ಟೋಕಿಯೊ: ಹೈದರಾಬಾದಿನ ಪಿ.ವಿ. ಸಿಂಧು ಶನಿವಾರ ಚೀನಾ ತೈಪೆಯ ತೈ ಜು ಯಿಂಗ್ ಎದುರು ಸೋಲುವುದರೊಂದಿಗೆ ಚಿನ್ನದ ಪದಕದ ಆಸೆ ಕಮರಿತು. ಕಂಚು ಗೆಲ್ಲುವ ನಿರೀಕ್ಷೆಯೊಂದು ಉಳಿಯಿತು.
ಇಲ್ಲಿ ನಡೆದ ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಆಟಗಾರ್ತಿ ತೈ ಜು ಯಿಂಗ್ 18–21, 12–21ರಿಂದ ಸಿಂಧು ಎದುರು ಗೆದ್ದರು.
2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವ ಸಿಂಧು, ಟೋಕಿಯೊದಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆ ಮೂಡಿಸಿದ್ದರು. ಅವರು ಜೆ ಗುಂಪಿನ ಪಂದ್ಯಗಳು ಮತ್ತು ಕ್ವಾರ್ಟರ್‌ಫೈನಲ್‌ನಲ್ಲಿ ಅಮೋಘ ಜಯ ಸಾಧಿಸಿದ್ದರು.
ಆದರೆ, ನಾಲ್ಕರ ಘಟ್ಟದ ಪಂದ್ಯದಲ್ಲಿ ತೈ ಜು ಯಿಂಗ್ ಅವರ ಚಾಣಾಕ್ಷ ಆಟಕ್ಕೆ ತಲೆಬಾಗಿದರು. ಇದರಿಂದಾಗಿ ಸತತ ಎರಡನೇ ಒಲಿಂಪಿಕ್ ಕೂಟದ ಫೈನಲ್ ಪ್ರವೇಶಿಸುವ ಅವಕಾಶ ಸಿಂಧು ಕೈತಪ್ಪಿತು.
ಕಂಚಿನ ಪದಕಕ್ಕಾಗಿ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಸಿಂಧು ಚೀನಾದ ಹಿ ಬಿಂಗ್‌ಜಿಯಾವೊ ವಿರುದ್ಧ ಕಣಕ್ಕಿಳಿಯಲಿದ್ದಾರೆ.
40 ನಿಮಿಷಗಳ ಹೋರಾಟ: ಸಿಂಧು ಮತ್ತು ತೈಜು 19ನೇ ಬಾರಿ ಮುಖಾಮುಖಿಯಾದ ಈ ಪಂದ್ಯವು 40 ನಿಮಿಷ ನಡೆಯಿತು. ಮೊದಲ ಗೇಮ್‌ನಲ್ಲಿಯೇ ಎಲ್ಲ ನಾಟಕೀಯ ತಿರುವುಗಳೂ ಕಂಡು ಬಂದವು. ಆರಂಭದಲ್ಲಿ ತೈಜು ಮೇಲುಗೈ ಸಾಧಿಸಿದರೆ, ಅರ್ಧವಿರಾಮಕ್ಕೆ ಸಿಂಧು ಉತ್ತಮ ಮುನ್ನಡೆಯಲ್ಲಿದ್ದರು.
ಆದರೆ ವಿರಾಮದ ನಂತರ ಪುಟಿದೆದ್ದ ತೈಪೆಯ 27ವರ್ಷದ ಆಟಗಾರ್ತಿ ಸಿಂಧು ಸಾಮರ್ಥ್ಯಕ್ಕೆ ಸವಾಲೊಡ್ಡಿದರು. ಲಾಗ್ ರ‍್ಯಾಲಿ, ನೆಟ್ ಬಳಿ ಡ್ರಾಪ್, ಕ್ರಾಸ್‌ಕೋರ್ಟ್ ಸ್ಮ್ಯಾಷ್‌ಗಳಿಗೆ ಸಿಂಧು ಕೂಡ ತಕ್ಕ ಉತ್ತ ಕೊಟ್ಟರು. ಆದರೆ, ತೈಜು ಪ್ರಯೋಗಿಸಿದ ನೇರ ಸ್ಮ್ಯಾಷ್‌ಗಳಿಗೆ ಸಿಂಧು ಬಳಿ ಉತ್ತರವಿರಲಿಲ್ಲ.
11–11ರಿಂದ ಸಮಬಲ ಸಾಧಿಸಿದ ತೈಜು ಮತ್ತು ಸಿಂಧು ನಡುವೆ18–18 ಪಾಯಿಂಟ್ಸ್‌ವರೆಗೂ ನಡೆದ ಜಿದ್ದಾಜಿದ್ದಿ ಮೈನವಿರೇಳಿಸುವಂತಿತ್ತು.ಈ ಹಂತದಲ್ಲಿ ತೈಜು ತಡ ಮಾಡಲಿಲ್ಲ. ಫೋರ್‌ಹ್ಯಾಂಡ್ ಸ್ಮ್ಯಾಷ್ ಪ್ರಯೋಗಿಸಿದ ತೈಜು ಗೇಮ್ ಗೆದ್ದರು.
ಎರಡನೇ ಗೇಮ್‌ನಲ್ಲಿ ಸಿಂಧು ಆಕ್ರಮಣಕಾರಿ ಶೈಲಿಯ ಆಟ ಆರಂಭಿಸಿದರು. ಕ್ರಾಸ್‌ಕೋರ್ಟ್ ಸ್ಮ್ಯಾಷ್, ಟಾಸ್ ಮತ್ತು ಚುರುಕಾದ ರಿಟರ್ನ್‌ಗಳನ್ನು ಕೊಟ್ಟರು. ಆದರೆ ಅವರ ಲಾಂಗ್ ರ‍್ಯಾಲಿಗಳು ಗೆರೆ ದಾಟಿದ್ದು ತುಟ್ಟಿಯಾದವು. ವಿರಾಮಕ್ಕೆ ತೈಜು 11–7ರ ಮುನ್ನಡೆ ಸಾಧಿಸಿಬಿಟ್ಟರು. ನಂತರದ ಆಟದಲ್ಲಿ ತೈಜು 10 ಪಾಯಿಂಟ್ಸ್ ಕೊಳ್ಳೆಹೊಡೆದರೆ, ಸಿಂಧುಗೆ ಕೇವಲ ಐದು ಅಂಕಗಳನ್ನು ಗಳಿಸಲು ಮಾತ್ರ ಸಾಧ್ಯವಾಯಿತು. ಸಿಂಧು ಎದುರು ತೈಜು 14ನೇ ಜಯ ದಾಖಲಿಸಿ, ಒಲಿಂಪಿಕ್ ಫೈನಲ್‌ಗೆ ಸಾಗಿದರು.
ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ತೈಜು ಮತ್ತು ಚೀನಾದ ಚೆನ್ ಯೂಫಿ ವಿರುದ್ಧ ಆಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.