ಆರ್ಲಿಂಗ್ಟನ್, ಅಮೆರಿಕ: ದಿಗ್ಗಜ ಮೈಕ್ ಟೈಸನ್ ಅವರು ಶುಕ್ರವಾರ ನಡೆದ ಎನ್‌ಎಫ್‌ಎಲ್ ಡಲಾಸ್ ಕೌಬಾಯ್ಸ್ ಬಾಕ್ಸಿಂಗ್‌ನಲ್ಲಿ ಯೂಟ್ಯೂಬರ್ ಜೇಕ್ ಪಾಲ್ ವಿರುದ್ಧ ಪರಾಭವಗೊಂಡಿದ್ದಾರೆ.
27 ವರ್ಷ ವಯಸ್ಸಿನ ಪಾಲ್ ಅವರು 79-73 ಅಂಕಗಳಿಂದ ಹೆವಿವೇಯ್ಟ್ ಐಕಾನ್ ಟೈಸನ್ ವಿರುದ್ಧ ಗೆಲುವು ಸಾಧಿಸಿದ್ದಾರೆ. 2024ರ ಅತಿದೊಡ್ಡ ಬಾಕ್ಸಿಂಗ್ ಫೈಟ್ ಎಂದು ಬಿಂಬಿಸಲಾಗಿದ್ದ ಈ ಹಣಾಹಣಿಯನ್ನು ಕಣ್ತುಂಬಿಕೊಳ್ಳಲು ಟೈಸನ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದರು.
ಟೆಕ್ಸಾಸ್‌ನ ಆರ್ಲಿಂಗ್ಟನ್‌ನಲ್ಲಿರುವ ಎಟಿ ಅಂಡ್ ಟಿ ಕ್ರೀಡಾಂಗಣ ಈ ಐತಿಹಾಸಿಕ ಪಂದ್ಯಕ್ಕೆ ಸಾಕ್ಷಿಯಾಯಿತು. 2005ರ ನಂತರ ಅಖಾಡಕ್ಕೆ ಇಳಿದ 58 ವರ್ಷ ವಯಸ್ಸಿನ ಟೈಸನ್ ಅವರ ಪಂಚ್‌ಗಳು ಲಯ ಕಳೆದುಕೊಂಡ ಕಾರಣ ಪಾಲ್ ಮೇಲುಗೈ ಸಾಧಿಸಿದರು.
ಹೆವಿವೇಯ್ಟ್ ಮಾಜಿ ಚಾಂಪಿಯನ್ ಟೈಸನ್ ಎಂಟು ಸುತ್ತಿನ ಬೌಟ್‌ನ ಮೊದಲೆರಡು ಸುತ್ತುಗಳಲ್ಲಿ ಕಷ್ಟಪಟ್ಟು ಪಂಚ್ ಮಾಡಿದರು. ಆದರೆ, ಪಾಲ್ ಅವರು ಚುರುಕಿನ ಪಾದಚಲನೆಯ ಮೂಲಕ ಮೂರನೇ ಸುತ್ತಿನಲ್ಲೇ ವಿರುದ್ಧ ಪಾಬಲ್ಯ ಮೆರೆದರು. ಎಲ್ಲಾ ಮೂರು ಕಾರ್ಡ್‌ಗಳಲ್ಲಿ ಪಾಲ್ ದೊಡ್ಡ ಅಂತರದಿಂದ ಜಯ ಸಾಧಿಸಿದರು. ಪಂದ್ಯದ ಮುಕ್ತಾಯದ ಬಳಿಕ ಪಾಲ್ ಅವರು ಬಾಕಿಂಗ್ಸ್ ದಂತಕತೆ ಟೈಸನ್ ಅವರಿಗೆ ನಮಸ್ಕರಿಸಿದರು.
19 ವರ್ಷಗಳ ಬಳಿಕ ಸ್ಪರ್ಧೆಗೆ ಮರಳಿದ್ದ ಟೈಸನ್ ಅವರು ಗುರುವಾರ ತೂಕ ಪರೀಕ್ಷೆ ವೇಳೆ ಪಾಲ್ ಅವರಿಗೆ ಕಪಾಳಮೋಕ್ಷ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಸ್ಪರ್ಧೆಗೆ ಇಳಿಯಲು ಟೈಸನ್ ಅವರಿಗೆ ₹169 ಕೋಟಿ ($20 ಮಿಲಿಯನ್) ಪಾವತಿಸಲಾಗಿದೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.