ಟೋಕಿಯೊ: ಭಾರತದ ಭರವಸೆಯಾಗಿದ್ದ ವಿಶ್ವ ನಂ.1 ರ‍್ಯಾಂಕ್‌ನ ಬಾಕ್ಸರ್ ಅಮಿತ್ ಪಂಘಲ್, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸೋಲಿನ ಆಘಾತಕ್ಕೊಳಗಾಗುವ ಮೂಲಕ ಕೂಟದಿಂದಲೇ ನಿರ್ಗಮಿಸಿದ್ದಾರೆ.
ಪುರುಷರ ಫ್ಲೈವೇಟ್ (52 ಕೆ.ಜಿ) ವಿಭಾಗದ ಪ್ರೀ-ಕ್ವಾರ್ಟರ್‌ಫೈನಲ್‌ನಲ್ಲಿ ರಿಂಗ್‌ಗಿಳಿದಿದ್ದ ಅಮಿತ್ ಪಂಘಲ್, ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಬಾಕ್ಸರ್ ಕೊಲಂಬಿಯಾದ ಯೂಬರ್ಜೆನ್ ಮಾರ್ಟಿನೆಜ್ ವಿರುದ್ಧ 1-4ರಲ್ಲಿ ಸೋಲು ಅನುಭವಿಸಿದರು.
ತಾವು ಭಾಗವಹಿಸಿದ ಕೂಟಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡುತ್ತಲೇ ಬಂದಿರುವ ಅಮಿತ್, ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಭಾರತದ ಭರವಸೆಯಾಗಿದ್ದರು. ಅಲ್ಲದೆ ಮೊದಲ ಸುತ್ತಿನಲ್ಲಿ 'ಬೈ' ಪಡೆದಿದ್ದರು. ಆದರೆ ಒಲಿಂಪಿಕ್ಸ್‌ನಲ್ಲಿ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಶ್ರೇಷ್ಠ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.
ಕೊಲಂಬಿಯಾ ಬಾಕ್ಸರ್‌ನ ನಿರಂತರ ಪ್ರಹಾರವನ್ನು ತಡೆಯೊಡ್ಡುವುದು ಅಗ್ರ ಶ್ರೇಯಾಂಕಿತ ಅಮಿತ್ ಪಾಲಿಗೆ ಸವಾಲೆನಿಸಿತ್ತು. ಇದರಿಂದಾಗಿ ಪದೇ ಪದೇ ಅಪಾಯಕ್ಕೊಳಗಾಗಿ ಪಂದ್ಯದಲ್ಲಿ ಹಿಡಿತ ಕಳೆದುಕೊಂಡರು.
ಅತಿಮ್ ಪಂಘಲ್, 2018ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಪದಕ ಗೆದ್ದಿದ್ದರು. 2019ರ ವಿಶ್ವ ಚಾಂಪಿಯನ್‌ನಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿದ್ದರು.
ಶುಕ್ರವಾರದಂದು ಮಹಿಳೆಯರ 69 ಕೆ.ಜಿ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ಲವ್ಲಿನಾ ಬೊರ್ಗೊಹೇನ್, ಕನಿಷ್ಠ ಕಂಚಿನ ಪದಕ ಖಚಿತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.