ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸುತ್ತಿದ್ದಾರೆ.

ADVERTISEMENT

26 ವರ್ಷದ ಪ್ರಣತಿಗೆ ಮಿನಾರಾ ಬೇಗಂ ಅವರು ಹಲವು ವರ್ಷಗಳ ಕಾಲ ತರಬೇತಿ ನೀಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಪ್ರಣತಿ, ವಾಲ್ಟ್‌ನಲ್ಲಿ ಪರಿಣತಿ ಸಾಧಿಸಿದ್ದಾರೆ. ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್) ಕೋಚ್‌ ಲಖನ್ ಶರ್ಮಾ ಕೂಡ ಪ್ರಣತಿ ಅಭ್ಯಾಸಕ್ಕೆ ನೀರೆರೆದಿದ್ದಾರೆ. ಪ್ರಣತಿ ಬಡತನ ಕುಟುಂಬದ ಹಿನ್ನೆಲೆಯಿಂದ ಬಂದವರು. ತಂದೆ ಶ್ರೀಮಂತ ನಾಯಕ್‌ ಬಸ್‌ ಚಾಲಕ ವೃತ್ತಿ ಮಾಡುತ್ತಿದ್ದವರು. ಅವರಿಗೆ ಮೂವರು ಪುತ್ರಿಯರು. ಬಾಲ್ಯದಿಂದಲೇ ಕ್ರೀಡಾಪ್ರೇಮ ಬೆಳೆಸಿಕೊಂಡ ಪ್ರಣತಿಯ ಪ್ರತಿಭೆಯನ್ನು ತಂದೆ ಶ್ರೀಮಂತಗೊಳಿಸಿದರು.

2019ರಲ್ಲಿ ಉಲಾನ್‌ಬಾತರ್‌ನಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್‌ಷಿಪ್‌ನ ವಾಲ್ಟ್‌ ಪ್ರಣತಿ ಕಂಚಿನ ಪದಕ ಜಯಿಸಿದ್ದರು. ಅದೇ ವರ್ಷ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 45.832 (ವಾಲ್ಟ್‌ 14.200, ಫ್ಲೋರ್ ಎಕ್ಸೈಜ್ 11.133, ಬಾರ್ 10.566 ಮತ್ತು ಬೀಮ್‌ನಲ್ಲಿ 9.933) ಪಾಯಿಂಟ್‌ಗಳನ್ನು ಗಳಿಸಿದ್ದರು.

ರಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕು ಚಿನ್ನದ ಪದಕ ಜಯಿಸಿದ್ದ ಅಮೆರಿಕದ ಸಿಮೊನಾ ಬೈಲ್ಸ್‌ ಈ ಬಾರಿಯೂ ಫೆವರಿಟ್ ಆಗಿದ್ದಾರೆ. ಚೀನಾ, ರಷ್ಯಾ ಸ್ಪರ್ಧಿಗಳು ಕಠಿಣ ಸ್ಪರ್ಧೆ ನೀಡಬಲ್ಲರು.

2016ರ ಒಲಿಂಪಿಕ್ಸ್‌ನ ಮಹಿಳಾ ವೈಯಕ್ತಿಕ ಆಲ್‌ರೌಂಡ್ ವಿಭಾಗದಲ್ಲಿ ಪದಕ ಜಯಿಸಿದವರು

ಸ್ಪರ್ಧಿ ದೇಶ ಪದಕ
ಸಿಮೊನಾ ಬೈಲ್ಸ್ ಅಮೆರಿಕ ಚಿನ್ನ
ಆ್ಯಲಿ ರೈಸಮನ್‌ ಅಮೆರಿಕ ಬೆಳ್ಳಿ
ಅಲಿಯಾ ಮುಸ್ತಫಿನಾ ರಷ್ಯಾ ಕಂಚು

ಪ್ರಣತಿ ಸ್ಪರ್ಧಿಸುತ್ತಿರುವ ವಿಭಾಗಗಳು

ಬ್ಯಾಲನ್ಸ್ ಬೀಮ್‌

ಫ್ಲೋರ್‌

ಅನ್‌ಇವನ್ ಬಾರ್ಸ್‌

ವೈಯಕ್ತಿಕ ಆಲ್‌ರೌಂಡ್‌

ವಾಲ್ಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.