ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ವಿಫಲವಾದರೂ ಭಾರತೀಯರ ಹೆಮ್ಮೆಗೆ ಕಾರಣರಾಗಿರುವ ಮಹಿಳಾ ಹಾಕಿ ತಂಡದ ಆಟಗಾರ್ತಿಯರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿದ ವೇಳೆ ಆಟಗಾರ್ತಿಯರು ಬಿಕ್ಕಿ ಬಿಕ್ಕಿ ಅತ್ತ ಘಟನೆ ವರದಿಯಾಗಿದೆ.
ಮೂರನೇ ಸ್ಥಾನಕ್ಕಾಗಿ ಬ್ರಿಟನ್ ವಿರುದ್ಧ ನಡೆದ ಪಂದ್ಯದಲ್ಲಿ ಎದುರಾದ ಸೋಲಿನಿಂದ ಆಘಾತಕ್ಕೊಳಗಾಗಿರುವ ಆಟಗಾರ್ತಿಯರು ಅತೀವ ಬೇಸರದಲ್ಲಿದ್ದರು. ವಿಡಿಯೊ ಕರೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಆಟಗಾರ್ತಿಯರಿಗೆ ಧೈರ್ಯ ತುಂಬಿದರು. ಅಲ್ಲದೆ ಇಡೀ ದೇಶಕ್ಕೆ ನಿಮ್ಮ ಸಾಧನೆ ಬಗ್ಗೆ ಹೆಮ್ಮೆಯಿದೆ ಎಂದು ಹೇಳಿದರು.
'ನೀವೆಲ್ಲರೂ ಅದ್ಭುತ ಆಟವಾಡಿದ್ದು, ಸಾಕಷ್ಟು ಬೆವರು ಸುರಿಸಿದ್ದೀರಿ. ಕಳೆದ 5-6 ವರ್ಷಗಳಿಂದ ನೀವು ಪಟ್ಟ ಪರಿಶ್ರಮವು ದೇಶದ ಕೋಟ್ಯಂತರ ಹೆಣ್ಮಕ್ಕಳಿಗೆ ಪ್ರೇರಣೆಯಾಗಿದೆ. ಇದಕ್ಕಾಗಿ ತಂಡದ ಎಲ್ಲ ಆಟಗಾರ್ತಿಯರು ಹಾಗೂ ಕೋಚ್‌ಗೆ ಅಭಿನಂದನೆ ಸಲ್ಲಿಸುತ್ತೇನೆ' ಎಂದು ಹೇಳಿದ್ದಾರೆ.
'ಅಳಬಾರದು. ಅಳುವುದನ್ನು ನಿಲ್ಲಿಸಿ. ನನಗಿಲ್ಲಿ ಕೇಳಿಸುತ್ತಿದೆ. ದೇಶಕ್ಕೆ ನಿಮ್ಮ ಸಾಧನೆಯ ಬಗ್ಗೆ ಹೆಮ್ಮೆಯಿದೆ. ಬೇಸರಪಡಬಾರದು. ಎಷ್ಟು ದಶಕಗಳ ಬಳಿಕ ನಿಮ್ಮ ಮೂಲಕ ಭಾರತದ ಹಾಕಿ ಪುನರುಜ್ಜೀವನಗೊಂಡಿದೆ. ನಿಮ್ಮ ಕಠಿಣ ಪರಿಶ್ರಮದಿಂದ ಮಾತ್ರ ಅದು ಸಾಧ್ಯವಾಗಿದೆ' ಎಂದು ಪ್ರಧಾನಿ ಹೇಳಿದರು.
ಈ ವೇಳೆ ನೋವನ್ನು ತಡೆದುಕೊಳ್ಳಲಾಗದೇ ಆಟಗಾರ್ತಿಯರು ಬಿಕ್ಕಿ ಬಿಕ್ಕಿ ಅತ್ತರು. ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಕೋಚ್, ಪ್ರಧಾನಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಕೋಚ್ ಸಾಧನೆಯನ್ನು ಪ್ರಧಾನಿ ಮೆಚ್ಚಿದರು. ನಾಯಕಿ ರಾಣಿ ರಾಂಪಾಲ್ ಕೂಡಾ ಪ್ರಧಾನಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.