ADVERTISEMENT

Tokyo Olympics: ಮಿನುಗಿದ ರಾಣಿ ಬಳಗ

ಏಜೆನ್ಸೀಸ್
Published 2 ಆಗಸ್ಟ್ 2021, 20:16 IST
Last Updated 2 ಆಗಸ್ಟ್ 2021, 20:16 IST
ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಸಹಆಟಗಾರ್ತಿಯರೊಂದಿಗೆ ಸಂತಸದಿಂದ ಕೈಬೀಸುತ್ತಿರುವುದು –ಪಿಟಿಐ ಚಿತ್ರ
ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಸಹಆಟಗಾರ್ತಿಯರೊಂದಿಗೆ ಸಂತಸದಿಂದ ಕೈಬೀಸುತ್ತಿರುವುದು –ಪಿಟಿಐ ಚಿತ್ರ   

ಹಾಕಿ ಗುಂಪು ಹಂತದ ಎಲ್ಲ ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಲ್ಲಿದ್ದ ಬಲಿಷ್ಠ ಆಸ್ಟ್ರೇಲಿಯಾವನ್ನು ಎಲ್ಲ ವಿಭಾಗಗಳಲ್ಲೂ ಕಟ್ಟಿಹಾಕಿದ ಭಾರತದ ಮಹಿಳೆಯರು ಒಲಿಂಪಿಕ್ಸ್‌ ಹಾಕಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಸೋಮವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಭಾರತ 1–0ರಲ್ಲಿ ಸೋಲಿಸಿತು. ಈ ಮೂಲಕ ಇತಿಹಾಸವನ್ನೂ ಸೃಷ್ಟಿಸಿತು. ಒಲಿಂಪಿಕ್ಸ್‌ನಲ್ಲಿ ಭಾರತದ ಮಹಿಳಾ ತಂಡ ಸೆಮಿಫೈನಲ್‌ ತಲುಪಿರುವುದು ಇದೇ ಮೊದಲು. ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ಕೇಂದ್ರದಲ್ಲಿ ತರಬೇತಿ ಪಡೆದಿರುವ ತಂಡದಲ್ಲಿ ದೇಶದ ವಿವಿಧ ಭಾಗಗಳ 16 ಪ್ರತಿಭೆಗಳಿದ್ದಾರೆ.

***

ರಾಣಿ ರಾಂಪಾಲ್ (ನಾಯಕಿ)

ADVERTISEMENT

ವಯಸ್ಸು: 26, ರಾಜ್ಯ: ಹರಿಯಾಣ

ಸ್ಥಾನ: ಫಾರ್ವರ್ಡ್, ಪಂದ್ಯಗಳು: 226, ಗೋಲು:112

ಶಹಬಾದ್ ಮರಕಂದಾದಲ್ಲಿ ಜನಿಸಿದ ರಾಣಿ ಆರನೇ ವಯಸ್ಸಿನಲ್ಲಿಯೇ ಹಾಕಿಪ್ರೀತಿ ಬೆಳೆಸಿಕೊಂಡರು. ಅವರಿಗೆ ಹಾಕಿ ಸ್ಟಿಕ್‌ ಕೊಡಿಸುವಷ್ಟು ಹಣವೂ ತಂದೆ ರಾಂಪಾಲ್ ಬಳಿ ಇರಲಿಲ್ಲ. ಅಪ್ಪ ಕುದುರೆ ಬಂಡಿಯಲ್ಲಿ ಸಾಮಾನು ಸಾಗಿರುವ ಕೆಲಸದಿಂದ ಬರುತ್ತಿದ್ದ ಆದಾಯವೇ ಕುಟುಂಬಕ್ಕೆ ಆಸರೆಯಾಗಿತ್ತು. ಈ ಕಷ್ಟದ ನಡುವೆಯೂ ರಾಣಿ ಆಟ ಕಲಿತರು. 14ನೇ ವಯಸ್ಸಿನಲ್ಲಿಯೇ ಸೀನಿಯರ್ ತಂಡದಲ್ಲಿ ಸ್ಥಾನ ಪಡೆದರು. ಕಳೆದ 12 ವರ್ಷಗಳಲ್ಲಿ ಭಾರತ ತಂಡದ ನಾಯಕಿಯಾಗಿ ಬೆಳೆದಿದ್ದಾರೆ.

***

ದೀಪ್‌ ಗ್ರೇಸ್ ಎಕ್ಕಾ

ವಯಸ್ಸು: 27 ವರ್ಷ,

ರಾಜ್ಯ: ಒಡಿಶಾ

ಸ್ಥಾನ: ಡಿಫೆನ್ಸ್‌, ಪಂದ್ಯ: 240, ಗೋಲು: 64

15ನೇ ವಯಸ್ಸಿನಲ್ಲೇ ಹಾಕಿ ಆಡಲು ಆರಂಭಿಸಿದ ದೀಪ್‌ ಮೂಲತಃ ಕೊಕ್ಕೊ ಆಟಗಾರ್ತಿ. ಆ ಕ್ರೀಡೆಯಲ್ಲಿ ರಾಷ್ಟ್ರೀಯ ಟೂರ್ನಿಯಲ್ಲಿ ಆಡಿದ್ದಾರೆ. ಕುಸ್ತಿಪಟು ಆಗಿದ್ದ ತಂದೆ ಮಕ್ಕಳನ್ನು ಕ್ರೀಡಾಕ್ಷೇತ್ರದಲ್ಲಿ ಬೆಳೆಸಲು ಮುತುವರ್ಜಿ ವಹಿಸಿದ್ದರು. ದೈಹಿಕ ಫಿಟ್‌ನೆಸ್‌ ಮತ್ತು ಸ್ಪ್ರಿಂಟಿಂಗ್ ಸಾಮರ್ಥ್ಯವನ್ನು ಕಂಡ ಕೋಚ್ ಹಾಕಿ ಕ್ಷೇತ್ರಕ್ಕೆ ಕರೆತಂದರು. ಏಷ್ಯಾಕಪ್‌, ಏಷ್ಯನ್ ಗೇಮ್ಸ್ ಮತ್ತು ವಿಶ್ವಕ‍ಪ್‌ಗಳಲ್ಲಿ ಆಡಿದ್ದು ಇದು ಅವರು ಪಾಲ್ಗೊಳ್ಳುತ್ತಿರುವ ಎರಡನೇ ಒಲಿಂಪಿಕ್ಸ್‌.

***

ಮೋನಿಕಾ

ವಯಸ್ಸು: 27, ರಾಜ್ಯ: ಚಂಡೀಗಢ,

ಸ್ಥಾನ: ಮಿಡ್‌ಫೀಲ್ಡ್‌, ಪಂದ್ಯ: 150, ಗೋಲು: 8

ಅಥ್ಲೆಟಿಕ್ಸ್‌ನಲ್ಲಿ ಆಸಕ್ತರಾಗಿದ್ದ ಮೋನಿಕಾ ಅವರನ್ನು ಕುಸ್ತಿಪಟು ಮಾಡಬೇಕೆಂಬುದು ತಂದೆಯ ಆಸೆಯಾಗಿತ್ತು. ಆದರೆ ಹಾಕಿಯ ಕಡೆಗೆ ಮನಸ್ಸು ಸಾಗಿದ ನಂತರ ಎಲ್ಲವೂ ಬದಲಾಯಿತು. 2007ರಿಂದ ಹಾಕಿ ಆಡುತ್ತಿರುವ ಅವರು 2012ರಲ್ಲಿ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಮಿಡ್‌ಫೀಲ್ಡ್‌ನಲ್ಲಿ ಚೆಂಡನ್ನು ನಿಯಂತ್ರಿಸುವುದು ಪ್ರಮುಖ ಜವಾಬ್ದಾರಿ.

***

ನವನೀತ್ ಕೌರ್

ವಯಸ್ಸು: 25,

ರಾಜ್ಯ: ಹರಿಯಾಣ

ಸ್ಥಾನ: ಫಾರ್ವರ್ಡ್‌,

ಪಂದ್ಯ: 79, ಗೋಲು: 24

2005ರಿಂದ ಹಾಕಿ ಆಡುತ್ತಿರುವ ನವನೀತ್ ಕೌರ್ ಶಾಹಬಾದ್‌ ಹಾಕಿ ಅಕಾಡೆಮಿಯ ಸಮೀಪದ ಶಾಲೆಯಲ್ಲಿ ಕಲಿತವರು. ಹಾಕಿ ಸ್ಟಿಕ್‌ಗಳ ಸದ್ದು ಕೇಳುತ್ತಲೇ ಬೆಳೆದವರು. ಅದೇ ಕ್ಲಬ್‌ನಲ್ಲಿ ಪ್ರವೇಶ ಪಡೆದು ಹಾಕಿ ಕ್ರೀಡೆಯ ತಂತ್ರಗಳನ್ನು ಕರಗತ ಮಾಡಿಕೊಂಡಿದ್ದರು. ವಿಶ್ವಕಪ್‌, ಏಷ್ಯನ್ ಗೇಮ್ಸ್ ಮತ್ತು ಏಷ್ಯಾಕಪ್‌ ಟೂರ್ನಿಗಳಲ್ಲಿ ಪಾಲ್ಗೊಂಡ ಅನುಭವ ಇದೆ.

***

ನವಜ್ಯೋತ್ ಕೌರ್

ವಯಸ್ಸು: 26, ರಾಜ್ಯ: ಹರಿಯಾಣ,

ಸ್ಥಾನ: ಫಾರ್ವರ್ಡ್‌, ಪಂದ್ಯ: 172,

ಗೋಲು:18

ರಾಷ್ಟ್ರೀಯ ತಂಡದ ಆಕ್ರಮಣ ವಿಭಾಗದ ಪ್ರಮುಖ ಆಟಗಾರ್ತಿಯರಲ್ಲಿ ಒಬ್ಬರಾಗಿರುವ ನವಜ್ಯೋತ್ ಕೌರ್ ಅವರು ತಂದೆಯ ಆಸೆಯಂತೆ ಹಾಕಿ ಆಡಲು ಆರಂಭಿಸಿದ್ದರು. ರಾಣಿ ರಾಂಪಾಲ್‌ ಅವರಿಗೆ ನೆಚ್ಚಿನ ಆಟಗಾರ್ತಿಯನ್ನಾಗಿ ಮನಸ್ಸಿನಲ್ಲಿ ಸ್ಥಾನ ನೀಡಿರುವ ಅವರು ಇದೀಗ ಅದೇ ಆಟಗಾರ್ತಿಯ ನಾಯಕತ್ವದಲ್ಲಿ ಕಣಕ್ಕೆ ಇಳಿಯುತ್ತಿದ್ದಾರೆ. ವಿಶ್ವಕಪ್‌, ಏಷ್ಯನ್‌ ಗೇಮ್ಸ್‌ ಮತ್ತು ಏಷ್ಯಾಕಪ್‌ನಲ್ಲಿ ಆಡಿರುವ ಅವರಿಗೆ ಇದು ಎರಡನೇ ಒಲಿಂಪಿಕ್ಸ್‌.

***

ವಂದನಾ ಕಟಾರಿಯ

ವಯಸ್ಸು: 29, ರಾಜ್ಯ ಉತ್ತರ ಪ್ರದೇಶ,

ಸ್ಥಾನ: ಫಾರ್ವರ್ಡ್‌, ಪಂದ್ಯ: 240,

ಗೋಲು: 64

ವಂದನಾ ಅವರದು ಕ್ರೀಡಾಕುಟುಂಬ. ಸಹೋದರಿಯರಾದ ರೀನಾ ಮತ್ತು ರೀಟಾ ರಾಷ್ಟ್ರೀಯ ಮಟ್ಟದ ಹಾಕಿಪಟುಗಳಾಗಿದ್ದರೆ, ಸಹೋದರ‌ ರಾಹುಲ್ ಅವರು ಟೇಕ್ವಾಂಡೊದಲ್ಲಿ ಬ್ಲ್ಯಾಕ್‌ ಬೆಲ್ಟ್ ಗಳಿಸಿದ್ದಾರೆ. ಕೊಕ್ಕೊ ಆಟಗಾರ್ತಿಯಾಗಿದ್ದ ಅವರು 2002ನೇ ಇಸವಿಯಿಂದ ಹಾಕಿ ಅಂಗಣದಲ್ಲಿದ್ದಾರೆ. 2009ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ರಿಯೊ ಒಲಿಂಪಿಕ್ಸ್‌ನಲ್ಲೂ ಆಡಿದ್ದು ವಿಶ್ವಕಪ್‌, ಏಷ್ಯನ್‌ ಗೇಮ್ಸ್ ಮತ್ತು ಏಷ್ಯಾಕಪ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

***

ಸಲೀಮಾ ಟೆಟೆ

ವಯಸ್ಸು: 19, ರಾಜ್ಯ: ಜಾರ್ಖಂಡ್

ಸ್ಥಾನ: ಮಿಡ್‌ಫೀಲ್ಡರ್‌

ಪಂದ್ಯಗಳು: 29

ಭಾರತ ಮಹಿಳಾ ಹಾಕಿ ತಂಡದಲ್ಲಿರುವ ಅತಿ ಕಿರಿಯ ಆಟಗಾರ್ತಿ. ಸಿಮ್ಡೇಗಾ ಜಿಲ್ಲೆಯ ನಕ್ಸಲ್‌ಪೀಡಿತ ಕುಗ್ರಾಮದ ಹುಡುಗಿ. ಸಣ್ಣ ರೈತರಾಗಿರುವ ಅಪ್ಪ ತಮ್ಮ ಬಾಲ್ಯದಲ್ಲಿ ಹಾಕಿ ಆಡಿದವರು. ಅಪ್ಪನಿಂದ ಪ್ರೇರಣೆಗೊಂಡು ಹಾಕಿ ಸ್ಟಿಕ್‌ ಹಿಡಿದರು ಸಲೀಮಾ. ತಮ್ಮ ಮನೆ ಸಮೀಪದ ಮೈದಾನವನ್ನು ತನ್ನ ಓರಗೆಯ ಮಕ್ಕಳೊಂದಿಗೆ ಒಪ್ಪಗೊಳಿಸಿ ಆಡಲು ಆರಂಭಿಸಿದವರು. 2017ರಲ್ಲಿ ಯೂತ್ ಒಲಿಂಪಿಕ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದ ಭಾರತ ತಂಡದಲ್ಲಿ ಆಡಿದರು.

***

ಲಾಲ್‌ರೆಮ್ಸಿಯಾಮಿ

ವಯಸ್ಸು: 21

ರಾಜ್ಯ: ಮಿಜೋರಾಂ

ಸ್ಥಾನ: ಫಾರ್ವರ್ಡ್

ಪಂದ್ಯ: 64, ಗೋಲು: 23

ಐಜ್ವಾಲ್‌ನಿಂದ 80 ಕಿ.ಮೀ ದೂರದ ಪುಟ್ಟ ಹಳ್ಳಿ ಕೊಲಾಸಿಬ್‌ನವರು. ತಂದೆ ಲಾಲ್ತಾನ್‌ಸಂಗಾ ಜೊಲ್ಟೆ ಸಣ್ಣ ರೈತ. 11ನೇ ವಯಸ್ಸಿನಲ್ಲಿ ಲಾಲ್‌ರೆಮ್ಸಿಯಾಮಿ ತೇಂಜಾಲ್ವನಲ್ಲಿದ್ದ ರಾಜ್ಯ ಸರ್ಕಾರದ ಕ್ರೀಡಾಶಾಲೆಗೆ ಆಯ್ಕೆಯಾದರು.

***

ಶರ್ಮಿಳಾ ದೇವಿ

ವಯಸ್ಸು: 19

ರಾಜ್ಯ: ಹರಿಯಾಣ

ಸ್ಥಾನ: ಫಾರ್ವರ್ಡ್

ಪಂದ್ಯ: 9, ಗೋಲು: 1

ಹಿಸಾರ್‌ ಪಟ್ಟಣದ ಶಮಿರ್ಳಾದೇವಿ ಕುಟುಂಬದಲ್ಲಿ ಹಾಕಿ ಆಟಗಾರರಿದ್ದರು. ಅಜ್ಜ, ಅಣ್ಣ ಕೂಡ ಆಡಿದ್ದವರು. ಮಗಳಿಗೆ ಹಾಕಿ ಆಡಲು ಹೇಳಿಕೊಟ್ಟಿದ್ದು ಅಪ್ಪ. ತಮ್ಮ ಮಗಳು ಒಲಿಂಪಿಕ್‌ನಲ್ಲಿ ಆಡುವ ಕನಸು ಕಂಡಿದ್ದ ಅವರ ಸಂತಸ ಈಗ ಮುಗಿಲು ಮುಟ್ಟಿದೆ. 2019ರಲ್ಲಿ ಟೋಕಿಯೊದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಪದಾರ್ಪಣೆ ಮಾಡಿದ್ದರು.

***

ನಿಕ್ಕಿ ಪ್ರಧಾನ್

ವಯಸ್ಸು: 27

ರಾಜ್ಯ: ಜಾರ್ಖಂಡ್

ಸ್ಥಾನ: ಮಿಡ್‌ಫೀಲ್ಡರ್

ಪಂದ್ಯ: 76

ಕ್ರಾಂತಿಕಾರಿ ಬಿರ್ಸಾ ಮುಂಡಾ ಅವರ ಗ್ರಾಮ ಕುಂತಿ. ಈ ಅದಿವಾಸಿ ಗ್ರಾಮದವರು ನಿಕಿ ಪ್ರಧಾನ್. ತಂದೆ ಸೋಮಾಪ್ರಧಾನ್ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದಾರೆ. ತಮ್ಮ ಊರಲ್ಲಿ ಸೌಲಭ್ಯಗಳಿಲ್ಲದ ಕಾರಣಕ್ಕೆ ನಿಕಿಯನ್ನು ಬರಿಯಾಟು ಎಂಬಲ್ಲಿರುವ ಶಾಲೆಗೆ ಸೇರಿಸಲಾಯಿತು. ಅದೇ ಶಾಲೆಯಲ್ಲಿ ಭಾರತ ತಂಡದ ಅಟಗಾರ್ತಿಯಾಗಿದ್ದ ಅಸುಂತಾ ಲಾಕ್ರಾ ಕೂಡ ಓದಿದ್ದರು.

***

ನಿಶಾ

ವಯಸ್ಸು: 26

ರಾಜ್ಯ: ಹರಿಯಾಣ

ಸ್ಥಾನ: ಡಿಫೆನ್ಸ್, ಪಂದ್ಯ: 9

ನಿಶಾ ಅವರು ಹಾಕಿ ಕ್ರೀಡೆಗೆ ಸೇರಲು ತಂದೆಯೇ ಪ್ರೇರಣೆ. ಟೇಲರ್ ವೃತ್ತಿ ಮಾಡುತ್ತಿದ್ದ ಅವರು ನಿಶಾ ಪ್ರತಿಭೆಯನ್ನು ಪೋಷಿಸಿದರು. ಮೂರು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಕುಟುಂಬ ಅವರದು. ಕಷ್ಟಪಟ್ಟು ಹಣ ಹೊಂದಿಸಿ ಟೂರ್ನಿಗಳಿಗೆ ಆಡಲು ನಿಶಾರನ್ನು ಕಳುಹಿಸಿದ ತಂದೆಯ ಮನದಲ್ಲಿ ಈಗ ಸಂಭ್ರಮದ ಹೊಳೆ. ನಿಶಾ ಅವರಿಗೆ ಇದು ಮೊದಲ ಒಲಿಂಪಿಕ್ಸ್ ಆಗಿದ್ದು ಸ್ಮರಣೀಯವಾಗಿರಿಕೊಳ್ಳುವ ಹಂಬಲದಲ್ಲಿದ್ದಾರೆ.

***

ಸುಶೀಲಾ ಚಾನು

ವಯಸ್ಸು: 25,

ರಾಜ್ಯ: ಮಣಿಪುರ,

ಸ್ಥಾನ: ಮಿಡ್‌ಫೀಲ್ಡಿಂಗ್,

ಪಂದ್ಯ:181,

ಗೋಲು: 4

ಏಳನೇ ವಯಸ್ಸಿನಲ್ಲಿ ಹಾಕಿ ಅಂಗಣಕ್ಕಿಳಿದ ಸುಶೀಲಾ ಇಂಫಾಲ್‌ನ ಪ್ರತಿಭೆ. ತಂದೆಯದು ಚಾಲಕ ವೃತ್ತಿ. ಅಜ್ಜ ಪುಖ್ರಂಬಮ್ ಅಂಗಾಂಗ್ಚಾ ಯಶಸ್ವಿ ಪೋಲೊ ಆಟಗಾರ ಆಗಿದ್ದರು. 1999ರಲ್ಲಿ ಮಣಿಪುರದಲ್ಲಿ ನಡೆದ ರಾಷ್ಟ್ರೀಯ ಫುಟ್‌ಬಾಲ್ ಟೂರ್ನಿಯನ್ನು ನೋಡಲು ತಂದೆಯೊಂದಿಗೆ ತೆರಳಿದ್ದ ಸುಶೀಲಾ ಕ್ರೀಡಾಸಕ್ತಿ ಹೆಚ್ಚಿಸಿಕೊಂಡರು. 2008ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿರುವ ಅವರು, ಕೆಲವು ಟೂರ್ನಿಗಳಿಗೆ ನಾಯಕತ್ವವನ್ನೂ ವಹಿಸಿದ್ದಾರೆ. ರೈಲ್ವೆ ಇಲಾಖೆಯಲ್ಲಿ ಸುಶೀಲಾ ಜೂನಿಯರ್ ಟಿಕೆಟ್ ಕಲೆಕ್ಟರ್ ಹುದ್ದೆಯಲ್ಲಿದ್ದಾರೆ.

***

ನೇಹಾ ಗೋಯಲ್‌

ವಯಸ್ಸು: 24

ರಾಜ್ಯ: ಹರಿಯಾಣ

ಸ್ಥಾನ: ಮಿಡ್‌ಫೀಲ್ಡಿಂಗ್‌

ಪಂದ್ಯ: 75,

ಗೋಲು: 11

ಸೋನೆಪತ್ ಜಿಲ್ಲೆಯ ಬಡಕುಟುಂಬದಲ್ಲಿ ಜನಿಸಿದ ನೇಹಾ ಅವರಿಗೆ ಇಬ್ಬರು ಸಹೋದರಿಯರಿದ್ದಾರೆ. ತಂದೆ ಕುಡಿತಕ್ಕೆ ದಾಸನಾಗಿದ್ದ. ಸೈಕಲ್ ಫ್ಯಾಕ್ಟರಿಯಲ್ಲಿ ದಿನಗೂಲಿ ಮಾಡುತ್ತಿದ್ದ ತಾಯಿಯ ಆದಾಯವೇ ಕುಟುಂಬಕ್ಕೆ ಆಸರೆಯಾಗಿತ್ತು. ಹಾಕಿ ಸ್ಟಿಕ್‌, ಬೂಟುಗಳನ್ನು ಖರೀದಿಸಲು ನೇಹಾ ಪರದಾಡಬೇಕಾಗಿತ್ತು. ಭಾರತ ಮಹಿಳಾ ತಂಡದ ಮಾಜಿ ನಾಯಕಿ ಪ್ರೀತಮ್ ಸಿವಾಚ್‌ ಅವರ ಕಣ್ಣಿಗೆ ಬಿದ್ದ ನೇಹಾ ಅವರ ಅಕಾಡೆಮಿಯಲ್ಲಿ ತರಬೇತಿಗೆ ಸೇರುವಂತಾಯಿತು. 2014ರಲ್ಲಿ ಅವರು ಭಾರತ ತಂಡದ ಪರ ಪದಾರ್ಪಣೆ ಮಾಡಿದ್ದಾರೆ.

***

ಉದಿತಾ

ವಯಸ್ಸು: 23

ರಾಜ್ಯ:ಹರಿಯಾಣ

ಸ್ಥಾನ: ಫಾರ್ವರ್ಡ್‌

ಪಂದ್ಯ: 32,

ಗೋಲು: 3

ಸಹಾಯಕ ಸಬ್ ಇನ್‌ಸ್ಪೆಕ್ಟರ್ ಪುತ್ರಿಯಾಗಿರುವ ಉದಿತಾ, ಶಾಲಾ ಹಂತದಲ್ಲಿ ಹ್ಯಾಂಡ್‌ಬಾಲ್ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡವರು. ಆದರೆ ಶಾಲಾ ಕೋಚ್‌ ಅವರನ್ನು ಆ ಹುದ್ದೆಯಿಂದ ತೆಗೆದ ಸಂದರ್ಭದಲ್ಲಿ ಉದಿತಾ ವಿಚಲಿತರಾದರು. ತಾನು ಕ್ರೀಡಾಪಟುವಾಗುವ ಆಸೆಯನ್ನು ತಾಯಿಯಲ್ಲಿ ಹೇಳಿಕೊಂಡರು. ಈ ವೇಳೆ ತಾಯಿ, ಶಾಲೆಯ ಹಾಕಿ ಕೋಚ್‌ಗೆ ಇವರನ್ನು ಪರಿಚಯಿಸಿದಾಗ ಸ್ಟಿಕ್‌ ಹಿಡಿದ ಉದಿತಾ ಆಮೇಲೆ ಹಿಂದಿರುಗಿ ನೋಡಲಿಲ್ಲ.

***

ಸವಿತಾ ಪುನಿಯಾ

ವಯಸ್ಸು: 31, ರಾಜ್ಯ: ಹರಿಯಾಣ,

ಸ್ಥಾನ: ಗೋಲ್‌ಕೀಪಿಂಗ್‌

ಪಂದ್ಯ: 202

ಸಿರ್ಸಾ ಜಿಲ್ಲೆಯ ಜೋದ್‌ಕನ್‌ನಲ್ಲಿ ಜನಿಸಿದ ಸವಿತಾ ತಾತ ಮಹಿಂದರ್‌ ಸಿಂಗ್‌ ಅವರ ಪ್ರೇರಣೆಯಿಂದ ಹಾಕಿ ಕ್ರೀಡೆಗೆ ಕಾಲಿಟ್ಟರು. ಹಿಸ್ಸಾರ್‌ನಲ್ಲಿ ಭಾರತ ಕ್ರೀಡಾ ಪ್ರಾಧಿಕಾರ ಕೇಂದ್ರಕ್ಕೆ ಸೇರಿಕೊಂಡ ಅವರು ಕೋಚ್‌ ಸುಂದರ್ ಸಿಂಗ್ ತರಬೇತಿಯಲ್ಲಿ ಪಳಗಿದರು. ಆರಂಭದಲ್ಲಿ ಕ್ರೀಡೆಯ ಬಗ್ಗೆ ಉತ್ಸಾಹ ಕಳೆದುಕೊಂಡಿದ್ದರು ಸವಿತಾ. ಆದರೆ ಅವರ ತಂದೆ ಕಿಟ್‌ ಖರೀದಿಗಾಗಿ 20 ಸಾವಿರ ರೂಪಾಯಿ ಖರ್ಚು ಮಾಡಿದಾಗ ಆಟದಲ್ಲಿ ಗಂಭೀರವಾಗಿ ತೊಡಗಿಸಿಕೊಂಡರು.

***

ಗುರ್ಜೀತ್ ಕೌರ್

ವಯಸ್ಸು 25,

ರಾಜ್ಯ: ಪಂಜಾಬ್

ಸ್ಥಾನ: ಡಿಫೆಂಡರ್,

ಪಂದ್ಯ: 72,

ಗೋಲು: 33

ರೈತರಾಗಿರುವ ಸತ್ನಾಮ್ ಸಿಂಗ್ ಮತ್ತು ಹರ್ಜಿಂದರ್ ಕೌರ್ ತಮ್ಮಿಬ್ಬರು ಹೆಣ್ಣುಮಕ್ಕಳು ಗುರ್ಜಿತ್ ಮತ್ತು ಪ್ರದೀಪ್ ಕೌರ್ ಚೆನ್ನಾಗಿ ಓದಬೇಕೆಂಬ ಆಸೆಯಿಂದ ಸ್ವಗ್ರಾಮದಿಂದ ದೂರವಿರುವ ಬೋರ್ಡಿಂಗ್ ಶಾಲೆಗೆ ಸೇರಿಸಿದರು. ಕೈರನ್‌ನಲ್ಲಿದ್ದ ಆ ಶಾಲೆಯಲ್ಲಿ ಬಾಲಕಿಯರ ಹಾಕಿ ಕ್ರೀಡೆಗೆ ಕೊಟ್ಟ ಕೊಡುಗೆ ದೊಡ್ಡದು. ಅಲ್ಲಿ ಹಾಕಿ ಆಡಲು ಆರಂಭಿಸಿದ ಗುರ್ಜಿತ್ ಟೋಕಿಯೊ ಒಲಿಂಪಿಕ್ಸ್‌ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತ ತಂಡದ ಗೆಲುವಿನ ರೂವಾರಿಯಾಗಿದ್ದಾರೆ.

***

ಗುರ್ಜೀತ್ ಕೌರ್ ಗಳಿಸಿದ ಆ ಗೋಲು...

ಟೋಕಿಯೊ: ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಮತ್ತು ಒಲಿಂಪಿಕ್ಸ್‌ನಲ್ಲಿ ಮೂರು ಬಾರಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾದ ಬಲಿಷ್ಠ ರಕ್ಷಣಾ ಕೋಟೆಯನ್ನು ಭೇದಿಸಿ ಭಾರತಕ್ಕೆ ಗೆಲುವಿನ ಗೋಲು ತಂದುಕೊಟ್ಟವರು ಗುರ್ಜೀತ್ ಕೌರ್.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಭಾರತ ದಿಟ್ಟತನ ಮೆರೆದು ಎದುರಾಳಿ ಆಟಗಾರ್ತಿಯರನ್ನು ಕಂಗೆಡಿಸಿದರು. ಚೆಂಡಿನ ಮೇಲೆ ನಿರಂತರವಾಗಿ ಹಿಡಿತ ಸಾಧಿಸಿದ ಭಾರತ ಮೊದಲ ಕ್ವಾರ್ಟರ್‌ ಮುಗಿದಾಗ ಭರವಸೆಯಿಂದಲೇ ವಿರಾಮಕ್ಕೆ ತೆರಳಿದರು. ಎರಡನೇ ಕ್ವಾರ್ಟರ್‌ನಲ್ಲಿ, 22ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಡ್ರ್ಯಾಗ್‌ ಫ್ಲಿಕ್ಕರ್ ಗುರ್ಜೀತ್ ಕೌರ್ ಆಸ್ಟ್ರೇಲಿಯಾದ ಡಿಫೆಂಡರ್‌ಗಳ ನಡುವಿನಲ್ಲೇ ಚೆಂಡನ್ನು ತೂರಿಬಿಟ್ಟರು. ಗೋಲ್‌ಕೀಪರ್ ತಡೆಯಲು ಪ್ರಯತ್ನಿಸಿದರೂ ಚೆಂಡು ಗೋಲುಪೆಟ್ಟಿಗೆಯ ಒಳಗೆ ಸೇರಿತು. ಅಷ್ಟರಲ್ಲಿ ಭಾರತದ ಪಾಳಯದಲ್ಲಿ ಸಂಭ್ರಮ ಅಲೆಯಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.