ಟೋಕಿಯೊ: 41 ವರ್ಷಗಳ ಬಳಿಕ ಹಾಕಿ ಕ್ರೀಡೆಯಲ್ಲಿ ಭಾರತ ಪದಕ ಗೆದ್ದ ಸಾಧನೆ ಮಾಡಿದೆ. ಟೋಕಿಯೊ ಒಲಿಂಪಿಕ್ಸ್ ಪುರುಷರ ಹಾಕಿಯಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಜರ್ಮನಿ ವಿರುದ್ಧ 5-4 ಗೋಲುಗಳ ಅಂತರದ ಗೆಲುವು ದಾಖಲಿಸಿರುವ ಭಾರತ ಕಂಚಿನ ಪದಕ ಗೆದ್ದಿದೆ.
ಇದರೊಂದಿಗೆ ದೇಶದ ಕೋಟ್ಯಂತರ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಭಾರತ ಹಾಕಿ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಒಂದು ಹಂತದಲ್ಲಿ 1-3 ಗೋಲುಗಳ ಅಂತರದ ಹಿನ್ನೆಡೆ ಅನುಭವಿಸಿದ್ಧ ಭಾರತ ದ್ವಿತಿಯಾರ್ಧದಲ್ಲಿ ತಿರುಗೇಟು ನೀಡಿತ್ತು. ಈ ಮೂಲಕ 5-3 ಗೋಲುಗಳ ಮುನ್ನಡೆ ಸಾಧಿಸಿತ್ತು.
ಕೊನೆಯ ಕ್ವಾರ್ಟರ್‌ನಲ್ಲಿ ಜರ್ಮನಿ ಗೋಲು ಬಾರಿಸುವುದರೊಂದಿಗೆ ಆತಂಕ ಮಡುಗಟ್ಟಿತ್ತು. ಅಲ್ಲದೆ ಪಂದ್ಯ ಕೊನೆಗೊಳ್ಳಲು ಇನ್ನೇನು ಆರು ಸೆಕೆಂಡುಗಳು ಮಾತ್ರ ಬಾಕಿ ಉಳಿದಿರುವಾಗ ಜರ್ಮನಿಗೆ ಮಗದೊಂದು ಪೆನಾಲ್ಟಿ ಕಾರ್ನರ್ ಅವಕಾಶ ದೊರಕಿತ್ತು.
ಈ ಹಂತದಲ್ಲಿ ಅದ್ಭುತ ಸೇವ್ ಮಾಡಿದ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಭಾರತ ತಂಡವು ಇತಿಹಾಸ ರಚಿಸುವಲ್ಲಿ ನೆರವಾದರು. ಹಾಕಿಯಲ್ಲಿ ಭಾರತದ ತಡೆಗೋಡೆ ಖ್ಯಾತಿಯ ಶ್ರೀಜೇಶ್, ಎಲ್ಲ ಪಂದ್ಯಗಳಲ್ಲೂಅಮೋಘ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಭಾರತದ ಪರ ಸಿಮ್ರಾನ್‌ಜೀತ್ ಸಿಂಗ್ (17ನೇ ಹಾಗೂ 34ನೇ ನಿಮಿಷ), ಹಾರ್ದಿಕ್ ಸಿಂಗ್ (27ನೇ ನಿಮಿಷ), ಹರ್ಮನ್‌ಪ್ರೀತ್ ಸಿಂಗ್ (29ನೇ ನಿಮಿಷ) ಮತ್ತು ರೂಪಿಂದರ್ ಪಾಲ್ ಸಿಂಗ್ (31ನೇ ನಿಮಿಷ) ವಿಜಯದ ಗೋಲುಗಳನ್ನು ಬಾರಿಸಿದರು. ಈ ಮೂಲಕ ಟೋಕಿಯೊದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಲು ನೆರವಾದರು.
ಭಾರತ ಹಾಕಿ ತಂಡದ ಕಂಚಿನ ಪದಕ ಗೆಲುವಿನ ರೋಚಕ ಕ್ಷಣಗಳ ವಿಡಿಯೊ ಇಲ್ಲಿದೆ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.