ADVERTISEMENT

ಉದ್ದೀಪನ ಮದ್ದು: ಕರಣ್‌ವೀರ್‌, ಕಿರ್ಪಾಲ್‌ಗೆ ನಾಲ್ಕು ವರ್ಷ ನಿಷೇಧ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 18:48 IST
Last Updated 9 ಫೆಬ್ರುವರಿ 2024, 18:48 IST
ಉದ್ದೀಪನ ಮದ್ದು ಪರೀಕ್ಷೆ
ಉದ್ದೀಪನ ಮದ್ದು ಪರೀಕ್ಷೆ   

ನವದೆಹಲಿ (ಪಿಟಿಐ): ಭಾರತದ ಅಗ್ರ ಶಾಟ್‌ಪಟ್ ಪಟು ಕರಣ್‌ವೀರ್ ಸಿಂಗ್ ಮತ್ತು ಡಿಸ್ಕಸ್ ಥ್ರೋಪಟು ಕಿರ್ಪಾಲ್ ಸಿಂಗ್ ಸೇರಿದಂತೆ ಹಲವು ಕ್ರೀಡಾಪಟುಗಳಿಗೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕದ (ನಾಡಾ) ಶಿಸ್ತು ಸಮಿತಿ ನಾಲ್ಕು ವರ್ಷಗಳ ಕಾಲ ನಿಷೇಧ ಹೇರದೆ.

ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಸಿಲುಕಿದ್ದ ಕರಣ್‌ವೀರ್‌ ಮತ್ತು ಕಿರ್ಪಾಲ್‌ ಅವರ ವಿರುದ್ಧ ನಿಷೇಧದ ಆದೇಶವನ್ನು 2023ರ ಡಿಸೆಂಬರ್‌ 29ರಂದು ಶಿಸ್ತು ಸಮಿತಿಯು ಹೊರಡಿಸಿತ್ತು. ಆದರೆ, ನಿಷೇಧಕ್ಕೆ ಒಳಗಾದ ಅಥ್ಲೀಟ್‌ಗಳ ಪಟ್ಟಿಯನ್ನು ಗುರುವಾರ ನಾಡಾ ಬಿಡುಗಡೆ ಮಾಡಿದೆ.

ಕಿರ್ಪಾಲ್‌ ಅವರ ನಿಷೇಧ ಅವಧಿ 2023ರ ಜುಲೈ 7ರಿಂದ ಮತ್ತು ಕರಣ್‌ವೀರ್‌ ಅವಧಿ 2023ರ ಜುಲೈ 26ರಿಂದ ಆರಂಭವಾಗಿದೆ. ಕಳೆದ ಜುಲೈನಲ್ಲಿ ನಾಡಾ ನಿಷೇಧ ಹೇರಿದ್ದ 20 ಕ್ರೀಡಾಪಟುಗಳ ಪಟ್ಟಿಯಲ್ಲಿ ಇವರಿಬ್ಬರೂ ಸೇರಿದ್ದಾರೆ.

ADVERTISEMENT

25 ವರ್ಷದ ಕರಣ್‌ವೀರ್‌ ಅವರು ಕಳೆದ ವರ್ಷದ ಫೆಡರೇಶನ್ ಕಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಆದರೆ, ಕಳೆದ ವರ್ಷ ಜುಲೈನಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಷ್‌ಗಾಗಿ ತೆರಳಿದ್ದ ಭಾರತ ತಂಡದಿಂದ ಹೊರಗುಳಿದಿದ್ದರು. ಕಿರ್ಪಾಲ್‌ ಅವರು ಕಳೆದ ವರ್ಷದ ರಾಷ್ಟ್ರೀಯ ಅಂತರ ರಾಜ್ಯ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು.

ನಿಷೇಧಕ್ಕೆ ಒಳಗಾದ ಇತರ ಕ್ರೀಡಾಪುಟಗಳು: ಮಲಾಕ್ ಸಿಂಗ್ (ರೋವರ್‌), ಅಕ್ಷಯ್‌, ಹರ್ದೀಪ್ ಸಿಂಗ್ ಬ್ರಾರ್, ಮೊಹ್ಸಿನ್ ಗುಲಾಬ್ ಅಲಿ, ರಾಹುಲ್ ಸೇವ್ತಾ (ಜುಡೋಕಾ), ರೋಹಿತ್ ಸಿಂಗ್ ತೋಮರ್, ದುರ್ಗೇಶ್‌ ಕುಮಾರ್‌ (ಕಬಡ್ಡಿ), ರಂಜೀತ್ ಭಾಟಿ (ಪ್ಯಾರಾ ಅಥ್ಲೆಟಿಕ್ಸ್‌).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.