ADVERTISEMENT

Tokyo Olympics ಹಾಕಿ: ಬ್ರಿಟನ್ ವಿರುದ್ಧ ಸೋಲು, ಮಹಿಳಾ ತಂಡಕ್ಕೆ ಕೈತಪ್ಪಿದ ಕಂಚು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 3:34 IST
Last Updated 6 ಆಗಸ್ಟ್ 2021, 3:34 IST
ಭಾರತ ಮಹಿಳಾ ಹಾಕಿ ತಂಡ
ಭಾರತ ಮಹಿಳಾ ಹಾಕಿ ತಂಡ   

ಟೋಕಿಯೊ: ಭಾರತದ ಮಹಿಳಾ ಹಾಕಿ ತಂಡವು ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ 3-4 ಗೋಲುಗಳ ಅಂತರದ ಸೋಲು ಅನುಭವಿಸಿದೆ.

ಇದರೊಂದಿಗೆ ಒಲಿಂಪಿಕ್ಸ್ ಇತಿಹಾಸದಲ್ಲೇ ಚೊಚ್ಚಲ ಪದಕ ಗೆಲ್ಲುವ ಕನಸು ಭಗ್ನಗೊಂಡಿದೆ.

ಗುರುವಾರ ನಡೆದ ಪಂದ್ಯದಲ್ಲಿ ಜರ್ಮನಿ ತಂಡವನ್ನು 5-4 ಗೋಲುಗಳಿಂದ ಮಣಿಸಿದ್ದ ಭಾರತ ಪುರುಷ ಹಾಕಿ ತಂಡವು 41 ವರ್ಷಗಳ ಬಳಿಕ ಪದಕ ಜಯಿಸಿತ್ತು.

ADVERTISEMENT

ಇದನ್ನೂ ಓದಿ:

ಆದರೆ ಮಹಿಳಾ ತಂಡಕ್ಕೆ ಮತ್ತದೇ ಸಾಧನೆ ಪುನರಾವರ್ತಿಸಲು ಸಾಧ್ಯವಾಗಲಿಲ್ಲ. ಆದರೂ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ ರಾಣಿ ರಾಂಪಾಲ್ ಪಡೆಯು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದೆ.

ಮೊದಲ ಕ್ವಾರ್ಟರ್‌ನಲ್ಲಿ ಇತ್ತಂಡಗಳಿಂದ ಸಮಬಲದ ಹೋರಾಟ ಕಂಡುಬಂದಿತ್ತು. ಆದರೆ ದ್ವಿತೀಯ ಕ್ವಾರ್ಟರ್‌ನಲ್ಲಿ ಬ್ರಿಟನ್ 2-0 ಗೋಲುಗಳ ಮುನ್ನಡೆ ದಾಖಲಿಸಿತ್ತು.

ಆದರೆ ಎದೆಗುಂದದೆ ಆಡಿದ ಭಾರತದ ಮಹಿಳಾ ಆಟಗಾರ್ತಿಯರು ಗುರ್ಜಿತ್ ಕೌರ್ ಎರಡು ಗೋಲುಗಳ ನೆರವಿನಿಂದ ಸಮಬಲ ದಾಖಲಿಸಿತ್ತು. ಬಳಿಕ ವಂದನಾ ಕಟಾರಿಯಾ ಗೋಲು ಬಾರಿಸುವುದರೊಂದಿಗೆ ಮೊದಲಾರ್ಧದಲ್ಲಿ 3-2ರ ಅಂತರದ ಮುನ್ನಡೆ ದಾಖಲಿಸಿತ್ತು.

ಈ ಮುನ್ನಡೆಯನ್ನು ಹೆಚ್ಚು ಹೊತ್ತು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಬ್ರಿಟನ್ ನಾಯಕಿ ಸಮಬಲದ ಗೋಲು ದಾಖಲಿಸಿದರು. ಕೊನೆಯ ಕಾರ್ಟರ್‌ನಲ್ಲಿ ಮತ್ತಷ್ಟು ಆಕ್ರಮಣಕಾರಿಯಾಗಿ ಆಡಿದ ಬ್ರಿಟನ್ ಮಗದೊಂದು ಗೋಲು ಬಾರಿಸಿ 4-3 ಗೋಲುಗಳ ಗೆಲುವು ದಾಖಲಿಸಿತು.

ಕೊನೆಯ ಹಂತದಲ್ಲಿ ಭಾರತ ಶಕ್ತಿಮೀರಿ ಪ್ರಯತ್ನಿಸಿದರೂ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ.

ಸೋಲಿನ ಆಘಾತವನ್ನು ತಡೆದುಕೊಳ್ಳಲಾಗದೇ ಭಾರತೀಯಆಟಗಾರ್ತಿಯರು ಮೈದಾನದಲ್ಲೇ ಕಣ್ಣೀರಿಡುವ ದೃಶ್ಯವು ಪ್ರತಿಯೊಬ್ಬ ಕ್ರೀಡಾಪ್ರೇಮಿಯಮನಕಲಕುವಂತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.