ADVERTISEMENT

Tokyo Olympics: ಸೋಲಿನ ನೋವು ತಾಳಲಾಗದೇ ಕಣ್ಣೀರಿಟ್ಟ ಆಟಗಾರ್ತಿಯರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಆಗಸ್ಟ್ 2021, 6:19 IST
Last Updated 6 ಆಗಸ್ಟ್ 2021, 6:19 IST
ಭಾರತ ಮಹಿಳಾ ತಂಡದ ಆಟಗಾರ್ತಿಯರು
ಭಾರತ ಮಹಿಳಾ ತಂಡದ ಆಟಗಾರ್ತಿಯರು   

ಟೋಕಿಯೊ: ಒಲಿಂಪಿಕ್ಸ್ ಮಹಿಳಾ ಹಾಕಿಯಲ್ಲಿ ಭಾರತದ ಪದಕದ ಆಸೆ ಕಮರಿದೆ. ಟೋಕಿಯೊದಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ತಂಡವು ಬ್ರಿಟನ್ ವಿರುದ್ಧ 3-4 ಗೋಲುಗಳ ಅಂತರದ ಸೋಲು ಅನುಭವಿಸಿದೆ.

ಸೋಲಿನ ನೋವು ತಾಳಲಾರದೆ ಭಾರತ ಮಹಿಳಾ ತಂಡದ ಆಟಗಾರ್ತಿಯರು ಮೈದಾನದಲ್ಲೇ ಕಣ್ಣೀರಿಟ್ಟ ದೃಶ್ಯಗಳು ಕಂಡುಬಂದವು. ಇದು ಹಾಕಿ ಕ್ರೀಡೆಯನ್ನು ಅವರು ಎಷ್ಟೊಂದು ಪ್ರೀತಿಸುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದ್ದು, ದೇಶಕ್ಕಾಗಿ ಪದಕದ ಉಡುಗೊರೆ ನೀಡಲಾಗದ ಬೇಸರ ಮನೆ ಮಾಡಿತ್ತು.

ಈ ದೃಶ್ಯಗಳು ದೇಶದ ಪ್ರತಿಯೊಬ್ಬ ಕ್ರೀಡಾಪ್ರೇಮಿಯ ಮನ ಕಲಕುವಂತಿತ್ತು. ಆದರೂ ನಾಲ್ಕನೇ ಸ್ಥಾನ ಗೆಲ್ಲುವ ಮೂಲಕ ಭಾರತೀಯರ ಹೃದಯ ಗೆದ್ದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂದೇಶದಲ್ಲಿಯೂ ಇದನ್ನೇ ಉಲ್ಲೇಖಿಸಿದ್ದರು. ಮುಂಬರುವ ಪೀಳಿಗೆಗೆ ಭಾರತ ಮಹಿಳಾ ಹಾಕಿ ತಂಡದ ಸಾಧನೆ ಸ್ಫೂರ್ತಿಯಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಅವರು ಹೇಳಿದ್ದರು.

ಈ ಹಿಂದೆ 1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡವು ನಾಲ್ಕನೇ ಸ್ಥಾನ ಪಡೆದಿತ್ತು. ಈಗ ಗುಂಪು ಹಂತದಲ್ಲಿ ಹ್ಯಾಟ್ರಿಕ್ ಸೋಲು ಎದುರಾಗಿರುವ ಹೊರತಾಗಿಯೂ ಪುಟಿದೆದ್ದಿರುವ ರೀತಿಯು ನಿಜಕ್ಕೂ ಹೆಮ್ಮೆಪಡುವಂತದ್ದು.

ಕ್ವಾರ್ಟರ್‌ಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಸೆಮಿಫೈನಲ್‌ಗೆ ಪ್ರವೇಶಿಸಿತ್ತು. ಆದರೆ ಅಂತಿಮ ನಾಲ್ಕರ ಘಟ್ಟದಲ್ಲಿ ಅರ್ಜೆಂಟೀನಾ ವಿರುದ್ಧ 2-1ರ ಅಂತರದ ಸೋಲಿಗೆ ಶರಣಾಗಿತ್ತು.

ಕಂಚಿನ ಪದಕದ ಹೋರಾಟದಲ್ಲಿ ಬ್ರಿಟನ್ ವಿರುದ್ಧ ಸೋಲು ಅನುಭವಿಸಿದೆ. ಗುಂಪು ಹಂತದಲ್ಲೂ ಬ್ರಿಟನ್ ವಿರುದ್ಧ ಭಾರತ ಹಿನ್ನಡೆ ಅನುಭವಿಸಿತ್ತು. ಆದರೂ ನಾಲ್ಕನೇ ಸ್ಥಾನ ಗೆಲ್ಲುವ ಮೂಲಕ ಭಾರತೀಯ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.