ಬೆಂಗಳೂರು: 1908ರಲ್ಲಿ ಒಲಿಂಪಿಕ್ಸ್ ಮಹಾಕ್ರೀಡಾಕೂಟದಲ್ಲಿ ಹಾಕಿ ಕ್ರೀಡೆಯನ್ನು ಮೊದಲ ಬಾರಿಗೆ ಪರಿಚಯಿಸಲಾಯಿತು. ಅಲ್ಲಿಂದ ಇದುವರೆಗೆ ಭಾರತ ಒಟ್ಟು ಎಂಟು ಚಿನ್ನದ ಪದಕಗಳನ್ನು ಜಯಿಸಿದೆ. ಇದರಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಮೂರು ಚಿನ್ನದ ಪದಕಗಳು ಸೇರಿವೆ.
1932ರಿಂದ 1956ರ ವರೆಗೆ ಭಾಗವಹಿಸಿದ ಆರು ಒಲಿಂಪಿಕ್ಸ್‌ಗಳಲ್ಲಿ ಭಾರತ ಹಾಕಿ ತಂಡವುಸತತವಾಗಿ ಚಿನ್ನ ಗೆದ್ದ ಸಾಧನೆ ಮಾಡಿತು. 1960ರಲ್ಲಿ ಪಾಕಿಸ್ತಾನ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಆದರೆ 1964ರಲ್ಲಿ ಮತ್ತದೇ ಪಾಕಿಸ್ತಾನವನ್ನು ಮಣಿಸಿ ಸ್ವರ್ಣದ ಪದಕಕ್ಕೆ ಮುತ್ತಿಕ್ಕಿತು. 1968 ಹಾಗೂ 1972ರಲ್ಲಿ ಕಂಚಿನ ಪದಕ ಜಯಿಸಿತು.
1980ರಲ್ಲೂ ಬಂಗಾರದ ಪದಕಕ್ಕೆ ಕೊರಳೊಡ್ಡಿತು. ಅಲ್ಲಿಂದಾಚೆಗೆ ಪದಕದ ಬರ ಎದುರಿಸುತ್ತಲೇ ಬಂದಿತ್ತು. ಇದೀಗ ನಾಲ್ಕು ದಶಕಗಳ ಬಳಿಕ 2021ರಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಮಗದೊಮ್ಮೆ ಭಾರತೀಯ ಹಾಕಿಯಲ್ಲಿ ಗತಕಾಲದ ವೈಭವ ಮರುಕಳಿಸಿದೆ.
ಇತಿಹಾಸದ ಪುಟ ತೆರೆದು ನೋಡಿದಾಗ ವಿಶ್ವ ಹಾಕಿ ಕ್ರೀಡೆಯಲ್ಲಿ ಭಾರತ ಅತಿ ಹೆಚ್ಚು ಚಿನ್ನದ ಪದಕಗಳನ್ನು ಜಯಿಸಿದ ಖ್ಯಾತಿಗೆ ಪಾತ್ರವಾಗಿದೆ. ಈ ಪೈಕಿ ಪುರುಷ ಹಾಕಿಯಲ್ಲಿ ಭಾರತ ಒಟ್ಟು ದಾಖಲೆಯ ಎಂಟು ಚಿನ್ನದ ಪದಕಗಳನ್ನು ಜಯಿಸಿದೆ. ಹಾಗೆಯೇ ಒಂದು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳು ಸೇರಿದಂತೆ ಒಟ್ಟು 12 ಪದಕಗಳನ್ನು ಗೆದ್ದಿವೆ. ಎರಡನೇ ಸ್ಥಾನದಲ್ಲಿರುವ ಪಾಕಿಸ್ತಾನ, ಬ್ರಿಟನ್ ಹಾಗೂ ಜರ್ಮನಿ ತಲಾ ಮೂರು ಬಾರಿ ಸ್ವರ್ಣ ಪದಕಗಳನ್ನು ಜಯಿಸಿವೆ.
PHOTOS: ಐತಿಹಾಸಿಕ ಕ್ಷಣ, ಹಾಕಿಯಲ್ಲಿ 41 ವರ್ಷಗಳ ಬಳಿಕ ಭಾರತಕ್ಕೆ ಕಂಚು...
ಒಲಿಂಪಿಕ್ಸ್ ಹಾಕಿಯಲ್ಲಿ ಭಾರತದ ಚಿನ್ನ ಸಾಧನೆ:
1928: ಆರ್ಮ್‌ಸ್ಟರ್‌ಡ್ಯಾಮ್, ನೆದರ್ಲೆಂಡ್ಸ್
1932: ಲಾಸ್ ಏಂಜಲೀಸ್, ಅಮೆರಿಕ
1936: ಬರ್ಲಿನ್, ಜರ್ಮನಿ
1948: ಲಂಡನ್, ಗ್ರೇಟ್ ಬ್ರಿಟನ್
1952: ಹೆಲ್ಸಿಂಕಿ, ಫಿನ್‌ಲ್ಯಾಂಡ್
1956: ಮೆಲ್ಬರ್ನ್, ಆಸ್ಟ್ರೇಲಿಯಾ
1964: ಟೋಕಿಯೊ, ಜಪಾನ್
1980: ಮಾಸ್ಕೊ, ಸೋವಿಯತ್ ಒಕ್ಕೂಟ
ಬೆಳ್ಳಿ:
1960: ರೋಮ್, ಇಟಲಿ
ಕಂಚು:
1968: ಮೆಕ್ಸಿಕೊ ಸಿಟಿ, ಮೆಕ್ಸಿಕೊ
1972: ಮ್ಯೂನಿಚ್, ಪಶ್ಚಿಮ ಜರ್ಮನಿ
2020: ಟೋಕಿಯೊ, ಜಪಾನ್
ಚಿನ್ನ: 8, ಬೆಳ್ಳಿ: 1, ಕಂಚು: 3, ಒಟ್ಟು: 12
ಅತ್ತ ಮಹಿಳಾ ಹಾಕಿಯಲ್ಲಿ ಕಂಚಿನ ಪದಕಕ್ಕಾಗಿ ಹೋರಾಡಲಿರುವ ಭಾರತ ತಂಡ ಚೊಚ್ಚಲ ಒಲಿಂಪಿಕ್ ಪದಕ ಗೆಲ್ಲುವ ಗುರಿ ನೆಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.