ಸೇಂಟ್ ಡೆನಿಸ್, ಫ್ರಾನ್ಸ್: ಕೆರೀಬಿಯನ್ ದೇಶ ಡಾಮಿನಿಕಾದ ಥಿಯಾ ಲೆಫಾಂಡ್ ಒಲಿಂಪಿಕ್ಸ್‌ನಲ್ಲಿ ತಮ್ಮ ದೇಶಕ್ಕೆ ಮೊದಲ ಚಿನ್ನದ ಪದಕ ಕಾಣಿಕೆ ನೀಡಿದರು.
ಶನಿವಾರ ತಡರಾತ್ರಿ ನಡೆದ ಮಹಿಳೆಯರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಅವರು ಮೊದಲ ಸ್ಥಾನ ಗಳಿಸಿ ಚಿನ್ನ ಜಯಿಸಿದರು.
ಥಿಯಾ ಅವರು 15.02 ಮೀಟರ್ಸ್ ದೂರ ಜಿಗಿದು ಚಿನ್ನದ ಪದಕ ಗೆದ್ದರು. ಜಮೈಕಾದ ಶಾನಿಕಾ ರಿಕೆಟ್ಸ್ (14.87 ಮೀ) ಹಾಗೂ ಅಮೆರಿಕದ ಜಾಸ್ಮಿನ್ ಮೂರ್ (14.67 ಮೀ) ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.
ಥಿಯಾ ಅವರು ಈ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಡಾಮಿನಿಕಾ ದೇಶದಿಂದ ಸ್ಪರ್ಧಿಸಿರುವ ಏಕೈಕ ಮಹಿಳಾ ಸ್ಪರ್ಧಿಯಾಗಿದ್ದಾರೆ. ಹೋದ ಮಾರ್ಚ್‌ನಲ್ಲಿ ಅವರು ವಿಶ್ವ ಒಳಾಂಗಣ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದಾಗಲೂ ತಮ್ಮ ದೇಶದ ಏಕೈಕ ಪ್ರತಿನಿಧಿಯಾಗಿದ್ದರು.
ಡಾಮಿನಿಕಾ ದ್ವೀಪದಲ್ಲಿ ಅಥ್ಲೆಟಿಕ್ಸ್ ತರಬೇತಿಗೆ ಬೇಕಾದ ಮೂಲಸೌಲಭ್ಯಗಳು ಇಲ್ಲ.
‘ಟ್ರ್ಯಾಕ್ ನಿರ್ಮಾಣಕ್ಕೆ ಭೂಮಿ ಸಿಗುವುದು ಕಷ್ಟ. ಪದಕ ಜಯಿಸಿರುವುದರಿಂದ ದೇಶದ ಆಡಳಿತಾಧಿಕಾರಿಗಳ ಗಮನ ಇತ್ತ ಹರಿಯಬಹುದು. ಸೌಲಭ್ಯಗಳ ಅಭಿವೃದ್ದಿಗೆ ಮನಸ್ಸು ಮಾಡಿದರೆ ಮುಂದಿನ ಪೀಳಿಗೆಯ ಕ್ರೀಡಾಪಟುಗಳಿಗೆ ಅನುಕೂಲವಾಗುತ್ತದೆ’ ಎಂದೂ ಥಿಯಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.