ADVERTISEMENT

ಎರಡು ವರ್ಷ ಇದ್ದಾಗಲೇ ಈಜುಕೊಳಕ್ಕಿಳಿಸಿದ್ದ ಅಪ್ಪ: ಶ್ರೀಹರಿ ನಟರಾಜ್

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಈಜಲಿರುವ ಕನ್ನಡಿಗ

ಗಿರೀಶದೊಡ್ಡಮನಿ
Published 4 ಜುಲೈ 2021, 19:31 IST
Last Updated 4 ಜುಲೈ 2021, 19:31 IST
ಶ್ರೀಹರಿ ನಟರಾಜ್
ಶ್ರೀಹರಿ ನಟರಾಜ್   

‘ನಾನು ಎರಡು ವರ್ಷದವನಿದ್ದೆ. ತುಂಟಾಟ ಜಾಸ್ತಿ ಮಾಡುತ್ತಿದ್ದೆ. ಅದಕ್ಕೆ ಅಪ್ಪ ನನಗೆ ಬೇಬಿ ಪೂಲ್‌ನಲ್ಲಿ ಇಳಿಸಿ ಈಜಲು ಕಲಿಸಿದರು. ಅಣ್ಣನೂ ಅದೇ ಈಜುಕೊಳದಲ್ಲಿ ಈಜುತ್ತಿದ್ದ. ಹಾಗೇ ಈಜು ಇಷ್ಟವಾಯಿತು. ಇಲ್ಲಿಯವರೆಗೂ ಬೆಳೆದೆ’–

ಹೀಗೆಂದವರು ಇದೇ ತಿಂಗಳು ಟೋಕಿಯೊ ಒಲಿಂಪಿಕ್ಸ್‌ನ ಈಜು ಸ್ಪರ್ಧೆಯ ಪುರುಷರ 100 ಮೀಟರ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಶ್ರೀಹರಿ. ಈಚೆಗೆ ರೋಮ್‌ನಲ್ಲಿ ನಡೆದ ಕೂಟದಲ್ಲಿ 20 ವರ್ಷದ ಶ್ರೀಹರಿ ‘ಎ’ ಅರ್ಹತೆ ಗಳಿಸಿದರು. ಈ ಸಾಧನೆ ಮಾಡಿದ ಭಾರತದ ಕಿರಿಯ ವಯಸ್ಸಿನ ಈಜುಪಟುವೆಂಬ ಹೆಗ್ಗಳಿಕೆ ಅವರದ್ದು. ಸಿಟ್ಟು ತಣಿಸಲು ಈಜುಕೊಳಕ್ಕೆ ಪುಟ್ಟ ಕಂದನನ್ನು ಇಳಿಸಿದ್ದ ಶ್ರೀಹರಿ ಅವರ ತಂದೆಗೂ ಇಂತಹದೊಂದು ಸಂಭ್ರಮದ ದಿನದ ನಿರೀಕ್ಷೆಯೇ ಇದ್ದಿರಲಿಕ್ಕಿಲ್ಲ. ಎಲ್ಲರ ನಿರೀಕ್ಷೆಯನ್ನೂ ಮೀರಿ ಶ್ರೀಹರಿ ಟೋಕಿಯೊದತ್ತ ಸಾಗುತ್ತಿದ್ದಾರೆ. 18 ವರ್ಷಗಳಲ್ಲಿ ತಮ್ಮ ಪರಿಶ್ರಮ, ನಲಿವು, ನಿರಾಶೆಗಳನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ. ಅದರ ಸಾರಾಂಶ ಇಲ್ಲಿದೆ.

‘10ನೇ ವಯಸ್ಸಿನಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದೆ. ಗೆದ್ದಾಗ ಆಸಕ್ತಿ, ಆತ್ಮವಿಶ್ವಾಸ ಹೆಚ್ಚಿತು. ಸ್ಪರ್ಧಾತ್ಮಕವಾಗಿ ಗಂಭೀರವಾಗಿ ಪ್ರಯತ್ನಿಸತೊಡಗಿದೆ. ಕೋಚ್ ಬಿನೇಶ್ ಅವರ ಮಾರ್ಗದರ್ಶನವೂ ದೊಡ್ಡದು. ಈಗಲೂ ಅವರು ನನ್ನೊಂದಿಗೆ ಇದ್ದಾರೆ. ಹಣಕಾಸು, ಸೌಲಭ್ಯಗಳ ಇತಿಮಿತಿಯ ಸವಾಲುಗಳ ನಡುವೆಯೂ ಪ್ರಯತ್ನ ಮಾಡಿದೆ. ಡಾಲ್ಫಿನ್ ಕ್ಲಬ್‌ನಲ್ಲಿ ಉತ್ತಮ ಸೌಲಭ್ಯಗಳು ಮತ್ತು ತರಬೇತಿ ನೆರವಾಯಿತು.

ADVERTISEMENT

‘2018ರಲ್ಲಿ ಕಾಮನ್‌ವೆಲ್ತ್‌ ಕೂಟ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಅನುಭವ ಅವಿಸ್ಮರಣೀಯ. ಅಂತರರಾಷ್ಟ್ರೀಯ ಮಟ್ಟದಲ್ಲಿರುವ ಸೌಲಭ್ಯಗಳು ಮತ್ತು ಏಷ್ಯಾದ ಶ್ರೇಷ್ಠ ಈಜುಪಟುಗಳೊಂದಿಗೆ ಸ್ಪರ್ಧೆ ಮಾಡಿದ್ದು ಹೊಸ ಅನುಭವ ನೀಡಿತು. ಭಾರತ ಕ್ರೀಡಾ ಪ್ರಾಧಿಕಾರದ ಟಾಪ್ ಯೋಜನೆಯ ನೆರವಿನಿಂದಾಗಿ ಹಣಕಾಸು ಸಮಸ್ಯೆ ನೀಗಿತು. ಒಲಿಂಪಿಕ್ಸ್‌ನಲ್ಲಿ ಎ ಅರ್ಹತೆ ಪಡೆಯುವುದು ಕಷ್ಟ. ಆ ಮಟ್ಟ ಸಾಧಿಸಿರುವೆ.

‘ಮಾನಸಿಕವಾಗಿ ಸದೃಢರಾಗಿರುವುದು ಬಹಳ ಮುಖ್ಯ. ಸೋತಾಗ ಕುಗ್ಗಿದರೆ ಮುಂದಿನ ಅವಕಾಶಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಈಗ ಸೋತರೆ ಸೋಲಲಿ, ಮುಂದಿನ ಬಾರಿ ಗೆಲ್ಲುತ್ತೇನೆ ಎಂಬ ಮನೋಭಾವ ಮುಖ್ಯ. ನನಗೆ ಮೆಂಟಲ್ ಕಂಡಿಷನಿಂಗ್ ಕೋಚ್ ಇಲ್ಲ. ಆದರೆ, ಆಗಿದ್ದನ್ನು ಬಿಟ್ಟು ಮುಂದೆ ಸಾಗುವುದೇ ಉತ್ತಮ. ಅದೇ ನಮ್ಮನ್ನು ಸದೃಢವಾಗಿಡುತ್ತದೆ.

‘ಈ ಹಾದಿಯಲ್ಲಿ ಬಹಳಷ್ಟು ವೈಯಕ್ತಿಕ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಜೀವನಶೈಲಿ ಮತ್ತು ಸಾಮಾಜಿಕ ಒಡನಾಟಗಳನ್ನು ನಿಯಂತ್ರಿಸಬೇಕು. ಕಳೆದ ಹತ್ತು ವರ್ಷಗಳಿಂದ ನಾನು ಕುಟುಂಬದೊಂದಿಗೆ ಪ್ರವಾಸ ಮಾಡಿಲ್ಲ. ಈಜು, ಮನೆ, ಶಾಲೆ ಇಷ್ಟೇ ಜಗತ್ತು. ಬೇರೆ ದೇಶಗಳಿಗೆ ಸ್ಪರ್ಧೆಗಳಿಗೆ ಹೋದಾಗಲೂ ಹೊರಗಡೆ ವಿಹಾರಕ್ಕೆ ಹೋಗುವುದು ಕಡಿಮೆ. ನಾನು ಭಾಗವಹಿಸುವ ಸ್ಪರ್ಧೆಗಳ ಮೇಲೆ ಹೆಚ್ಚು ನಿಗಾವಹಿಸುತ್ತೇನೆ’ ಎಂದು ಹೇಳುತ್ತಾರೆ ಶ್ರೀಹರಿ.

ಶ್ರೀಹರಿ ಜೈನ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಬಿಎ ಓದುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.