ಬೆಂಗಳೂರು: ಇತಿಹಾಸ ಮರುಕಳಿಸಿದೆ. ಭಾರತದ ಹಾಕಿ ಇತಿಹಾಸದಲ್ಲಿ ಸುವರ್ಣ ಅಧ್ಯಾಯದ ಪುಟ ತೆರೆದುಕೊಂಡಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಜರ್ಮನಿ ತಂಡವನ್ನು ಮಣಿಸಿರುವ ಭಾರತ, 41 ವರ್ಷಗಳ ಬಳಿಕ ಹಾಕಿಯಲ್ಲಿ ಪದಕ ಗೆದ್ದ ಸಾಧನೆ ಮಾಡಿದೆ.
ಇತಿಹಾಸದತ್ತ ಮೆಲುಕು ಹಾಕಿದಾಗ ಭಾರತ ಕಂಡ ಅಪರೂಪದ ಹಾಕಿ ಆಟಗಾರ, 'ಹಾಕಿ ಮಾಂತ್ರಿಕ' ಮೇಜರ್ ಧ್ಯಾನ್ ಚಂದ್ ಅವರಿದ್ದ ಭಾರತ ತಂಡ ಸತತ ಮೂರು ಬಾರಿ ಚಿನ್ನದ ಪದಕಗಳನ್ನು ಜಯಿಸಿತ್ತು.
1928ರ ಅಮ್‌ಸ್ಟರ್‌ಡಾಮ್, 1932ರ ಲಾಸ್ ಏಂಜಲೀಸ್ ಹಾಗೂ 1936ರ ಬರ್ಲಿನ್ ಒಲಿಂಪಿಕ್ಸ್‌ಗಳಲ್ಲಿ ಭಾರತ ಇತಿಹಾಸ ರಚಿಸಿತ್ತು. ಈ ಮೂಲಕ ಭಾರತದಲ್ಲಷ್ಟೇ ಅಲ್ಲದೆ ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ಆಟಗಾರನೆಂಬ ಬಿರುದಿಗೆ ಪಾತ್ರರಾಗಿದ್ದರು.
ಬರ್ಲಿನ್‌ನಲ್ಲಿ ಭಾರತ ಚಿನ್ನ ಗೆದ್ದಾಗ ಜರ್ಮನಿಯ ಅಂದಿನ ಅಧ್ಯಕ್ಷನಾಗಿದ್ದ ಅಡಾಲ್ಫ್ ಹಿಟ್ಲರ್, ತಮ್ಮ ದೇಶಕ್ಕಾಗಿ ಆಡಿದರೆ ನಾಗರಿಕತ್ವ ಹಾಗೂ ಮಿಲಿಟರಿಯಲ್ಲಿ ದೊಡ್ಡ ಹುದ್ದೆ ನೀಡುವುದಾಗಿ ಧ್ಯಾನ್ ಚಂದ್ ಅವರಿಗೆ ಭರವಸೆ ನೀಡಿದರು. ಆದರೆ ಅಪ್ಪಟ ದೇಶಪ್ರೇಮಿ ಧ್ಯಾನ್ ಚಂದ್ ಅದನ್ನು ತಿರಸ್ಕರಿಸಿದ್ದರು.
ಅಂದು ಜರ್ಮನಿಯ ವಿರುದ್ಧ ಅವರದ್ದೇ ನೆಲದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ 8-1 ಗೋಲುಗಳ ಅಂತರದ ಗೆಲುವು ದಾಖಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿತು. ಧ್ಯಾನ್ ಚಂದ್ ನಾಲ್ಕು ಗೋಲು ಬಾರಿಸಿ ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು.
ಇದನ್ನೂ ಓದಿ:Tokyo Olympics: ಹಾಕಿಯಲ್ಲಿ ಮರುಕಳಿಸಿದ ಗತಕಾಲದ ವೈಭವ; ಇತಿಹಾಸದತ್ತ ಹದ್ದು ನೋಟ
ಈಗ ಇತಿಹಾಸ ಮತ್ತೆ ಮರುಕಳಿಸಿದೆ. ಕಳೆದ ನಾಲ್ಕು ದಶಕಗಳಿಂದ ಒಲಿಂಪಿಕ್ ಪದಕದ ಬರ ಎದುರಿಸುತ್ತಿದ್ದ ಭಾರತ ತಂಡ ಮತ್ತದೇ ಜರ್ಮನಿಯನ್ನು ಮಣಿಸಿ ಹೊಸ ಹುರುಪು ಪಡೆದುಕೊಂಡಿದೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮೂರನೇಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಜರ್ಮನಿ ತಂಡವನ್ನು 5-4ರ ಗೋಲುಗಳಿಂದಸೋಲಿಸಿರುವಭಾರತ ಕಂಚಿನ ಪದಕ ಜಯಿಸಿದೆ. ಇದು ಭಾರತದ ಹಾಕಿ ಪಾಲಿಗೆ ಐತಿಹಾಸಿಕ ಕ್ಷಣವಾಗಿದ್ದು, ಮುಂಬರುವ ವರ್ಷಗಳಲ್ಲಿ ಹಾಕಿಯಲ್ಲಿ ಚಿನ್ನದ ಪದಕ ಗೆಲ್ಲಲು ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿದೆ ಎಂದೇ ನಿರೀಕ್ಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.