ಮನ ಮಿಡಿಯುವ ಕಥೆ ಸುಖಾಂತ್ಯಗೊಂಡ ಸಂದರ್ಭವದು. ಈ ತಿಂಗಳ ಆರಂಭದಲ್ಲಿ ಟೋಕಿಯೊದಲ್ಲಿನಡೆದ ಒಲಿಂಪಿಕ್ ಕ್ರೀಡೆಗಳ ಮಹಿಳೆಯರ ಜಾವೆಲಿನ್ ಥ್ರೊ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದರೂ ಮರಿಯಾ ಆಂಡ್ರೆಜೆಸಿಕ್ ಅವರು ಸಂಭ್ರಮ ಪಡುವ ಸ್ಥಿತಿಯಲ್ಲಿರಲಿಲ್ಲ. ಪೋಲೆಂಡ್ ದೇಶದ ಮರಿಯಾ ಅವರ ಎಂಟು ತಿಂಗಳ ಗಂಡು ಶಿಶುವಿಗೆ ತುರ್ತಾಗಿ ಹೃದಯ ಶಸ್ತ್ರ ಚಿಕಿತ್ಸೆಯ ಅಗತ್ಯವಿತ್ತು. ಅರ್ಥಿಕ ಸಂಕಷ್ಟದಲ್ಲಿದ್ದ ಅವರು ಹಣ ಹೊಂದಿಸಲು ದಾರಿ ಕಾಣದೇ ಒಲಿಂಪಿಕ್ಸ್‌ನಲ್ಲಿ ಪದಕವನ್ನು ಗೆದ್ದ ಐದೇ ದಿನಗಳಲ್ಲಿ ಹರಾಜಿಗಿಟ್ಟಿದ್ದರು.
ಈ ಪದಕವನ್ನು ಬಿಡ್‌ನಲ್ಲಿ ಖರೀದಿಸಿದ್ದ ಪೋಲೆಂಡ್‌ನ ಸೂಪರ್‌ಮಾರ್ಕೆಟ್ ದೈತ್ಯ ‘ಝ್ಯಾಬ್ಕಾ’, ಮರಿಯಾ ಅವರಿಗೆ ಅದನ್ನು ಮರಳಿಸಿ ಔದಾರ್ಯ ಮೆರೆದಿತ್ತು.
ಮರಿಯಾ, ಸ್ವತಃ ಮೂಳೆಯ ಕ್ಯಾನ್ಸರ್‌ನಿಂದ ಗೆದ್ದುಬಂದ ಸಾಹಸಿ. ಮಗ ಮೆಲೊಸಿಕ್ ಮಲಿಸಾಗೆ ಹೃದಯ ಶಸ್ತ್ರಚಿಕಿತ್ಸೆ, ದೂರದ ಸ್ಟಾನ್‌ಫರ್ಡ್ ವಿ.ವಿ. ಆಸ್ಪತ್ರೆಯಲ್ಲಿ ನಡೆಯಬೇಕಾಗಿದ್ದು ಅದಕ್ಕೆ, ವೆಚ್ಚ ಭರಿಸಲು ಅಥ್ಲೀಟ್ ಬಳಿ ಅಷ್ಟೊಂದು ಹಣವಿರಲಿಲ್ಲ
ಸಾಧಕ ಕ್ರೀಡಾಪಟುಗಳು ಒಲಿಂಪಿಕ್ಸ್ ಪದಕಗಳನ್ನು ಹರಾಜು ಮಾಡಿರುವುದು ಇದೇ ಮೊದಲ ಸಲವೇನಲ್ಲ. ಈ ಹಿಂದೆಯೂ ಈ ಮಹಾ ಕ್ರೀಡಾ ಮೇಳದಲ್ಲಿ ಪದಕ ಗೆದ್ದ ಡಜನ್‌ಗೂ ಹೆಚ್ಚು ಕ್ರೀಡಾಪಟುಗಳು ಒಂದೋ ಆರ್ಥಿಕ ಸಂಕಷ್ಟ ಎದುರಾದ ಕಾರಣ ಅಥವಾ ನಿಧಿ ಎತ್ತುವ ಉದ್ದೇಶಕ್ಕಾಗಿ (ಚಾರಿಟಿ) ಪದಕಗಳನ್ನು ಹರಾಜು ಹಾಕಿದ ನಿದರ್ಶನಗಳು ಇವೆ.
ನ್ಯೂಯಾರ್ಕ್ ಟೈಮ್ಸ್ ದೈನಿಕ ಇತ್ತೀಚಿಗೆ ಒಲಿಂಪಿಕ್ಸ್ ಪದಕಗಳ ಹರಾಜಿನ ಬಗ್ಗೆ ಆಸಕ್ತಿದಾಯಕ ವರದಿ ಪ್ರಕಟಿಸಿತ್ತು. ಪ್ಯಾರಿಸ್‌ನಲ್ಲಿ 1900ರಲ್ಲಿ ನಡೆದ ಎರಡನೇ ಆಧುನಿಕ ಒಲಿಂಪಿಕ್ಸ್‌ನ ರಜತ ಪದಕವೊಂದು, ಇತ್ತೀಚೆಗಷ್ಟೇ 1,283 ಡಾಲರ್‌ಗಳಿಗೆ (ಸುಮಾರು ₹ 2.78 ಲಕ್ಷ) ಮಾರಾಟಗೊಂಡಿತ್ತು. 1956ರ ಚಳಿಗಾಲದ ಒಲಿಂಪಿಕ್ಸ್‌ನ (ಇಟಲಿಯಲ್ಲಿ ನಡೆದಿತ್ತು) ಕಂಚಿನ ಪದಕ 3,750 ಡಾಲರ್‌ಗೆ ಮಾರಾಟಗೊಂಡಿತ್ತು.
ಆದರೆ ಮೊದಲ ಅಧುನಿಕ ಒಲಿಂಪಿಕ್ಸ್‌ನ (1896) ರಜತ ಪದಕವೊಂದು ಆರು ಅಂಕಿಗಳ ಮೊತ್ತಕ್ಕೆ ಮಾರಾಟಗೊಂಡಿತ್ತು. ಆಗ ಚಿನ್ನದ ಪದಕ ಕೊಡುವ ಸಂಪ್ರದಾಯವಿರಲಿಲ್ಲ. ಮೊದಲ ಸ್ಥಾನ ಪಡೆದವರಿಗೆ ರಜತ ಪದಕ ನೀಡಲಾಗುತ್ತಿತ್ತು. ಈ ಅತ್ಯಮೂಲ್ಯ ಪದಕವನ್ನು ಬಿಡ್ ಗೆದ್ದ ವ್ಯಕ್ತಿಯೊಬ್ಬರು 1,80,111 ಡಾಲರ್‌ಗಳಿಗೆ (₹1.33 ಕೋಟಿ) ಖರೀದಿಸಿದ್ದರು ಎಂದು ಹರಾಜು ಸಂಸ್ಥೆ ಬಾಸ್ಟನ್ ಮೂಲದ ಆರ್.ಆರ್. ಆಕ್ಷನ್ ತಿಳಿಸಿತ್ತು.
ಅಮೆರಿಕದ ಬ್ಯಾಸ್ಕೆಟ್‌ಬಾಲ್ ತಂಡದ ಆಟಗಾರ, ಬಾಸ್ಟನ್ ಸೆಲ್ಟಿಕ್ಸ್‌ಗೆ ಆಡಿದ್ದ ದಿಗ್ಗಜ ಬಿಲ್ ರಸೆಲ್, 1956ರ ಮೆಲ್ಬರ್ನ್ ಕ್ರೀಡೆಗಳಲ್ಲಿ ಗೆದ್ದ ಚಿನ್ನದ ಪದಕವನ್ನು ಹರಾಜಿಗಿಡಲು ತೀರ್ಮಾನಿಸಿದ್ದಾರೆ. ಅವರು ಇತರ ಸ್ಮರಣಿಕೆಗಳನ್ನೂ ಮಾರಲು ತೀರ್ಮಾನಿಸಿದ್ದಾರೆ. ಅವರು 1956ರ ಒಲಿಂಪಿಕ್ಸ್‌ನಲ್ಲಿ ಆಡಿದ್ದ ತಂಡಕ್ಕೆ ನಾಯಕರಾಗಿದ್ದರು. ಈ ಹರಾಜು ಡಿಸೆಂಬರ್‌ನಲ್ಲಿ ನಡೆಯುವ ಸಾಧ್ಯತೆಯಿದೆ.
ಅಮೆರಿಕದ ದಂತಕತೆ ಅಥ್ಲೀಟ್ ಜೆಸ್ಸಿ ಓವೆನ್ಸ್ 1936ರ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಅಮೋಘ ರೀತಿ ಗೆದ್ದ ನಾಲ್ಕು ಸ್ವರ್ಣ ಪದಕಗಳಲ್ಲಿ ಒಂದನ್ನು ಖರೀದಿಸಿದ್ದ ವ್ಯಕ್ತಿಯೊಬ್ಬರು ಅದಕ್ಕೆ ನೀಡಿದ್ದ ಮೊತ್ತ ಗೊತ್ತೇ? ₹11.12 ಕೋಟಿ. ಕೆಲಿಫೋರ್ನಿಯಾದ ಎಸ್‌ಸಿಪಿ ಆಕ್ಷನ್ಸ್ ಇದರ ಹರಾಜು ಕೈಗೊಂಡಿತ್ತು. ಅಡಾಲ್ಫ್ ಹಿಟ್ಲರ್ ಅವರ ಸಮ್ಮುಖದಲ್ಲಿ ಒಲಿಂಪಿಕ್ಸ್ ಸ್ಪರ್ಧೆಗಳು ನಡೆದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.