ADVERTISEMENT

ಕಿರಿಯ ಅಥ್ಲೀಟ್‌ಗಳಿಗೂ ‘ಟಾಪ್ಸ್‌’‌ ವಿಸ್ತರಣೆ: ಕೇಂದ್ರ ಸಚಿವ ರಿಜಿಜು

ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಹೇಳಿಕೆ

ಪಿಟಿಐ
Published 4 ಜುಲೈ 2020, 7:27 IST
Last Updated 4 ಜುಲೈ 2020, 7:27 IST
ಕಿರಣ್‌ ರಿಜಿಜು–ಪಿಟಿಐ ಚಿತ್ರ
ಕಿರಣ್‌ ರಿಜಿಜು–ಪಿಟಿಐ ಚಿತ್ರ   

ನವದೆಹಲಿ: 2028ರ ಒಲಿಂಪಿಕ್ಸ್‌ಗೆಚಾಂಪಿಯನ್‌ ಕ್ರೀಡಾಪಟುಗಳನ್ನು ರೂಪಿಸುವ ಉದ್ದೇಶದೊಂದಿಗೆ ಜೂನಿಯರ್‌ ಅಥ್ಲೀಟ್‌ಗಳಿಗೂ ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಯೋಜನೆಯನ್ನು (ಟಾಪ್ಸ್‌)ಶೀಘ್ರ ಆರಂಭಿಸುವುದಾಗಿ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

ಶುಕ್ರವಾರ ನಡೆದ ‘ಫಿಟ್‌ ಹೈ ತೋ ಹಿಟ್‌ ಹೈ ಫಿಟ್‌ ಇಂಡಿಯಾ’ ಎಂಬ ವೆಬಿನಾರ್‌ನಲ್ಲಿ ರಿಜಿಜು ಈ ವಿಷಯ ಪ್ರಕಟಿಸಿದರು. ರಿಜಿಜು ಜೊತೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಡಾ. ರಮೇಶ್‌ ಪೋಖ್ರಿಯಾಲ್‌, ಒಲಿಂಪಿಕ್‌ ಪದಕ ವಿಜೇತ ಬ್ಯಾಡ್ಮಿಂಟನ್‌ ಪಟು ಪಿ.ವಿ.ಸಿಂಧು ಹಾಗೂ ಭಾರತ ಫುಟ್‌ಬಾಲ್‌ ತಂಡದ ನಾಯಕ ಸುನಿಲ್‌ ಚೆಟ್ರಿ ಅವರೂ ವೆಬಿನಾರ್‌ನಲ್ಲಿ ಭಾಗವಹಿಸಿದ್ದರು.

‘ಇದು ಪ್ರತಿಯೊಬ್ಬ ಭಾರತೀಯನ ಕನಸು. ಇದನ್ನು ಒಂದು ಸಾಧನೆಯ ಗುರಿಯಾಗಿ ಹಂಚಿಕೊಳ್ಳಲು ಬಯಸುತ್ತೇನೆ. ಒಲಿಂಪಿಕ್ಸ್‌ ವಿಶ್ವದೊಡ್ಡ ಬಹುದೊಡ್ಡ ಕೂಟ. ಭಾರತ ಪದಕಪಟ್ಟಿಯಲ್ಲಿ ಎಲ್ಲೂ ಕಾಣಿಸಿಕೊಳ್ಳದಿದ್ದಾಗ ನಿಜವಾಗಲೂ ಮನಸ್ಸಿಗೆ ವೇದನೆಯಾಗುತ್ತದೆ. ನಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ. ನಮಗೆ ದೊಡ್ಡ ನೆಲೆಯಿದೆ. ಟಾಪ್‌ ಯೋಜನೆ ಪ್ರಸ್ತುತ ಹಿರಿಯ ಅಥ್ಲೀಟ್‌ಗಳಿಗೆ ಮಾತ್ರ ಸೀಮಿತವಾಗಿದ್ದು, ಕಿರಿಯರಿಗೂ ಇದನ್ನು ಶೀಘ್ರ ವಿಸ್ತರಿಸುತ್ತೇವೆ’ ಎಂದು ರಿಜಿಜು ಹೇಳಿದರು.

ADVERTISEMENT

‘10–12 ವರ್ಷದ ಪ್ರತಿಭೆಗಳನ್ನು ಗುರುತಿಸಿ, ಅವರ ತರಬೇತಿ, ಕ್ರೀಡಾ ಅಗತ್ಯಗಳ ಖರ್ಚುವೆಚ್ಚವನ್ನು ಸರ್ಕಾರವೇ ವಹಿಸಿಕೊಳ್ಳಲಿದೆ. 2024ರ ಪ್ಯಾರಿಸ್‌ ಹಾಗೂ 2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್‌ ಕೂಟಗಳಲ್ಲಿ ಸ್ಪರ್ಧಿಸುವಂತೆ ಅವರನ್ನು ಸಜ್ಜುಗೊಳಿಸಲಾಗುತ್ತದೆ‌’ ಎಂದು ಅವರು ವಿವರಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ರಚಿಸಿದ ಒಲಿಂಪಿಕ್ ಟಾಸ್ಕ್‌ ಫೋರ್ಸ್‌ನ ಶಿಫಾರಸುಗಳು ಬಂದಿವೆ. ಸರ್ಕಾರ ಅವುಗಳನ್ನು ಅನುಷ್ಠಾನಗೊಳಿಸುವ ಹಂತದಲ್ಲಿದೆ. 2028ರ ಒಲಿಂಪಿಕ್‌ ಕೂಟದಲ್ಲಿ ಭಾರತ ಪದಕ ಪಟ್ಟಿಯಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆಯುವ ವಿಶ್ವಾಸವಿದೆ’ ಎಂದು ರಿಜಿಜು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.