ನವದೆಹಲಿ: ಭಾರತ ಟೇಬಲ್ ಟೆನಿಸ್ ಫೆಡರೇಷನ್ (ಟಿಟಿಎಫ್‌ಐ) ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಮಣಿಕಾ ಬಾತ್ರಾ ಅವರನ್ನು ನಾಮನಿರ್ದೇಶನ ಮಾಡಿದೆ.
ಹೋದ ವರ್ಷ ಮಣಿಕಾ ಅವರಿಗೆ ಈ ಪುರಸ್ಕಾರ ಕೈತಪ್ಪಿತ್ತು.
24 ವರ್ಷ ವಯಸ್ಸಿನ ಮಣಿಕಾ, 2018ರ ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳಾ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ ಎಂಬ ಹಿರಿಮೆಗೂ ಪಾತ್ರರಾಗಿದ್ದರು. ಆ ಕೂಟದಲ್ಲಿ ಅವರು ಎರಡು ಚಿನ್ನ ಸೇರಿದಂತೆ ಒಟ್ಟು ನಾಲ್ಕು ಪದಕಗಳಿಗೆ ಕೊರಳೊಡ್ಡಿದ್ದರು.
ಅದೇ ವರ್ಷ ಜಕಾರ್ತದಲ್ಲಿ ನಡೆದಿದ್ದ ಏಷ್ಯನ್ ಕ್ರೀಡಾಕೂಟದಲ್ಲಿ ಮಣಿಕಾ ಮತ್ತು ಶರತ್ ಕಮಲ್ ಅವರು ಮಿಶ್ರ ಡಬಲ್ಸ್‌ನಲ್ಲಿ ಕಂಚಿನ ಪದಕ ಜಯಿಸಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದರು.
‘ಖೇಲ್ ರತ್ನ ಗೌರವಕ್ಕೆ ಮಣಿಕಾ, ಅರ್ಹರಾಗಿದ್ದಾರೆ. ಹೀಗಾಗಿಯೇ ಎರಡನೇ ಬಾರಿ ಅವರ ಹೆಸರನ್ನು ಶಿಫಾರಸು ಮಾಡಿದ್ದೇವೆ’ ಎಂದು ಟಿಟಿಎಫ್‌ಐ ಮಹಾ ಕಾರ್ಯದರ್ಶಿ ಎಂ.ಪಿ.ಸಿಂಗ್ ಹೇಳಿದ್ದಾರೆ.
ಅನುಭವಿ ಆಟಗಾರ್ತಿ ಮಧುರಿಕಾ ಪಾಟ್ಕರ್, ಸುತೀರ್ಥ ಮುಖರ್ಜಿ ಹಾಗೂ ಮಾನವ್ ಠಕ್ಕರ್ ಅವರ ಹೆಸರುಗಳನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಸುತೀರ್ಥ ಅವರು ಇತ್ತೀಚೆಗೆ ಬಿಡುಗಡೆಯಾಗಿದ್ದ ಮಹಿಳಾ ಸಿಂಗಲ್ಸ್ ವಿಭಾಗದ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ 100ರೊಳಗೆ ಸ್ಥಾನ ಪಡೆದಿದ್ದರು.
ಕೋಚ್‌ಗಳಾದ ಜಯಂತ ಪುಶಿಲಾಲ್ ಹಾಗೂ ಎಸ್.ರಾಮನ್ ಅವರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.
‘ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಆಗಸ್ಟ್‌ವರೆಗೂ ಅಭ್ಯಾಸ ಶಿಬಿರಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಆಟಗಾರರು ತಿಳಿಸಿದ್ದಾರೆ. ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ’ ಎಂದೂ ಸಿಂಗ್ ನುಡಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.