ಟೋಕಿಯೊ: ಜಪಾನ್‌ನಲ್ಲಿ ಸಾಗುತ್ತಿರುವ ಟೋಕಿಯೊ ಒಲಿಂಪಿಕ್ಸ್ ಮಹಿಳಾ ಡಿಸ್ಕಸ್ ಥ್ರೊ ಅರ್ಹತಾ ಸುತ್ತಿನಲ್ಲಿ ಶ್ರೇಷ್ಠ ಸಾಧನೆ ಮಾಡಿರುವ ಭಾರತದ ಕಮಲ್‌ಪ್ರೀತ್ ಕೌರ್ ಫೈನಲ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಶನಿವಾರ ನಡೆದ ಮಹಿಳೆಯರ ಡಿಸ್ಕಸ್ ಥ್ರೊ ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದ ಕೌರ್, ಪದಕ ಸುತ್ತಿಗೆ ಲಗ್ಗೆಯಿಟ್ಟರು. ಇದು ಒಲಿಂಪಿಕ್ಸ್ ಇತಿಹಾಸದಲ್ಲೇ ಭಾರತದ ಸ್ಪರ್ಧಿಯಿಂದ ದಾಖಲಾದ ಶ್ರೇಷ್ಠ ಸಾಧನೆಯಾಗಿದೆ.
25 ವರ್ಷದ ಕಮಲ್‌ಪ್ರೀತ್ ಕೌರ್, ತಮ್ಮ ಮೂರನೇ ಹಾಗೂ ಕೊನೆಯ ಪ್ರಯತ್ನದಲ್ಲಿ 64 ಮೀಟರ್ ದೂರ ಡಿಸ್ಕಸ್ ಎಸೆದರು. ಈ ಮೂಲಕ ನೇರವಾಗಿ ಫೈನಲ್‌ಗೆ ಅರ್ಹತೆ ಗಿಟ್ಟಿಸಿದರು. ಕೇವಲ ಇಬ್ಬರು ಅಥ್ಲೀಟ್‌ಗಳಿಗೆ ಮಾತ್ರ ಪದಕ ಸುತ್ತಿಗೆ ನೇರ ಅರ್ಹತೆ ಲಭಿಸಿದೆ. ಕಮಲ್‌ಪ್ರೀತ್‌ಗಿಂತಲೂ ಉತ್ತಮ ಸಾಧನೆ ಮಾಡಿರುವ ಅಮೆರಿಕದ ವಲಾರಿ ಆಲ್‌ಮನ್ 66.42 ಮೀಟರ್ ದೂರ ಡಿಸ್ಕಸ್ ಎಸೆದು ಅಗ್ರಸ್ಥಾನಿಯಾಗಿ ಪದಕ ಸುತ್ತಿಗೆ ಲಗ್ಗೆಯಿಟ್ಟರು.
ರಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಕ್ರೊವೇಷಿಯಾದ ಸಾಂಡ್ರಾ ಪೆರ್ಕೊವಿಕ್ (63.75 ಮೀಟರ್), ಕ್ಯೂಬಾದ ವಿಶ್ವ ಚಾಂಪಿಯನ್ ಯೈಮ್ ಪೆರೆಜ್ (63.18 ಮೀಟರ್) ಸಾಧನೆಯನ್ನು ಕಮಲ್‌ಪ್ರೀರ್ ಮೀರಿಸಿರುವುದು ಭಾರತೀಯಳ ಸಾಧನೆಗೆ ಕೈಗನ್ನಡಿಯಾಗಿದೆ. ಸಾಂಡ್ರಾ ಹಾಗೂ ಯೈಮ್ ಕ್ರಮವಾಗಿ ಮೂರು ಹಾಗೂ ಏಳನೇಯವರಾಗಿ ಅರ್ಹತೆ ಗಿಟ್ಟಿಸಿದರು.
ಪಂಜಾಬ್‌ನ ಕಮಲ್‌ಪ್ರೀತ್ ಕೌರ್ ಮೂರು ಪ್ರಯತ್ನಗಳಲ್ಲಿ ಕ್ರಮವಾಗಿ 60.29 ಮೀ, 63.97 ಮೀ. ಮತ್ತು 64 ಮೀ. ದೂರ ಡಿಸ್ಕಸ್ ಎಸೆದರು.
ಈಗ ಮಹಿಳೆಯರ ಡಿಸ್ಕಸ್ ಥ್ರೊ ಫೈನಲ್ ಸ್ಪರ್ಧೆಯು ಆಗಸ್ಟ್ 2ರಂದು ನಡೆಯಲಿದ್ದು, ದೇಶದ ಕೋಟ್ಯಂತರ ಕ್ರೀಡಾಭಿಮಾನಿಗಳ ಭರವಸೆಯಾಗಿರುವ ಕಮಲ್‌ಪ್ರೀತ್ ಕೌರ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಕೆಲವು ತಿಂಗಳುಗಳ ಹಿಂದೆ ನಡೆದ ಫೆಡರೇಷನ್ ಕಪ್‌ನಲ್ಲಿ 65 ಮೀಟರ್ ದೂರ ಕ್ರಮಿಸಿದ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಕಮಲ್‌ಪ್ರೀತ್ ಭಾಜನರಾಗಿದ್ದರು. ಕಮಲ್‌ಪ್ರೀತ್‌ಗೆ ಮತ್ತದೇ ಸಾಧನೆ ಪುನರಾವರ್ತಿಸಲು ಸಾಧ್ಯವಾದರೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ಜೂನ್‌ನಲ್ಲಿ ನಡೆದ ಇಂಡಿಯನ್ ಗ್ರ್ಯಾನ್ ಪ್ರಿ-4 ಟೂರ್ನಿಯಲ್ಲಿ 66.59 ಮೀಟರ್ ದೂರ ಡಿಸ್ಕಸ್ ಎಸೆದು ತಮ್ಮದೇ ದಾಖಲೆಯನ್ನು ಉತ್ತಮಪಡಿಸಿದರು.
ಏತನ್ಮಧ್ಯೆ ಅರ್ಹತಾ ಸುತ್ತಿನಲ್ಲಿ ಏಳನೇ ಹಾಗೂ ಒಟ್ಟಾರೆಯಾಗಿ 16ನೇ ಸ್ಥಾನ ಪಡೆದಿರುವ ಸೀಮಾ ಪೂನಿಯಾ, ಫೈನಲ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದರು. ಸೀಮಾ ಗರಿಷ್ಠ 60.57 ಮೀಟರ್ ದೂರ ಡಿಸ್ಕಸ್ ಎಸೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.