ಪ್ಯಾರಿಸ್: ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಗುರುವಾರ ಮತ್ತೊಂದು ಚಾರಿತ್ರಿಕ ದಾಖಲೆ ನಿರ್ಮಿಸುವ ತವಕದಲ್ಲಿದ್ದಾರೆ. ಅರ್ಹತಾ ಸುತ್ತಿನ ಮೊದಲ ಎಸೆತದಲ್ಲೇ ಫೈನಲ್‌ಗೆ ಲಗ್ಗೆ ಹಾಕಿರುವ ಭಾರತದ ‘ಚಿನ್ನದ ಹುಡುಗ’ನ ಮೇಲೆ ಕೋಟ್ಯಂತರ ಕಣ್ಣುಗಳು ನೆಟ್ಟಿವೆ.
ಹಾಲಿ ಚಾಂಪಿಯನ್, 26 ವರ್ಷದ ನೀರಜ್ ಮಂಗಳವಾರ ನಡೆದ ಅರ್ಹತಾ ಸುತ್ತಿನಲ್ಲಿ 89.34 ಮೀಟರ್ ಜಾವೆಲಿನ್ ಎಸೆದು ಅಗ್ರಸ್ಥಾನದೊಂದಿಗೆ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಆದರೆ ಫೈನಲ್‌ನಲ್ಲಿ ಚಾಂಪಿಯನ್ ‘ಪಟ್ಟ’ವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರಿಗೆ ಕಠಿಣ ಸವಾಲು ಎದುರಾಗುವ ನಿರೀಕ್ಷೆಯಿದೆ.
ಪ್ಯಾರಿಸ್‌ನ ಸ್ಟೇಡ್ ಡಿ ಫ್ರಾನ್ಸ್ ಕ್ರೀಡಾಂಗಣದ ಗುಣಮಟ್ಟವು ಟೋಕಿಯೊಕ್ಕಿಂತ ಉತ್ತಮವಾಗಿದೆ. ಹೀಗಾಗಿ, ಅರ್ಹತಾ ಸುತ್ತಿನಲ್ಲಿ ಒಂಬತ್ತು ಜಾವೆಲಿನ್‌ಪಟುಗಳು 84 ಮೀಟರ್‌ಗಳ ಅರ್ಹತಾ ಮಟ್ಟ ದಾಟಿ ಫೈನಲ್ ಪ್ರವೇಶಿಸಿದ್ದಾರೆ. ಅಂತಿಮ ಸುತ್ತಿಗೆ ಮುನ್ನಡೆದ 12 ಮಂದಿಯಲ್ಲಿ, ಹಿಂದಿನ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಆರು ಮಂದಿ ಇದ್ದಾರೆ. ಇವರಲ್ಲಿ ಐವರು ಮೊದಲ ಎಸೆತದಲ್ಲೇ ಫೈನಲ್‌ಗೆ ಅರ್ಹತೆ ಸಂಪಾದಿಸಿದ್ದರಿಂದ ಪದಕದ ಸುತ್ತಿನಲ್ಲಿ ಚೋಪ್ರಾಗೆ ನಿಕಟ ಪೈಪೋಟಿ ಎದುರಾಗುವ ಸಾಧ್ಯತೆ ಹೆಚ್ಚಿದೆ.
ಅರ್ಹತಾ ಸುತ್ತಿನಲ್ಲಿ ಚೋಪ್ರಾ ನಂತರದ ಸ್ಥಾನ ಪಡೆದಿರುವ ಎರಡು ಬಾರಿಯ ವಿಶ್ವ ಚಾಂಪಿಯನ್, ಗ್ರೆನೆಡಾದ ಆ್ಯಂಡರ್ಸನ್ ಪೀಟರ್ಸ್ (88.63 ಮೀ), ಜರ್ಮನಿಯ ಜೂಲಿಯನ್ ವೆಬರ್ (87.76 ಮೀ) ಮತ್ತು ಪಾಕಿಸ್ತಾನದ ಅರ್ಷದ್ ನದೀಮ್ (86.59 ಮೀ) ಅವರೂ ಚಿನ್ನದ ಪದಕಕ್ಕೆ ದಾವೇದಾರರಾಗಿದ್ದಾರೆ.
‘ಫೈನಲ್‌ನಲ್ಲಿ ಪ್ರತಿಯೊಬ್ಬ ಸ್ಪರ್ಧಿಗಳ ಮನಃಸ್ಥಿತಿ ಮತ್ತು ಸಾಮರ್ಥ್ಯ ಭಿನ್ನವಾಗಿರುತ್ತದೆ. ಅಲ್ಲಿ ಉತ್ತಮ ಸ್ಪರ್ಧೆಯನ್ನು ಎದುರು ನೋಡುತ್ತಿದ್ದೇನೆ. ನಿಗದಿಪಡಿಸಿದ ಅರ್ಹತಾಮಟ್ಟ ದಾಟಿ ಫೈನಲ್‌ನಲ್ಲಿ ಅವಕಾಶ ಪಡೆದಿರುವ ಎಲ್ಲರೂ ಉತ್ತಮ ತಯಾರಿ ನಡೆಸಿದ್ದಾರೆ’ ಎಂದು ಬುಧವಾರ ಮೈದಾನದಲ್ಲಿ ಕಾಣಿಸಿಕೊಂಡ ಚೋಪ್ರಾ ಹೇಳಿದರು.
ಪ್ಯಾರಿಸ್‌ನಲ್ಲಿ ಚೋಪ್ರಾ ಚಿನ್ನ ಗೆದ್ದರೆ ಒಲಿಂಪಿಕ್ ಜಾವೆಲಿನ್ ಥ್ರೋ ಇತಿಹಾಸದಲ್ಲಿ ಪ್ರಶಸ್ತಿಯನ್ನು ಉಳಿಸಿಕೊಂಡ ಐದನೇ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗುವರು. ಅಲ್ಲದೆ, ವೈಯಕ್ತಿಕ ವಿಭಾಗದಲ್ಲಿ ಎರಡು ಚಿನ್ನ ಗೆದ್ದ ಏಕೈಕ ಭಾರತೀಯ ಎಂಬ ಖ್ಯಾತಿಯೂ ಅವರದ್ದಾಗಲಿದೆ.
ಎರಿಕ್ ಲೆಮ್ಮಿಂಗ್ (ಸ್ವೀಡನ್; 1908 ಮತ್ತು 1912), ಜಾನಿ ಮೈರಾ (ಫಿನ್ಲೆಂಡ್; 1920 ಮತ್ತು 1924), ಯಾನ್ ಜೆಲೆಯ್ನಿ (ಝೆಕ್ ರಿಪಬ್ಲಿಕ್; 1992, 1996 ಮತ್ತು 2000) ಮತ್ತು ಆಂಡ್ರಿಯಾಸ್ ಥೋರ್ಕಿಲ್‌ಡ್ಸೆನ್ (ನಾರ್ವೆ; 2004 ಮತ್ತು 2008) ಅವರು ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್‌ನಲ್ಲಿ ಎರಡು ಚಿನ್ನ ಗೆದ್ದ ದಾಖಲೆ ಹೊಂದಿದ್ದಾರೆ.
ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು (ಒಂದು ಬೆಳ್ಳಿ, ಒಂದು ಕಂಚು), ಕುಸ್ತಿಪಟು ಸುಶೀಲ್ ಕುಮಾರ್ (ಒಂದು ಬೆಳ್ಳಿ, ಒಂದು ಕಂಚು) ಮತ್ತು ಶೂಟರ್ ಮನು ಭಾಕರ್ (ಎರಡು ಕಂಚು) ಅವರು ಸ್ವಾತಂತ್ರ್ಯದ ನಂತರ ಎರಡು ಒಲಿಂಪಿಕ್ ಪದಕ ಗೆದ್ದ ಭಾರತದ ಕ್ರೀಡಾಪಟುಗಳಾಗಿದ್ದಾರೆ.
ಚೋಪ್ರಾ ಮಂಗಳವಾರ ತಮ್ಮ ಕ್ರೀಡಾಜೀವನದ ವೈಯಕ್ತಿಕ ಎರಡನೇ ಶ್ರೇಷ್ಠ ಥ್ರೋ ಎಸೆಯುವ ಮೂಲಕ ತಮ್ಮ ಫಿಟ್ನೆಸ್ ಮತ್ತು ಫಾರ್ಮ್ ಬಗ್ಗೆ ಇದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಒಲಿಂಪಿಕ್ಸ್‌ನ ಅರ್ಹತಾ ಸುತ್ತಿನಲ್ಲಿ 2000ರ ಸಿಡ್ನಿ ಕ್ರೀಡೆಗಳಲ್ಲಿ ಜಾವೆಲಿನ್ ಥ್ರೋ ದಂತಕಥೆ ಯಾನ್ ಜೆಲೆಯ್ನಿ (89.39 ಮೀ) ನಂತರ ದಾಖಲಾದ ಎರಡನೇ ಶ್ರೇಷ್ಠ ಪ್ರಯತ್ನ ಇದಾಗಿದೆ.
2022ರ ಜೂನ್‌ನಲ್ಲಿ ಚೋಪ್ರಾ ಅವರು 89.94 ಮೀ ದೂರ ಥ್ರೋ ಮಾಡಿದ್ದು, ವೈಯಕ್ತಿಕ ಶ್ರೇಷ್ಠ ದಾಖಲೆಯಾಗಿದೆ. 90 ಮೀಟರ್ ಮೈಲಿಗಲ್ಲಿನ ಅವರ ಕನಸು ಇನ್ನೂ ನನಸಾಗಿಲ್ಲ. ಫೈನಲ್‌ನಲ್ಲಿ ಆ ಮೈಲಿಗಲ್ಲು ದಾಟುವ ಭರವಸೆಯನ್ನು ಮೂಡಿಸಿದ್ದು, ಕೋಟ್ಯಂತರ ಅಭಿಮಾನಿಗಳು ಕಾತರರಾಗಿದ್ದಾರೆ.
ಫೈನಲ್ ಪ್ರವೇಶಿಸಿರುವ ಉಳಿದ ಸ್ಪರ್ಧಿಗಳನ್ನೂ ಕಡೆಗಣಿಸುವಂತಿಲ್ಲ. ಮೂರು ಮಂದಿ 90 ಮೀಟರ್ ಗಡಿಯನ್ನು ದಾಟಿದ ದಾಖಲೆ ಹೊಂದಿದ್ದಾರೆ. ಇವರಲ್ಲಿ ಆ್ಯಂಡರ್ಸನ್ ಪೀಟರ್ಸ್ 93.07 ಮೀ ವೈಯಕ್ತಿಕ ಅತ್ಯುತ್ತಮ ಸಾಧನೆ ದಾಖಲಿಸಿದ್ದಾರೆ.
89.94 ಮೀ
ಭಾರತದ ನೀರಜ್ ಚೋಪ್ರಾ (2022)
93.07 ಮೀ
ಗ್ರೆನೆಡಾದ ಆ್ಯಂಡರ್ಸನ್ ಪೀಟರ್ಸ್ (2022)
90.88 ಮೀಟರ್
ಝೆಕ್ ರಿಪಬ್ಲಿಕ್‌ನ ಜೇಕಬ್ ವಾಡ್ಲೆಚ್ (2022)
90.18 ಮೀ
ಪಾಕಿಸ್ತಾನದ ಅರ್ಷದ್ ನದೀಮ್ (2022)
89.54 ಮೀ
ಜರ್ಮನಿಯ ಜೂಲಿಯನ್ ವೆಬರ್ (2020)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.