ADVERTISEMENT

ಆಳ-ಅಗಲ: ಪ್ಯಾರಾಲಿಂಪಿಕ್ಸ್‌- ಇಲ್ಲಿ ಎಲ್ಲರೂ ವಿಜೇತರೇ!

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2021, 21:45 IST
Last Updated 23 ಆಗಸ್ಟ್ 2021, 21:45 IST
ವ್ಹೀಲ್‌ಚೇರ್ ರಗ್ಬಿ ಆಟಗಾರರ ಅಭ್ಯಾಸ  –ಎಎಫ್‌ಪಿ ಚಿತ್ರ
ವ್ಹೀಲ್‌ಚೇರ್ ರಗ್ಬಿ ಆಟಗಾರರ ಅಭ್ಯಾಸ  –ಎಎಫ್‌ಪಿ ಚಿತ್ರ   

ಜೀವನ ಒಡ್ಡಿದ ಅತ್ಯಂತ ಕ್ಲಿಷ್ಟ ಪರೀಕ್ಷೆಯನ್ನೇ ಗೆದ್ದವರಿಗೆ ಮತ್ಯಾವ ಸೋಲು ಎದುರಾದೀತು?

ಮಂಗಳವಾರ ಆರಂಭವಾಗಲಿರುವ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಕಣಕ್ಕಿಳಿಯುವ ಅಂಗವಿಕಲ ಕ್ರೀಡಾಪಟುಗಳನ್ನು ನೋಡಿದಾಗ ಹೀಗೆನ್ನಿಸದೇ ಇರದು. ಜನ್ಮತಃ ಅಂಗವೈಕಲ್ಯ ಇರುವವರು, ಯುದ್ಧ, ಅಪಘಾತ ಮತ್ತು ಅವಘಡಗಳಲ್ಲಿ ಕೈಕಾಲು ಕಳೆದುಕೊಂಡವರೆಲ್ಲರೂ ಇಲ್ಲಿ ತಮ್ಮ ವಿಶೇಷ ಸಾಮರ್ಥ್ಯ ಮೆರೆಯುತ್ತಾರೆ. ಸ್ಪರ್ಧೆಗಳಲ್ಲಿ ಕೆಲವರು ಪದಕ ಜಯಿಸುತ್ತಾರೆ. ಆದರೆ ಎಲ್ಲರೂ ನೋಡುಗರ ಮನಗೆಲ್ಲುತ್ತಾರೆ. ಇಲ್ಲಿ ಯಾರಿಗೂ ಸೋಲು ಎಂಬುದೇ ಇಲ್ಲ.

ಮನುಕುಲದ ಏಕತೆಯನ್ನು ಸಾರುವ ಒಲಿಂಪಿಕ್ ಅಭಿಯಾನದ ಮಹತ್ವದ ಭಾಗ ಇದು. ಮಾನವಕುಲದಲ್ಲಿ ಯಾರೂ ಮೇಲು–ಕೀಳಲ್ಲ. ಎಲ್ಲರಿಗೂ ಅವಕಾಶವುಂಟು ಎಂದು ಸಾರುವ ಕೂಟ ಇದು.

ADVERTISEMENT

ಅಂಗವೈಕಲ್ಯದಿಂದ ಮುರುಟಿದ ಜೀವನಕ್ಕೆ ಚೈತನ್ಯ ತುಂಬುವ ಶಕ್ತಿ ಕ್ರೀಡೆಗೆ ಇದೆ ಎಂಬುದನ್ನು 1888ರಲ್ಲಿಯೇ ಜಗತ್ತು ಕಂಡುಕೊಂಡಿತ್ತು. ಶ್ರವಣದೋಷವುಳ್ಳವರಿಗಾಗಿ ಬರ್ಲಿನ್‌ನಲ್ಲಿ ಒಂದು ಕ್ರೀಡಾಕ್ಲಬ್ ಈ ಕಾರ್ಯ ಮಾಡುತ್ತಿತ್ತು. ಕೆಲ ವರ್ಷಗಳ ನಂತರ, ಎರಡನೇ ಮಹಾಯುದ್ಧದಲ್ಲಿ ಗಾಯಗೊಂಡು ಅಂಗವಿಕಲರಾದವರಲ್ಲಿ ಜೀವಚೈತನ್ಯವನ್ನು ತುಂಬುವ ಏಕೈಕ ದಾರಿ ಕ್ರೀಡೆಯಾಗಿ ತೋರಿತ್ತು. 1944ರಲ್ಲಿ ಬ್ರಿಟನ್ ಸರ್ಕಾರದ ಮನವಿಯ ಮೇರೆಗೆ ಡಾ. ಲುಡ್ವಿಗ್ ಗುಟ್ಮನ್ ಅವರು ಬೆನ್ನುಹುರಿ ಹಾನಿಗೊಳಗಾದವರಿಗಾಗಿ ಪುನಶ್ಚೇತನ ಶಿಬಿರ ಆರಂಭಿಸಿದರು.

ಸ್ಟೋಕ್ ಮ್ಯಾಂಡವೆಲ್‌ನಲ್ಲಿ ಕೇಂದ್ರ ಕಾರ್ಯಾರಂಭ ಮಾಡಿತು. ಅಲ್ಲಿಯ ರೋಗಿಗಳ ಮನೋಲ್ಲಾಸಕ್ಕಾಗಿ ಡಾ.ಗುಟ್ಮನ್ ಕ್ರೀಡೆಗಳನ್ನು ಆಯೋಜಿಸತೊಡಗಿದರು. ಅವು ಚಿಕಿತ್ಸೆಯ ಭಾಗಗಳಾಗಿದ್ದವು. ಕಾಲಕ್ರಮೇಣ ಸ್ಪರ್ಧಾತ್ಮಕವಾಗಿ ರೂಪುಗೊಂಡವು. 1948ರ ಲಂಡನ್ ಒಲಿಂಪಿಕ್ಸ್‌ ಉದ್ಘಾಟನೆ ಸಮಾರಂಭದ ದಿನ, ಡಾ. ಗುಟ್ಮನ್ ಅವರು ಗಾಲಿಕುರ್ಚಿ ಸ್ಪರ್ಧೆಗಳನ್ನು ಮೊದಲ ಬಾರಿಗೆ ಆಯೋಜಿಸಿದ್ದರು. ಅದಕ್ಕೆ ಅವರು ‘ಸ್ಟೋಕ್ ಮ್ಯಾಂಡೆವಲ್ ಗೇಮ್ಸ್’ ಎಂದು ಹೆಸರಿಟ್ಟರು. ಇದು ಪ್ಯಾರಾಲಿಂಪಿಕ್ಸ್‌ ಕೂಟಕ್ಕೆ ಮುನ್ನುಡಿಯಾಯಿತು. 1952ರಲ್ಲಿಯೂ ಕೂಟ ನಡೆಯಿತು.

ಯುದ್ಧದಲ್ಲಿ ಗಾಯಗೊಂಡು ಚೇತರಿಸಿಕೊಂಡಿದ್ದ 16 ಸೈನಿಕರು ಭಾಗವಹಿಸಿದ್ದರು. ಆರ್ಚರಿಯಲ್ಲಿ ಮಹಿಳೆಯರು ಭಾಗವಹಿಸಿದ್ದರು. 1960ರಲ್ಲಿ ರೋಮ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್‌ (ಸ್ಟೋಕ್‌ ಮ್ಯಾಂಡೆವಲ್ ಗೇಮ್ಸ್ ಪರಿವರ್ತನೆಯಾಯಿತು) ಸೇರ್ಪಡೆಗೊಂಡಿತು. ಅದರಲ್ಲಿ 23 ದೇಶಗಳ 400 ಅಥ್ಲೀಟ್‌ಗಳು ಭಾಗವಹಿಸಿದ್ದರು.

1976ರಲ್ಲಿ ಟೊರಾಂಟೊದಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಅಂಧತ್ವ ಮತ್ತು ಕಾಲುಗಳನ್ನು ಕಳೆದುಕೊಂಡವರ ವಿಭಾಗಗಳನ್ನು ಸೇರ್ಪಡೆ ಮಾಡ ಲಾಯಿತು. ನಂತರದ ವರ್ಷಗಳಲ್ಲಿ ಸೆರೆಬ್ರಲ್ ಪಾಲ್ಸಿ, ಶ್ರವಣ ದೋಷ ಮತ್ತು ಅಂಗವೈಕಲ್ಯದ ಇನ್ನುಳಿದ ವಿಭಾಗಗಳಲ್ಲಿಯೂ ಸ್ಪರ್ಧೆಗಳು ಆರಂಭವಾದವು.

ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್ಸ್ ಸಂಸ್ಥೆ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಂಸ್ಥೆಗಳು ಒಪ್ಪಂದ ಮಾಡಿಕೊಂಡ ನಂತರ 90ರ ದಶಕದಿಂದ ಈಚೆಗೆ ಒಲಿಂಪಿಕ್ಸ್‌ ನಡೆದ ವರ್ಷ ಮತ್ತು ತಾಣ ದಲ್ಲಿಯೇ ಪ್ಯಾರಾಲಿಂಪಿಕ್ಸ್‌ ನಡೆಯುತ್ತಿದೆ.

ಹ್ಯಾಟ್ರಿಕ್ ಕನಸಿನಲ್ಲಿ ದೇವೇಂದ್ರ

ಕಳೆದ ಬಾರಿ ಅಮೋಘ ಸಾಧನೆ ಮಾಡಿರುವ ಭಾರತದ ಕ್ರೀಡಾಪಟುಗಳು ಈ ಬಾರಿ ‘ಗರಿಷ್ಠ’ ಸಾಧನೆಯ ಕನಸು ಹೊತ್ತುಕೊಂಡು ಟೋಕಿಯೊಗೆ ತೆರಳಿದ್ದಾರೆ. ಕಳೆದ ಬಾರಿ ಚಿನ್ನದ ಪದಕ ಗೆದ್ದಿರುವ ಮಾರಿಯಪ್ಪನ್ ತಂಗವೇಲು ಮತ್ತು ದೇವೇಂದ್ರ ಜಜಾರಿಯ ಅವರ ಮೇಲೆ ಈ ಬಾರಿಯೂ ಭಾರತ ನಿರೀಕ್ಷೆ ಇರಿಸಿಕೊಂಡಿದೆ.

ಹೈಜಂಪ್‌ನಲ್ಲಿ 1.89 ಮೀಟರ್‌ಗಳ ಸಾಧನೆ ಮಾಡಿದ್ದ ಮಾರಿಯಪ್ಪನ್ ಭಾರತಕ್ಕೆ ಚಿನ್ನ ಗೆದ್ದು ಕೊಟ್ಟಿದ್ದರು. ಈ ಬಾರಿ ಇನ್ನಷ್ಟು ‘ಎತ್ತರಕ್ಕೇರುವ’ ಉತ್ಸಾಹದಲ್ಲಿದ್ದಾರೆ. ಅಥೆನ್ಸ್‌ನಲ್ಲಿ 62.15 ಮೀಟರ್ಸ್ ದೂರ ಜಾವೆಲಿನ್ ಎಸೆದು ಚಿನ್ನಕ್ಕೆ ಮುತ್ತಿಕ್ಕಿದ್ದ ರಾಜಸ್ಥಾನದ ದೇವೇಂದ್ರ ಜಜಾರಿಯ ಅವರು ರಿಯೊ ಒಲಿಂಪಿಕ್ಸ್‌ನಲ್ಲಿ 63.97 ಮೀಟರ್ಸ್ ದೂರದ ಸಾಧನೆ ಮಾಡಿ ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ಚಿನ್ನ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಈಗ ಹ್ಯಾಟ್ರಿಕ್ ಸಾಧನೆಯ ಕನಸಿನಲ್ಲಿದ್ದಾರೆ.

ಕನ್ನಡಿಗ, ಬೆಂಗಳೂರಿನ ನಿರಂಜನ್ ಮುಕುಂದನ್ ಪ್ಯಾರಾಲಿಂಪಿಕ್ಸ್‌ನಲ್ಲಿ ಮೊದಲ ಪದಕದ ನಿರೀಕ್ಷೆಯೊಂದಿಗೆ ಟೋಕಿಯೊದಲ್ಲಿ ಈಜು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರಿನಲ್ಲಿ ಅಭ್ಯಾಸ ಮಾಡಿರುವ ಪಶ್ಚಿಮ ಬಂಗಾಳದ ಪವರ್‌ ಲಿಫ್ಟರ್‌ ಸಕೀನಾ ಖಾತೂನ್ ಮೇಲೆಯೂ ನಿರೀಕ್ಷೆ ಇದೆ.

11 ಕ್ರೀಡಾಕೂಟಗಳಲ್ಲಿ 12 ಪದಕ: ಭಾರತ ಒಟ್ಟಾರೆ 11 ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗಿಯಾಗಿದೆ. ಒಟ್ಟು 12 ಪದಕಗಳನ್ನು ಗೆದ್ದುಕೊಂಡಿದೆ. ತಲಾ ನಾಲ್ಕು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳು ಭಾರತದ ಕ್ರೀಡಾಪಟುಗಳು ಕೊರಳನ್ನು ಅಲಂಕರಿಸಿವೆ. 1984ರ ನ್ಯೂಯಾರ್ಕ್ ಮತ್ತು ಕಳೆದ ಬಾರಿ ರಿಯೊ ಕೂಟಗಳಲ್ಲಿ ತಲಾ ನಾಲ್ಕು ಪದಕಗಳು ಭಾರತಕ್ಕೆ ಲಭಿಸಿವೆ. ಆದರೆ ರಿಯೊದಲ್ಲಿ ಎರಡು ಚಿನ್ನ ಮತ್ತು ತಲಾ ಒಂದು ಬೆಳ್ಳಿ, ಕಂಚು ಗಳಿಸಿರುವುದರಿಂದ ಅದೇ ಈ ವರೆಗಿನ ಗರಿಷ್ಠ ಸಾಧನೆ. ನ್ಯೂಯಾರ್ಕ್‌ನಲ್ಲಿ ಭಾರತ ಚಿನ್ನ ಗೆದ್ದಿರಲಿಲ್ಲ.

ದೇಶ ಪ್ಯಾರಾಲಿಂಪಿಕ್ಸ್‌ನಲ್ಲಿ ಮೊದಲು ಪಾಲ್ಗೊಂಡದ್ದು 1968ರಲ್ಲಿ. ಆಗ ಪದಕ ಒಲಿದಿರಲಿಲ್ಲ. 1972ರಲ್ಲಿ ಜರ್ಮನಿಯ ಹೈಡಲ್‌ಬರ್ಗ್‌ನಲ್ಲಿ ಪುರುಷರ 50 ಮೀ ಫ್ರೀಸ್ಟೈಲ್‌ ಈಜಿನಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದ ಮುರಳಿಕಾಂತ್ ಪೇಟ್ಕರ್ ಮೊದಲ ಪದಕ ಗಳಿಸಿಕೊಟ್ಟರು. ನಂತರದ ಎರಡು ಕೂಟಗಳಲ್ಲಿ ಭಾರತ ಪಾಲ್ಗೊಳ್ಳಲಿಲ್ಲ. 1984ರಲ್ಲಿ ಅಥ್ಲೆಟಿಕ್ಸ್‌ನಲ್ಲಿ ಜೋಗಿಂದರ್ ಸಿಂಗ್ ಬೇಡಿ ಮೂರು ವೈಯಕ್ತಿಕ ಪದಕಗಳನ್ನು ಗೆದ್ದು ಮಹತ್ವದ ಸಾಧನೆ ಮಾಡಿದರು.

2004ರ ಅಥೆನ್ಸ್ ಕೂಟದಲ್ಲಿ ರಾಜಿಂದರ್ ಸಿಂಗ್ ರಹೇಲು ಪವರ್‌ಲಿಫ್ಟಿಂಗ್‌ನಲ್ಲಿ (56 ಕೆಜಿ ವಿಭಾಗ)157.5 ಕೆಜಿ ಭಾರ ಎತ್ತಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. 2012ರಲ್ಲಿ ಲಂಡನ್‌ನಲ್ಲಿ ಕನ್ನಡಿಗ ಗಿರೀಶ್ಎನ್‌.ಗೌಡ ಹೈಜಂಪ್‌ನಲ್ಲಿ1.74 ಮೀಟರ್ಸ್ ಸಾಧನೆ ಮಾಡಿ ಬೆಳ್ಳಿ ಪದಕ ಗೆದ್ದುಕೊಂಡರು. ಈ ಮೂಲಕ ಪ್ಯಾರಾಲಿಂಪಿಕ್ಸ್‌ ಹೈಜಂಪ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನಿಸಿಕೊಂಡರು. ರಿಯೊದಲ್ಲಿ ದೀಪಾ ಮಲಿಕ್ ಬೆಳ್ಳಿ ಮತ್ತು ವರುಣ್ ಸಿಂಗ್ ಭಾಟಿ ಕಂಚು ಗೆದ್ದಿದ್ದರು.

ಒಂಬತ್ತು ಕ್ರೀಡೆ; 27ಕ್ಕೆ ‘ಆರಂಭ’

ಭಾರತ ಈ ಬಾರಿ ಆರ್ಚರಿ, ಅಥ್ಲೆಟಿಕ್ಸ್‌, ಬ್ಯಾಡ್ಮಿಂಟನ್, ಕೆನೋಯಿಂಗ್, ಶೂಟಿಂಗ್‌, ಈಜು, ಪವರ್‌ಲಿಫ್ಟಿಂಗ್, ಟೇಬಲ್ ಟೆನಿಸ್ ಮತ್ತು ಟೇಕ್ವಾಂಡೊದಲ್ಲಿ ಸ್ಪರ್ಧಿಸುತ್ತಿದೆ. ಭಾರತದ ಮೊದಲ ಸ್ಪರ್ಧೆ ಇರುವುದು 27ರಂದು. ಭಾರತೀಯ ಕಾಲಮಾನ ಮುಂಜಾನೆ 5.30ರಿಂದ ನಡೆಯಲಿರುವ ಆರ್ಚರಿ ಮೂಲಕ ದೇಶದ ಅಭಿಯಾನ ಆರಂಭವಾಗಲಿದೆ.ಅಂದಿನಿಂದ ಯೂರೊ ಸ್ಪೋರ್ಟ್ ಚಾನಲ್ ಭಾರತದ ಸ್ಪರ್ಧೆಗಳ ನೇರಪ್ರಸಾರ ಮಾಡಲಿದೆ.

ಪ್ಯಾರಾ ಅಥ್ಲೀಟ್ಸ್‌ ಹೀರೊಗಳು: ಸಚಿನ್

ಭಾರತದ ಕ್ರೀಡಾಪಟುಗಳನ್ನು ಕೊಂಡಾಡಿರುವ ದಿಗ್ಗಜ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ‘ಪ್ಯಾರಾಲಿಂಪಿಯನ್ನರು ನಿಜಜೀವನದ ಹೀರೊಗಳು. ಇಚ್ಛಾಶಕ್ತಿ ಮತ್ತು ಬದ್ಧತೆ ಇದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಪ್ಯಾರಾ ಅಥ್ಲೀಟ್‌ಗಳು ತೋರಿಸಿಕೊಟ್ಟಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಂದು ಅಥ್ಲೀಟ್‌; ಇಂದು ಆಡಳಿತದ ಮುಖ್ಯಸ್ಥೆ

ರಿಯೊ ಪ್ಯಾರಾಲಿಂಪಿಕ್ಸ್‌ನ ಮಹಿಳೆಯರ ಶಾಟ್‌ಪಟ್ ವಿಭಾಗದಲ್ಲಿ ಬೆಳ್ಳಿ ಬೆಳಕು ಮೂಡಿಸಿದ ಹರಿಯಾಣದ ದೀಪಾ ಮಲಿಕ್ ಈಗ ಭಾರತ ಪ್ಯಾರಾಲಿಂಪಿಕ್ ಸಮಿತಿಯ ಅಧ್ಯಕ್ಷೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆ ಇರುವ ಅವರು ಈ ಬಾರಿ ದೇಶದಿಂದ ಗರಿಷ್ಠ ಸಂಖ್ಯೆಯಲ್ಲಿ ಕ್ರೀಡಾಪಟುಗಳನ್ನು ಕಳುಹಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಟೋಕಿಯೊದಲ್ಲಿ 40 ಪುರುಷರು ಮತ್ತು 14 ಮಹಿಳೆಯರು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ 20 ಪುರುಷರು ಒಳಗೊಂಡಂತೆ ಗರಿಷ್ಠ 24 ಮಂದಿ ಸ್ಪರ್ಧಿಸಲಿದ್ದು ಶೂಟಿಂಗ್‌ನಲ್ಲಿ ಒಟ್ಟು 10 ಮತ್ತು ಬ್ಯಾಡ್ಮಿಂಟನ್‌ನಲ್ಲಿ ಏಳು ಮಂದಿ ಸ್ಪರ್ಧಿಸುವರು.

ವರದಿ: ಗಿರೀಶ ದೊಡ್ಡಮನಿ, ವಿಕ್ರಂ ಕಾಂತಿಕೆರೆ, ಬಸವರಾಜ ದಳವಾಯಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.