ಸುರಪುರ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ದೇವರಗೋನಾಲದ ಸಿದ್ಧಾಪುರ ಬಳಿ ಗುರುವಾರ ರಾತ್ರಿ ಟಂಟಂ ಅಟೊ ಮತ್ತು ಕಬ್ಬು ತುಂಬಿದ ಟ್ರ್ಯಾಕ್ಟರ್ ನಡುವೆ ಡಿಕ್ಕಿ ಸಂಭವಿಸಿ ರಾಜ್ಯಮಟ್ಟದ ಇಬ್ಬರು ಕೊಕ್ಕೊ ಆಟಗಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸುರಪುರ ತಾಲ್ಲೂಕಿನ ದೇವರಗೋನಾಲದ ವೆಂಕಟೇಶ ಭಂಟನೂರ (20) ಮತ್ತು ಶಿರಸಿ ತಾಲ್ಲೂಕಿನ ದೇವನಳ್ಳಿಯ ನಾರಾಯಣ ಕೃಷ್ಣ ಮರಾಠೆ(18) ಮೃತರು.
‘ಆಟೊ ಚಾಲಕ ಮಾಳಪ್ಪ ಭಂಟನೂರ, ಕ್ರೀಡಾಪಟು ಯಲ್ಲಪ್ಪ ದೇವದುರ್ಗ ಅವರನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೊದಲ್ಲಿ 7 ಆಟಗಾರರಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ’ ಎಂದು ಸುರಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.
‘ಬುಡಕಟ್ಟು ಸಮುದಾಯದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸುರಪುರದ ವನವಾಸಿ ಕಲ್ಯಾಣ ಸಂಸ್ಥೆಯಲ್ಲಿ ಡಿಸೆಂಬರ್ 23ರಿಂದ ಆರಂಭವಾಗಲಿದ್ದ ತರಬೇತಿ ಶಿಬಿರಕ್ಕೆ ಬಂಟ್ವಾಳ, ಆಂಕೋಲಾ, ಶಿರಸಿಯಿಂದ ಆಟಗಾರರು ಬಂದಿದ್ದರು. ಕೆಲವರು ಸುರಪುರದಲ್ಲಿ ಉಳಿದರೆ, 7 ಮಂದಿ ವೆಂಕಟೇಶ ಜೊತೆಗೆ ಆಟೊದಲ್ಲಿ ದೇವರಗೋನಾಲಕ್ಕೆ ಹೊರಟಿದ್ದರು’ ಎಂದು ತಿಳಿಸಿದ್ದಾರೆ.
‘ತರಬೇತಿ ಬಳಿಕ ಡಿಸೆಂಬರ್ 26ರ ರಾತ್ರಿ ಆಟಗಾರರು ರೈಲು ಮೂಲಕ ಯಾದಗಿರಿಯಿಂದ ಉತ್ತರಪ್ರದೇಶದ ಬಬನಿಗೆ ತೆರಳಿ ಅಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವವರಿದ್ದರು’ ಎಂದು ಮಾಹಿತಿ ನೀಡಿದ್ದಾರೆ.
ಶಿರಸಿಯ ನಾರಾಯಣ ಕೃಷ್ಣ ಕುಟುಂ ಬಕ್ಕೆ ಶಾಸಕ ರಾಜೂಗೌಡ ವೈಯಕ್ತಿಕ ₹ 50 ಸಾವಿರ ಧನ ಸಹಾಯ ನೀಡಿ, ಆಂಬುಲೆನ್ಸ್ ವ್ಯವಸ್ಥೆ ಮಾಡಿದರು. ವೆಂಕಟೇಶ ಅವರ ಅಂತ್ಯಕ್ರಿಯೆ ಶುಕ್ರವಾರ ಸಂಜೆ ಸಂಜೆ ನಡೆಯಿತು.
***
ಘಟನೆ ದುರದೃಷ್ಟಕರ. ಮಧ್ಯರಾತ್ರಿ ವಿಷಯ ತಿಳಿಯಿತು. ಮೈಸೂರಿನಿಂದ ಶುಕ್ರವಾರ ಬೆಳಿಗ್ಗೆ ದೇವರಗೋನಾಲಕ್ಕೆ ಬಂದೆ. ರಾಜ್ಯ ತಂಡವನ್ನು ಉತ್ತರಪ್ರದೇಶಕ್ಕೆ ಕ್ರೀಡಾಕೂಟಕ್ಕೆ ಕಳಿಸುತ್ತಿಲ್ಲ.
-ಆರ್. ಶ್ರೀನಿವಾಸಜಿ, ರಾಜ್ಯ ಸಂಘಟನಾ ಕಾರ್ಯದರ್ಶಿ, ವನವಾಸಿ ಕಲ್ಯಾಣ ಸಂಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.