ಸಿಂಗಪುರ: ಮಾಜಿ ಚಾಂಪಿಯನ್ ಭಾರತದ ಪಿ.ವಿ. ಸಿಂಧು ಅವರು ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್‌ನ ಎರಡನೇ ಸುತ್ತಿನಲ್ಲಿ ವಿಶ್ವದ ಮೂರನೇ ಕ್ರಮಾಂಕದ ಆಟಗಾರ್ತಿ ಕರೊಲಿನಾ ಮರಿನ್ ವಿರುದ್ಧ ಸೋತರು.
ಮಹಿಳಾ ಡಬಲ್ಸ್ ಜೋಡಿ ಟ್ರಿಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ವಿಶ್ವದ ಎರಡನೇ ಸ್ಥಾನದ ಬೇಕ್ ಹಾ ನಾ ಮತ್ತು ದಕ್ಷಿಣ ಕೊರಿಯಾದ ಲೀ ಸೋ ಹೀ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಡಬಲ್ ಒಲಿಂಪಿಕ್ ಪದಕ ವಿಜೇತೆ ಸಿಂಧು ಅವರು 21-13, 11-21, 20-22 ರಲ್ಲಿ ಮರಿನ್ ವಿರುದ್ಧ ಸೋಲು ಅನುಭವಿಸಿದರು. 2018 ರಿಂದೀಚೆಗೆ ಸಿಂಧು ತಮ್ಮ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಅನುಭವಿಸಿದ ಆರನೇ ಸೋಲು ಇದಾಗಿದೆ.
ಕಳೆದ ವಾರ ಮಲೇಷ್ಯಾ ಮಾಸ್ಟರ್ಸ್‌ನಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದ ಸಿಂಧು, ರಿಯೊ ಒಲಿಂಪಿಕ್ ಚಾಂಪಿಯನ್ ವಿರುದ್ಧ ಮೊದಲ ಗೇಮ್ ಗೆದ್ದರು. ನಂತರ ಪುಟಿದೆದ್ದ ಮರಿನ್, ಎರಡು ಮತ್ತು ಮೂರನೇ ಗೇಮ್ ಗೆದ್ದರು. ಈ ಮೂಲಕ ಮರಿನ್, ಸಿಂಧು ವಿರುದ್ಧದ ಗೆಲುವಿನ ದಾಖಲೆಯನ್ನು 12–5ಕ್ಕೆ ಹೆಚ್ಚಿಸಿಕೊಂಡರು.
ಸಿಂಧು ಕೊನೆಯ ಬಾರಿಗೆ 2018ರ ಜೂನ್ 29ರಂದು ಮಲೇಷಿಯಾ ಓಪನ್ ಕ್ವಾಟರ್ ಫೈನಲ್‌ನಲ್ಲಿ ಮರಿನ್ ಅವರನ್ನು ಸೋಲಿಸಿದ್ದರು. ಡೆನ್ಮಾರ್ಕ್ ಓಪನ್ ಸೆಮಿಫೈನಲ್ ಪಂದ್ಯದ ಏಳು ತಿಂಗಳ ನಂತರ ಮೊದಲ ಬಾರಿಗೆ ಇಬ್ಬರು ಮುಖಾಮುಖಿಯಾದರು.
ಕಾಮನ್‌ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತ ಜೋಡಿ ಟ್ರಿಸಾ ಮತ್ತು ಗಾಯತ್ರಿ ಸುಮಾರು ಒಂದು ಗಂಟೆ ಸೆಣಸಾಟದಲ್ಲಿ ಬೇಕ್ ಮತ್ತು ಲೀ ಅವರನ್ನು 21-9, 14-21, 21-15 ಅಂತರದಿಂದ ಸೋಲಿಸಿದರು.
ವಿಶ್ವದ 30ನೇ ರ್‍ಯಾಂಕ್‌ನ ಭಾರತದ ಜೋಡಿ, ವಿಶ್ವದ ಎರಡನೇ ರ್‍ಯಾಂಕ್‌ನ ಕೊರಿಯಾದ ಜೋಡಿ ವಿರುದ್ಧ ಮೂರು ಪಂದ್ಯಗಳಿಂದ ಮೊದಲ ಗೆಲುವು ದಾಖಲಿಸಿದೆ.
ಟ್ರಿಸಾ ಮತ್ತು ಗಾಯತ್ರಿ ಜೋಡಿ ಮೊದಲ ಗೇಮ್ ಅನ್ನು ನಿರಾಯಾಸವಾಗಿ ಗೆದ್ದುಕೊಂಡರು. ಎರಡನೇ ಗೇಮ್‌ನಲ್ಲಿ ಅನಗತ್ಯ ತಪ್ಪುಗಳನ್ನು ಮಾಡುವ ಮೂಲಕ ದಕ್ಷಿಣ ಕೊರಿಯಾ ಜೋಡಿ ಪುಟಿದೇಳಲು ಅವಕಾಶ ಮಾಡಿಕೊಟ್ಟರು. ಪಂದ್ಯವು ನಿರ್ಣಾಯಕ ಮೂರನೇ ಗೇಮ್‌ಗೆ ಹೋಯಿತು. ಅಂತಿಮ ಗೇಮ್‌ನಲ್ಲಿ ಭಾರತದ ಜೋಡಿ ಮುನ್ನಡೆ ಸಾಧಿಸುವ ಮೂಲಕ ಮೇಲುಗೈ ಸಾಧಿಸಿತು.
ಪುರುಷರ ಸಿಂಗಲ್ಸ್‌ನಲ್ಲಿ 45 ನಿಮಿಷಗಳ ಹೋರಾಟದಲ್ಲಿ ಎಚ್.ಎಸ್.ಪ್ರಣಯ್ 13-21, 21-14, 15-21 ಅಂತರದಲ್ಲಿ ಜಪಾನ್‌ನ ಕೆಂಟಾ ನಿಶಿಮೊಟೊ ವಿರುದ್ಧ ಸೋತರು. ಕೆಂಟಾ ವಿರುದ್ಧ ಪ್ರಣಯ್‌ಗೆ ಆರು ಪಂದ್ಯಗಳಲ್ಲಿ ನಾಲ್ಕನೇ ಸೋಲು ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.