ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅವರಿಗೆ ₹ 2 ಕೋಟಿ ಬಹುಮಾನ ಮತ್ತು ರೈಲ್ವೆ ಹುದ್ದೆಯಲ್ಲಿ ಬಡ್ತಿ ನೀಡುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಣೆ ಮಾಡಿದ್ದಾರೆ.
ತನ್ನ ಪ್ರತಿಭೆ, ಪರಿಶ್ರಮ ಮತ್ತು ಸ್ಥೈರ್ಯದಿಂದ ವಿಶ್ವದ ಲಕ್ಷಾಂತರ ಮಂದಿ ಮೀರಾಬಾಯಿ ಸ್ಫೂರ್ತಿಯಾಗಿದ್ದಾರೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಭಾರತದ ಹೆಮ್ಮೆ ಮೀರಾಬಾಯಿ ಚಾನು ಅವರಿಗೆ ಭಾರತೀಯ ರೈಲ್ವೆ ಅಭಿನಂದನೆ ಸಲ್ಲಿಸುತ್ತದೆ ಮತ್ತು ಅವರ ಸಾಧನೆಯನ್ನು ಗೌರವಿಸುತ್ತದೆ. ಇದರೊಂದಿಗೆ ₹ 2 ಕೋಟಿ ಬಹುಮಾನ ಮತ್ತು ರೈಲ್ವೆ ಹುದ್ದೆಯಲ್ಲಿ ಬಡ್ತಿ ನೀಡಲಾಗುವುದು. ಭಾರತಕ್ಕಾಗಿ ಹೀಗೆ ಗೆಲ್ಲುತ್ತಲೇ ಇರಬೇಕು ಎಂದು ಅಶ್ವಿನಿ ವೈಷ್ಣವ್ ಆಶಿಸಿದರು.
49 ಕೆ.ಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಮೀರಾಬಾಯಿ ಬೆಳ್ಳಿ ಪದಕ ಗೆದ್ದಿದ್ದಾರೆ. ಇದು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 21 ವರ್ಷಗಳ ಬಳಿಕ ಭಾರತ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಪದಕವೊಂದನ್ನು ಗೆದ್ದ ಸಾಧನೆಯಾಗಿದೆ.
29 ವರ್ಷದ ಮೀರಾಬಾಯಿ ಒಟ್ಟು 202 ಕೆ.ಜಿ (87 ಕೆ.ಜಿ. ಹಾಗೂ 115 ಕೆ.ಜಿ.) ಭಾರ ಎತ್ತುವ ಮೂಲಕ ಕರ್ಣಂ ಮಲ್ಲೇಶ್ವರಿ ಸಾಧನೆಯನ್ನು ಮೀರಿದರು. 2000ರ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಕರ್ಣಂ ಮಲ್ಲೇಶ್ವರಿ ವೇಟ್‌ಲಿಫ್ಟಿಂಗ್ 69 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.