ADVERTISEMENT

ರಾಷ್ಟ್ರೀಯ ಓಪನ್ ಸರ್ಫಿಂಗ್ | ಅಲೆಯಲ್ಲಿ ಕಸರತ್ತು; ‘ರ‍್ಯಾಂಕಿಂಗ್’ ಮೇಲೆ ಕಣ್ಣು

​ಪ್ರಜಾವಾಣಿ ವಾರ್ತೆ
Published 30 ಮೇ 2024, 16:12 IST
Last Updated 30 ಮೇ 2024, 16:12 IST
ಅಭ್ಯಾಸದ ವೇಳೆ ಅಲೆಗಳನ್ನು ಸೀಳಿ ಮುನ್ನುಗ್ಗಿದ ಶ್ರೀಕಾಂತ್‌
ಅಭ್ಯಾಸದ ವೇಳೆ ಅಲೆಗಳನ್ನು ಸೀಳಿ ಮುನ್ನುಗ್ಗಿದ ಶ್ರೀಕಾಂತ್‌   

ಮಂಗಳೂರು: ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಡಲತಡಿಯ ನಗರಿಯಲ್ಲಿ ವಾತಾವರಣ ಹಿತವಾಗಿದ್ದು ಮುಂಗಾರು ಮಳೆಯ ಸ್ವಾಗತಕ್ಕೆ ಹದಗೊಂಡಿದೆ. ಇಂಥ ಮೋಹಕ ಪರಿಸರದಲ್ಲಿ ರಾಷ್ಟ್ರೀಯ ಓಪನ್ ಸರ್ಫಿಂಗ್ ಚಾಂಪಿಯನ್‌ಷಿಪ್‌ ಶುಕ್ರವಾರ ಆರಂಭಗೊಳ್ಳಲಿದ್ದು ದೇಶದ ಪ್ರಮುಖ ಸರ್ಫರ್‌ಗಳು ರ‍್ಯಾಂಕಿಂಗ್‌ ಪಾಯಿಂಟ್‌ಗಳ ಮೇಲೆ ಕಣ್ಣಿಟ್ಟು ಕಡಲಿಗೆ ಇಳಿಯಲಿದ್ದಾರೆ.

ಭಾರತ ಸರ್ಫಿಂಗ್ ಫೆಡರೇಷನ್‌ (ಎಸ್‌ಎಫ್‌ಐ) ಇಲ್ಲಿನ ಸರ್ಫಿಂಗ್ ಸ್ವಾಮಿ ಫೌಂಡೇಷನ್ ಮತ್ತು ಮಂತ್ರ ಸರ್ಫ್ ಕ್ಲಬ್‌ ಸಹಯೋಗದಲ್ಲಿ ಆಯೋಜಿಸಿರುವ ಚಾಂಪಿಯನ್‌ಷಿಪ್‌ ಈ ಋತುವಿನ ಎರಡನೇ ಪ್ರಮುಖ ಸ್ಪರ್ಧೆಯಾಗಿದೆ. ಕೇರಳದ ವರ್ಕಲದಲ್ಲಿ ಮಾರ್ಚ್‌ ತಿಂಗಳಲ್ಲಿ ನಡೆದ ಮೊದಲ ಸ್ಪರ್ಧೆಯಲ್ಲಿ ಉತ್ತಮ ಸಾಮರ್ಥ್ಯ ತೋರಿದ ಸರ್ಫರ್‌ಗಳು ಇಲ್ಲಿಯೂ ಪದಕಗಳನ್ನು ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.

ಮೂರು ದಿನಗಳ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಹರೀಶ್ ಎಂ. ಶ್ರೀಕಾಂತ್ ಡಿ ಮತ್ತು ಶಿವರಾಜ್ ಬಾಬು ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಮೂವರು ವರ್ಕಲದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಕಮಲಿ ಮೂರ್ತಿ, ಸಂಧ್ಯಾ ಅರುಣ್, ಸೃಷ್ಟಿ ಸೆಲ್ವಂ ಮತ್ತು ಇಶಿತಾ ಮಾಳವಿಯ ಮಹಿಳೆಯರ ವಿಭಾಗದಲ್ಲಿ ಮಿಂಚಿದ್ದು ಸಸಿಹಿತ್ಲು ಕಡಲಿನಲ್ಲಿ ಅಲೆಗಳ ಸವಾಲು ಮೀರಲು ಸಜ್ಜಾಗಿದ್ದಾರೆ. 16 ವರ್ಷದೊಳಗಿನ ಬಾಲಕರು ಮತ್ತು ಬಾಲಕಿಯರ ವಿಭಾಗದಲ್ಲೂ ಭಾರಿ ಪೈಪೋಟಿಯ ನಿರೀಕ್ಷೆ ಇದೆ. ತಯಿನ್ ಅರುಣ್‌, ಪ್ರಹ್ಲಾದ್ ಶ್ರೀರಾಮ್‌ ಮತ್ತು ಸೋಮ್ ಸೇಥಿ ಬಾಲಕರ ವಿಭಾಗದಲ್ಲಿ ಗಮನ ಸೆಳೆಯಲು ಸಜ್ಜಾಗಿದ್ದು ಬಾಲಕಿಯರ ವಿಭಾಗದಲ್ಲಿ ಸ್ಥಳೀಯ ಪ್ರತಿಭೆಗಳಾದ ತನಿಷ್ಕಾ ಮೆಂಡನ್‌ ಮತ್ತು ಸಾನ್ವಿ ಹೆಗಡೆ ಭರವಸೆ ಮೂಡಿಸಿದ್ದಾರೆ.

ADVERTISEMENT

ಕಳೆದ ವರ್ಷ ಎಲ್‌ ಸಲ್ವಡೋರ್‌ನಲ್ಲಿ ನಡೆದ ವಿಶ್ವ ಸರ್ಫಿಂಗ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅಜೀಶ್ ಅಲಿ, ಪುರುಷರ ಮುಕ್ತ ವಿಭಾಗದಲ್ಲಿ ಪ್ರತಿಸ್ಪರ್ಧಿಗಳಿಗೆ ಭಾರಿ ಸವಾಲಾಗುವ ಸಾಧ್ಯತೆ ಇದೆ. 

‘ಕೆಲವು ದಿನಗಳಿಂದ ನಗರದ ಹವಾಮಾನದಲ್ಲಿ ವ್ಯತ್ಯಾಸ ಆಗಿದೆ. ಸಮುದ್ರದ ಅಲೆಗಳು ಸವಾಲೊಡ್ಡುವ ರೀತಿಯಲ್ಲಿವೆ. ಆದರೆ ಉತ್ಸಾಹಿ ಸರ್ಫರ್‌ಗಳಿಗೆ ಇದು ಹುರುಪು ತುಂಬಿರುವ ಸಾಧ್ಯತೆ ಇದೆ. ಹೀಗಾಗಿ ಸಸಿಹಿತ್ಲು ಬೀಚ್‌ನಲ್ಲಿ ಪ್ರೇಕ್ಷಕರಿಗೆ ಮೂರು ದಿನ ಜಲಕ್ರೀಡೆಯ ರೋಮಾಂಚನ ಅನುಭವಕ್ಕೆ ಬರಲಿದೆ’ ಎಂದು ಭಾರತ ಸರ್ಫಿಂಗ್ ಫೆಡರೇಷನ್‌ನ ಉಪಾಧ್ಯಕ್ಷ ಮತ್ತು ಮಂತ್ರ ಸರ್ಫ್‌ ಕ್ಲಬ್‌ನ ಪಾಲುದಾರ ರಾಮಮೋಹನ್ ಪರಾಂಜಪೆ ಹೇಳಿದರು.

ಬೆಳಿಗ್ಗೆ 6.30ಕ್ಕೆ ಸ್ಪರ್ಧೆಗಳು ಆರಂಭವಾಗಲಿವೆ. ಹವಾಮಾನ ವೈಪರೀತ್ಯ ಕಾಡುವ ಸಾಧ್ಯತೆ ಇರುವುದರಿಂದ ಯಾವ ಸ್ಪರ್ಧೆಯನ್ನು ಯಾವ ಸಂದರ್ಭದಲ್ಲಿ ನಡೆಸಬೇಕು ಎಂಬುದನ್ನು ನಿರ್ಣಾಯಕರು ಬೆಳಿಗ್ಗೆ ನಿರ್ಧರಿಸಲಿದ್ದಾರೆ ಎಂದು ಸಂಘಟಕರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.