ನವದೆಹಲಿ: ‘ಮಹಿಳೆಯರು ಯಾಕೆ ಬಾಕ್ಸಿಂಗ್‌ನಲ್ಲಿ ತೊಡಗಿಸಿಕೊಳ್ಳುವುದಿಲ್ಲ? ಅದೇನು ಪುರುಷರಿಗೆ ಮಾತ್ರ ಸೀಮಿತವಾಗಿರುವ ಕ್ರೀಡೆಯೇ...?’
ಅಥ್ಲೆಟಿಕ್ಸ್‌ನಲ್ಲಿ ತರಬೇತಿ ಪಡೆಯುತ್ತಿದ್ದ ಯುವ ಕ್ರೀಡಾಪಟು ವರ್ಷಗಳ ಹಿಂದೆ ತಂದೆಯನ್ನು ಕೇಳಿದ ಪ್ರಶ್ನೆ ಇದು. ಆ ಬಾಲಕಿ ಈಗ ಬಾಕ್ಸಿಂಗ್‌ನಲ್ಲಿ ವಿಶ್ವ ಚಾಂಪಿಯನ್. ಅವರು ನಿಖತ್ ಜರೀನ್. ಇಸ್ತಾಂಬುಲ್‌ನಲ್ಲಿ ನಡೆದ ಮಹಿಳೆಯರ ವಿಶ್ವ ಚಾಂಪಿಯನ್‌ಷಿಪ್‌ನ 52 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದವರು.
ಅಂದು ಮೂಡಿದ ಆ ಪ್ರಶ್ನೆಯು ನಿಖತ್ ಜರೀನ್ ಅವರ ಹಾದಿಯನ್ನು ಬದಲಿಸಿತು. ಟ್ರ್ಯಾಕ್ ಬಿಟ್ಟು ಬಾಕ್ಸಿಂಗ್ ರಿಂಗ್‌ಗೆ ಇಳಿದ ಅವರು ಸಾಧನೆಯ ಹಾದಿಯಲ್ಲಿ ಮುನ್ನಡೆದರು. ಈ ಸಾಧನೆಯ ಹಿಂದೆ ಅವರ ತಂದೆ, ಮಾಜಿ ಫುಟ್‌ಬಾಲ್ ಆಟಗಾರ ಮೊಹಮ್ಮದ್ ಜಮೀಲ್ ಅವರ ಕಾಣಿಕೆಯೂ ಇದೆ.
‘ಒಮ್ಮೆ ಮಗಳನ್ನು ಕರೆದುಕೊಂಡು ಮೈದಾನಕ್ಕೆ ತೆರಳುವ ಅಭ್ಯಾಸ ಮೂಡಿಸಿಕೊಂಡಿದ್ದೆ. ಯಾವುದಾದರೊಂದು ಕ್ರೀಡೆಯಲ್ಲಿ ಆಕೆಯನ್ನು ತೊಡಗಿಸಿಕೊಳ್ಳಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಕೆಲವು ದಿನಗಳ ನಂತರ ಆಕೆಯ ಹಾವ ಭಾವ ಗಮನಿಸಿದಾಗ ಕ್ರೀಡಾಪಟು ಆಗುತ್ತಾಳೆ ಎಂದು ತಿಳಿಯಿತು. ಆ ನಂತರ ನಡೆದುದೆಲ್ಲವೂ ಸ್ಮರಣೀಯ’ ಎಂದು ಜಮೀಲ್ ಹೇಳಿದರು.
ಆರಂಭದಲ್ಲಿ 100 ಮತ್ತು 200 ಮೀಟರ್ಸ್ ಓಟದಲ್ಲಿ ತೊಡಗಿಸಿಕೊಂಡಿದ್ದ ನಿಖತ್ ನಂತರ ಬಾಕ್ಸಿಂಗ್ ಕಡೆಗೆ ವಾಲಿದರು. ಮುಸ್ಲಿಂ ಕುಟುಂಬದಿಂದ ಬಂದಿರುವುದು, ಬಾಕ್ಸಿಂಗ್‌ನಲ್ಲಿ ಹೆಣ್ಣುಮಕ್ಕಳು ಹೆಚ್ಚಾಗಿ ತೊಡಗಿಸಿಕೊಳ್ಳದೇ ಇದ್ದುದು ಮತ್ತು ತರಬೇತಿಗೆ ಸೂಕ್ತ ಅನುಕೂಲ ಇಲ್ಲದೇ ಇದ್ದುದರಿಂದ ನಿಖತ್ ಮತ್ತು ಜಮೀಲ್ ಅನೇಕ ಸವಾಲುಗಳನ್ನು ಎದುರಿಸಬೇಕಾಗಿ ಬಂದಿತ್ತು. ಎಲ್ಲವನ್ನು ಮೆಟ್ಟಿನಿಂತು ಸಾಧನೆಯ ಶಿಖರವೇರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.