ಬೆಂಗಳೂರು: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಮೊದಲ ಬೆಳ್ಳಿ ಪದಕ ತಂದುಕೊಟ್ಟ ಹೆಮ್ಮೆಯ ಅಥ್ಲೀಟ್ ಮೀರಾಬಾಯಿ ಚಾನು ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 49 ಕೆಜಿ ವಿಭಾಗದಲ್ಲಿ 202 ಕೆಜಿ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗಳಿಸಿದ್ದಾರೆ.
ಚಾನು ಅವರು ತರಬೇತಿ ಪಡೆಯಲು ತೆರಳುತ್ತಿದ್ದಾಗ ಸೂಕ್ತ ಸಾರಿಗೆ ಸೌಲಭ್ಯವಿಲ್ಲದೆ ಪರದಾಡುತ್ತಿದ್ದರು. ಅಂತಹ ಸಂದರ್ಭದಲ್ಲಿ ಚಾನು ಅವರ ಹಳ್ಳಿ ನಾಂಗ್‌ಪೊಕ್ ಕಾಚಿಂಗ್‌ನಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಮಣಿಪುರದ ಇಂಫಾಲ್‌ನಲ್ಲಿರುವ ಸ್ಪೋರ್ಟ್ಸ್ ಅಕಾಡೆಮಿಗೆ ತೆರಳಲು ಲಾರಿ ಚಾಲಕರು ನೆರವಾಗಿದ್ದಾರೆ.
ಮರಳು ಸಾಗಾಟದ ಲಾರಿಗಳು, ಗೂಡ್ಸ್ ಲಾರಿಗಳಲ್ಲಿ ಚಾನು ಲಿಫ್ಟ್ ಪಡೆದು, ಅಕಾಡೆಮಿಗೆ ತೆರಳಿ ತರಬೇತಿ ಪಡೆಯುತ್ತಿದ್ದರು.
ತರಬೇತಿಗಾಗಿ ಹೋಗಿ ಬರಲು ಲಿಫ್ಟ್ ನೀಡಿ ಸಹಾಯ ಮಾಡಿರುವ ಸುಮಾರು 150 ಮಂದಿ ಲಾರಿ ಚಾಲಕರನ್ನು ಚಾನು ಅವರು ಗೌರವಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಪ್ರಯಾಣಕ್ಕೆ ಅನುಕೂಲ ಜತೆಗೆ, ಉಚಿತ ಸಾರಿಗೆ ಸೌಲಭ್ಯ ಕಲ್ಪಿಸಿದ ಎಲ್ಲ ಚಾಲಕ ಮತ್ತು ಲಾರಿ ಸಹಾಯಕರಿಗೆ ಚಾನು ಟಿ ಶರ್ಟ್, ಮಣಿಪುರಿ ಶಾಲು ಮತ್ತು ಊಟ ನೀಡುವ ಮೂಲಕ ಕೃತಜ್ಞತೆ ಅರ್ಪಿಸಿದ್ದಾರೆ.
ಚಾನು ನಡೆಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.