ADVERTISEMENT

Pro Kabaddi: ಅಜಿತ್ ಮಿಂಚು, ಮುಂಬಾಗೆ ರೋಚಕ ಜಯ

ಪ್ರೊ ಕಬಡ್ಡಿ: ದೇವಾಂಕ್ ಹೋರಾಟಕ್ಕೆ ಸಿಗದ ಫಲ, ಪೈರೇಟ್ಸ್ ಪರಾಜಯ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 16:28 IST
Last Updated 6 ನವೆಂಬರ್ 2024, 16:28 IST
ಪಟ್ನಾ ಪೈರೇಟ್ಸ್‌ ರೇಡರ್‌ನನ್ನು ಹಿಡಿಯಲು ಯು ಮುಂಬಾ ಆಟಗಾರರ ಪ್ರಯತ್ನಿಸಿದ್ದು ಹೀಗೆ...
ಪಟ್ನಾ ಪೈರೇಟ್ಸ್‌ ರೇಡರ್‌ನನ್ನು ಹಿಡಿಯಲು ಯು ಮುಂಬಾ ಆಟಗಾರರ ಪ್ರಯತ್ನಿಸಿದ್ದು ಹೀಗೆ...   

ಹೈದರಾಬಾದ್: ತೀವ್ರ ಜಿದ್ದಾಜಿದ್ದಿಯ ಪಂದ್ಯದ ಕೊನೆಯ ಕ್ಷಣಗಳನ್ನು ಸಮರ್ಥವಾಗಿ ನಿಭಾಯಿಸಿದ ಯು-ಮುಂಬಾ ತಂಡ ಎರಡು ಅಂಕಗಳಿಂದ ಪಟ್ನಾ ಪೈರೇಟ್ಸ್ ತಂಡವನ್ನು ಮಣಿಸಿ, ‍ಪ್ರೊ ಕಬಡ್ಡಿ ಲೀಗ್‌ ಟೂರ್ನಿಯಲ್ಲಿ ನಾಲ್ಕನೇ ಜಯ ದಾಖಲಿಸಿತು.

ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಮುಂಬಾ ತಂಡವು 42-40 ಅಂಕಗಳಿಂದ ಪಟ್ನಾ ಪೈರೇಟ್ಸ್ ತಂಡವನ್ನು ಹಣಿಯಿತು. ಪ್ರಬಲ ಪೈಪೋಟಿ ನೀಡಿದ ಪಟ್ನಾ ಹ್ಯಾಟ್ರಿಕ್ ಗೆಲುವಿನ ಅವಕಾಶವನ್ನು ಕಳೆದುಕೊಂಡಿತು. ವಿರಾಮದ ವೇಳೆ ಮುಂಬಾ 24–21ರಲ್ಲಿ ಮುಂದಿತ್ತು.

ಪಂದ್ಯದ ಕೊನೆಯ ನಿಮಿಷದಲ್ಲಿ ಪಟನಾ ತಂಡವನ್ನು ಆಲೌಟ್ ಮಾಡಿದ್ದು, ಮುಂಬಾ ಗೆಲುವಿಗೆ ಸಹಕಾರಿಯಾಯಿತು. ಅದುವರೆಗೂ ಪಟನಾ ಮೇಲುಗೈ ಸಾಧಿಸಿ ಗೆಲುವಿನ ಅಂಚಿನಲ್ಲಿತ್ತು. ಆದರೆ ಅಂತಿಮ ಕ್ಷಣದ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ.

ADVERTISEMENT

ಪಟ್ನಾ ಪರ ರೇಡರ್ ದೇವಾಂಕ್ (15 ಅಂಕ), ಲೆಫ್ಟ್‌ ರೇಡರ್ ಆಯಾನ್ (8 ಅಂಕ) ಮಿಂಚಿದರೆ, ಯು ಮುಂಬಾ ಪರ ಅಜಿತ್ ಚವಾಣ್ (19 ಅಂಕ) ಏಕಾಂಗಿಯಾಗಿ ಹೋರಾಟ ನಡೆಸಿ ಗೆಲುವಿನ ರೂವಾರಿಯೆನಿಸಿದರು. ಐದು ಅಂಕ ಗಳಿಸಿದ ಮಂಜೀತ್ ಗೆಲುವಿಗೆ ಕೊಡುಗೆ ನೀಡಿದರು.

ಮೊದಲಾರ್ಧದ ಜಿದ್ದಾಜಿದ್ದಿನ ಹೋರಾಟದ ನಂತರ ಎರಡೂ ತಂಡಗಳು ಮುನ್ನಡೆಯ ಹಂಬಲದೊಂದಿಗೆ ದ್ವಿತೀಯಾರ್ಧ ಆರಂಭಿಸಿದವು. 20 ರಿಂದ 25 ನಿಮಿಷಗಳ ಅವಧಿಯಲ್ಲಿ ಉಭಯ ತಂಡಗಳು ಹಿಂದಿನ ಮೊತ್ತಕ್ಕೆ ತಲಾ ಮೂರು ಅಂಕಗಳನ್ನು ಸೇರಿಸಿದವು. ಈ ವೇಳೆ ರೇಡಿಂಗ್‌ನಲ್ಲಿ ಅಬ್ಬರಿಸಿದ ಪಟ್ನಾ ತನ್ನ ಹಿನ್ನಡೆಯನ್ನು 26-27ಕ್ಕೆ ತಗ್ಗಿಸಿ ಹೋರಾಟ ನೀಡಿತು. ಹೊಂದಾಣಿಕೆ
ಹಾಗೂ ಕೌಶಲದ ಆಟವಾಡಿದ ಪಟ್ನ 30 ನಿಮಿಷಗಳ ಆಟದ ಅಂತ್ಯಕ್ಕೆ 30-28ರಲ್ಲಿ ಪುಟಿದೆದ್ದಿತು.

ಅಜಿತ್ ಚವಾಣ್ ಅವರ ಮಿಂಚಿನ ರೇಡಿಂಗ್ ಬಲದಿಂದ ಮಾಜಿ ಚಾಂಪಿಯನ್ ಯು ಮುಂಬಾ ತಂಡ ಪಂದ್ಯದ ಮೊದಲಾರ್ಧದ ಮುಕ್ತಾಯಕ್ಕೆ 24-21ರಲ್ಲಿ ಪಟನಾ ಪೈರೇಟ್ಸ್ ವಿರುದ್ಧ ಮುನ್ನಡೆ ಸಾಧಿಸುವಲ್ಲಿ ಯಶ ಕಂಡಿತ್ತು.

ಮುಂಬಾ ತಂಡದ ನಾಯಕ ಹಾಗೂ ಡಿಫೆಂಡರ್, ಎರಡು ಅಂಕ ಕಲೆಹಾಕುವ ಮೂಲಕ ಲೀಗ್‌ನಲ್ಲಿ ಒಟ್ಟಾರೆ 350 ಟ್ಯಾಕಲ್ ಪಾಯಿಂಟ್ಸ್ ಕಲೆಹಾಕಿದ ಮೈಲಿಗಲ್ಲು ಸ್ಥಾಪಿಸಿದರು.

ಗುರುವಾರದ ಪಂದ್ಯಗಳು:

ಬೆಂಗಾಲ್ ವಾರಿಯರ್ಸ್– ದಬಾಂಗ್ ಡೆಲ್ಲಿ (ರಾತ್ರಿ 8.00)

ಹರಿಯಾಣ ಸ್ಟೀಲರ್ಸ್– ಗುಜರಾತ್ ಜೈಂಟ್ಸ್‌ (ರಾತ್ರಿ 9.00)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.